ಆನಂದದ ಉತ್ತುಂಗವನ್ನು ಪರಮಾನಂದ ಅನ್ನುತ್ತೇವೆ. ಅತ್ಯುನ್ನತ ಸಂತುಷ್ಟ ಸ್ಥಿತಿ ಅದು. ಅದು ಉದಯಿಸಬೇಕಾದದ್ದು ನಮ್ಮ ಒಳಗೆಯೇ. ಎಲ್ಲೆಲ್ಲೋ ಹುಡುಕಿದರೆ ಅದು ಸಿಗುವುದಿಲ್ಲ. ನಮ್ಮಲ್ಲಿರುವ ಅಪರಿಮಿತ ಧನವನ್ನು ಕೊಟ್ಟು ಅದನ್ನು ಖರೀದಿಸಿ ತರುವುದಕ್ಕೂ ಆಗುವುದಿಲ್ಲ. ಅದು ಯಾರಿಂದಲೂ ಅನುಗ್ರಹಿತವಾಗಿ ಬರು ವುದೂ ಇಲ್ಲ. ಗಣಿಗಾರ ಹಲವು ವರ್ಷಗಳ ಕಾಲ ಶ್ರಮ ವಹಿಸಿ ಭೂಮಿಯ ಆಳದಿಂದ ಅಮೂಲ್ಯ ಹರಳನ್ನು ಅಗೆದು ತೆಗೆಯುವಂತೆ ಮನಸ್ಸು ಮತ್ತು ದೇಹಗಳನ್ನು ಪ್ರಕೃತಿಯ ಜತೆಗೆ ಶ್ರುತಿಗೊಳಿಸಿ ನಮ್ಮೊಳಕ್ಕೆ ಇಳಿದು ಆ ಪರಮಾನಂದ ಸ್ಥಿತಿಯನ್ನು ಕಂಡುಕೊಳ್ಳಬೇಕು. ನಮ್ಮ ಸಚ್ಚಾರಿತ್ರ್ಯ, ಸೌಶೀಲ್ಯ, ಸತ್ಯಪರ ನಿಲುವು, ಪ್ರಾಮಾಣಿಕತೆ, ಐಹಿಕದಲ್ಲಿದ್ದೂ ಇರದಂತೆ ಬದುಕುವುದು – ಇವೆಲ್ಲ ಆ ಪರಮಾನಂದ ಸ್ಥಿತಿಯನ್ನು ತಲುಪುವುದಕ್ಕೆ ಸಾಧನಗಳು.
ಸೂಫಿ ಸಂತರಲ್ಲೊಬ್ಟಾಕೆಯಾದ ರಬಿಯಾ ಒಂದು ದಿನ ಮುಸ್ಸಂಜೆಯ ಮಬ್ಬುಗತ್ತಲಲ್ಲಿ ತನ್ನ ಗುಡಿಸಲಿನ ಮುಂದೆ ರಸ್ತೆಯಲ್ಲಿ ಬಾಗಿ ಏನನ್ನೋ ಹುಡುಕುತ್ತಿದ್ದಳು. ಸೂರ್ಯ ನಿಧಾನವಾಗಿ ಮುಳುಗು ತ್ತಿದ್ದ, ಕತ್ತಲಿನ ಮುಸುಕು ಆವರಿಸಿಕೊಳ್ಳುತ್ತಿತ್ತು.
ಕೆಲಸ ಮುಗಿಸಿ ಮನೆಯ ಕಡೆಗೆ ಹೊರಟಿದ್ದ ಕೆಲವು ಪಥಿಕರಿಗೆ ರಬಿಯಾಳ ಹುಡುಕಾಟ ಕಂಡಿತು. “ಏನನ್ನೋ ಹುಡುಕುತ್ತಿರುವ ಹಾಗಿದೆ, ಏನದು’ ಎಂದು ಪ್ರಶ್ನಿಸಿದರು. “ನನ್ನ ಸೂಜಿ ಕಳೆದುಹೋಗಿದೆ’ ಎಂದಳಾಕೆ. ಅಷ್ಟರಲ್ಲಿ ಇನ್ನೂ ನಾಲ್ಕಾರು ಮಂದಿ ಸುತ್ತ ಕೂಡಿದ್ದರು. ಗುಂಪಿನಲ್ಲಿ ಒಬ್ಬ ಹೇಳಿದ, “ಕತ್ತಲಾಗುತ್ತಿದೆ. ಸೂಜಿ ಎಲ್ಲಿ ಬಿದ್ದಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ಹುಡುಕಲು ಸಾಧ್ಯ. ಇಲ್ಲವಾದರೆ ಈ ರಸ್ತೆಯಲ್ಲಿ ಎಲ್ಲೆಂದು ಹುಡುಕುವುದು!’
“ಆ ಪ್ರಶ್ನೆ ಕೇಳುವುದು ಸಲ್ಲದು. ನಿಜಕ್ಕಾದರೆ ಸೂಜಿ ಬಿದ್ದಿರುವುದು ನನ್ನ ಗುಡಿಸಲಿನ ಒಳಗೆ’ ಎಂದಳು ರಬಿಯಾ. ಗುಂಪಿನಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕರು. ಗುಂಪಿನ ನಡುವಿನಿಂದ ಒಬ್ಬ ಕೂಗಿ ಹೇಳಿದ, “ರಬಿಯಾ, ನಿನಗೆ ಅರೆಮರುಳು ಎಂದು ಕೇಳಿದ್ದೆ. ಈಗ ಸ್ಪಷ್ಟವಾಯಿತು. ಅಲ್ಲಮ್ಮಾ, ಗುಡಿಸಲಿನ ಒಳಗೆ ಬಿದ್ದ ಸೂಜಿಯನ್ನು ರಸ್ತೆಯಲ್ಲಿ ಹುಡುಕಿದರೆ ಆದೀತೆ!’
“ಆಗದೆ ಏಕೆ! ಗುಡಿಸಲಿನ ಒಳಗೆ ಪೂರ್ಣ ಕತ್ತಲಿದೆ. ಹೊರಗೆ ಕೊಂಚವಾದರೂ ಬೆಳಕಿದೆಯಲ್ಲ’ ರಬಿಯಾಳ ಉತ್ತರ. ಇಷ್ಟರಲ್ಲಿ ಸೇರಿದ್ದವರು ಗಹಗಹಿಸಿ ನಗುತ್ತ ಚೆದುರಲು ಆರಂಭಿಸಿದ್ದರು. ಅಷ್ಟರಲ್ಲಿ ರಬಿಯಾ ಅವರೆಲ್ಲರನ್ನೂ ಕರೆದು ಹೇಳಿದಳು, “ಇಲ್ಲಿ ಕೇಳಿ. ನೀವು ದಿನನಿತ್ಯವೂ ಮಾಡುತ್ತಿರು ವುದನ್ನೇ ನಾನೀಗ ಮಾಡಿದ್ದು. ನೀವು ನೆಮ್ಮದಿಯನ್ನು ಎಲ್ಲೆಲ್ಲೋ ಹುಡುಕುತ್ತೀರಲ್ಲ- ಅದನ್ನು ಕಳೆದುಕೊಂಡದ್ದು ಎಲ್ಲಿ ಎಂಬ ಮೂಲ ಪ್ರಶ್ನೆಯನ್ನೇ ಕೇಳಿಕೊಳ್ಳದೆ? ನೆಮ್ಮದಿ, ಶಾಂತಿ ಕಣ್ಮರೆ ಯಾಗಿರುವುದು ನಿಮ್ಮೊಳಗೆ. ಆದರೆ ನೀವದನ್ನು ಎಲ್ಲೆಲ್ಲೋ ಶೋಧಿಸುತ್ತಿದ್ದೀರಿ. ಅದಕ್ಕೆ ಕಾರಣ ಎಂದರೆ ನಿಮ್ಮ ಕಿವಿ ಹೊರಗಿನದ್ದನ್ನು ಕೇಳಿಸಿ ಕೊಳ್ಳುತ್ತದೆ, ಕಣ್ಣು ಹೊರಗಿನದ್ದನ್ನು ನೋಡುತ್ತದೆ. ನಾಲಗೆ, ಚರ್ಮ, ಮೂಗು – ಇವುಗಳೂ ಬಹಿರ್ಮುಖವಾಗಿಯೇ ಇವೆ.’
ನಾವು ಕೂಡ ಆ ಪಥಿಕರ ಹಾಗೆ ಆತ್ಯಂತಿಕ ಸಂತೋಷಕ್ಕಾಗಿ ಹುಡುಕಾಟ ನಡೆಸುತ್ತಿರು ವುದು ಬಹಿರ್ಮುಖವಾಗಿ! ನಮ್ಮೊಳಗೆ ಕಳೆದುಹೋದ ಪರಮಾನಂದ ಸ್ಥಿತಿಯು ಹೊರಗಡೆ ಶೋಧಿಸಿದರೆ ಸಿಕ್ಕೀತೆ? ಹೀಗಾಗಿ ಹೊರಗಿನ ಹುಡುಕಾಟವನ್ನು ತ್ಯಜಿಸಿ, ಬಹಿರ್ಮುಖವಾಗಿರುವ ಪಂಚೇಂದ್ರಿಯ ಗಳನ್ನು ಅಂತರ್ಮುಖೀ ಶೋಧನೆಗೆ ಉಪಯೋಗಿಸಿಕೊಳ್ಳೋಣ. ದಿನದಲ್ಲಿ ಒಂದಷ್ಟು ಸಮಯ ಇದಕ್ಕೆ ಮೀಸಲಾಗಿರಲಿ. ಆಗ ನಮ್ಮೊಳಗೆ ಇರುವ ಪರಮಾನಂದ ಸ್ಥಿತಿಯ ದರ್ಶನವಾದೀತು.