Advertisement
1920-30ರ ದಶಕದಲ್ಲಿ ಪ್ಲೇಗ್ ಮಹಾಮಾರಿ ಅಬ್ಬರಿಸಿದಾಗಲೂ ಹೀಗೇ ಇತ್ತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಇದಕ್ಕೆ ಹೊರತಾಗಿರಲಿಲ್ಲ. ದೇವನೂರು ಲಕ್ಷ್ಮೀಶ ಕವಿಯ ಊರು. ಇಲ್ಲಿನ ಆರಾಧ್ಯ ದೇವ ಲಕ್ಷ್ಮೀಕಾಂತ. 1933ರಲ್ಲಿ ಅನೇಕರು ಪ್ಲೇಗ್ ಬಂದು ಸತ್ತರು. ಜನರು ಊರನ್ನು ಬಿಟ್ಟು ದೂರದ ತೋಟಗಳಲ್ಲಿ ಶೆಡ್ ಹಾಕಿಕೊಂಡರು. ಊರಿನಲ್ಲಿ ಯಾರೂ ಇಲ್ಲ. ಈ ಊರಿನಲ್ಲಿದ್ದ ಏಕೈಕ ಮುಸ್ಲಿಮ್ ಮನೆ ಮಹಮ್ಮದ್ ಹಯಾತ್ ಸಾಹೇಬ್ ಅವರದ್ದು. ಇವರೂ ಮನೆ ಬಿಟ್ಟು ಹೋಗುವುದೆಂದು ನಿಶ್ಚಯಿಸಿ ಎರಡು ಗಾಡಿಗಳಲ್ಲಿ ಸಾಮಾನುಗಳನ್ನು ತುಂಬಿಸಿ ಬೆಳಗ್ಗಿನ ಜಾವ ಹೊರಡಲು ಹಜಾರದಲ್ಲಿ ಮಲಗಿದ್ದರು.
***
18-20 ವರ್ಷದವರಿದ್ದಾಗ ಚಿಕ್ಕಮಗಳೂರು ಕಡೆ ಬಂದ ಕೇರಳ ಮೂಲದ ಹಯಾತ್ ಸಾಹೇಬರು ದೇವನೂರಿಗೂ ಬಂದರು. ದೊಡ್ಮನೆ ರಾಘವಯ್ಯಂಗಾರ್ ಎನ್ನುವ ಗಣ್ಯರ ಮನೆಯಲ್ಲಿ ದನ ಕಾಯಲು ನಿಯುಕ್ತರಾದರು. ಸಾಹೇಬರಿಗೆ 25 ವರ್ಷವಾಗುವಾಗ ಊರಿನ ಪಟೇಲರು ನಿಧನ ಹೊಂದಿದರು. ಅವರಿಗೆ ಕೇಶವಮೂರ್ತಿ ಎಂಬ ಮಗನಿದ್ದ. ಆದರೆ ಆತನಿನ್ನೂ ಚಿಕ್ಕವ. ಇದೇ ಕಾರಣಕ್ಕೆ ಪಟೇಲ್‌ಗಿರಿಗೆ ಪೈಪೋಟಿ ಬೆಳೆಯಿತು. ಈ ಕಾರಣದಿಂದ ತಮ್ಮ ಮನೆಯಲ್ಲಿದ್ದ ಹಯಾತ್ ಸಾಹೇಬರನ್ನೇ ಪಟೇಲರನ್ನಾಗಿ ಮಾಡಿದರು. ಯುವಕ ಸಾಹೇಬ್ ಕಷ್ಟಪಟ್ಟು ದುಡಿದು ಜಮೀನಾರ ರಾದರು. ದೇವನೂರು ಅಂದರೆ ಪಟೇಲ್ ಹಯಾತ್ ಸಾಹೇಬರ ಊರು ಎಂಬಂತಾಯಿತು. ಲಕ್ಷ್ಮೀಕಾಂತ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಸಮಿತಿಯ ಸಂಚಾಲಕರೂ ಸಾಹೇಬರಾಗಿದ್ದರು. ದೇವಸ್ಥಾನದಲ್ಲಿ ಲಕ್ಷ್ಮೀಶ ಕವಿಯ ಜಯಂತಿ ಉತ್ಸವ ಆಚರಿಸುವಾಗ ರಾಘವಯ್ಯಂಗಾರರೇ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಯಾತ್ ಸಾಹೇಬರಾಗಬೇಕೆಂದು ಕೋರಿದರು. ಎಲ್ಲರೂ ಹಯಾತ್ ಸಾಹೇಬರ ಮನೆಗೆ ಹೋಗಿ ಹೇಳಿದಾಗ “ನನಗೇನು ಗೊತ್ತಾಗುತ್ತಪ್ಪಾ. ನಂಗೆ ರುಜು ಮಾಡೋದು ಬಿಟ್ಟು ಇನ್ನೇನು ಬರಲ್ಲ. ಸಾಹಿತ್ಯ- ಸಭೆ ನನಗೇನು ಗೊತ್ತಾಗತ್ತೆ?’ ಎಂದರು. ಒತ್ತಾಯಿ ಸಿದಾಗ “ಏನಾದ್ರೂ ಕೆಲಸವಿದ್ದರೆ ಹೇಳಿ. ಮಾಡ್ತೀನಿ. ಈ ಕಾವ್ಯ ಗೀವ್ಯಾ ಏನೂ ಅರ್ಥ ಆಗಲ್ಲ’ ಎಂದು ಒಪ್ಪಿಕೊಂಡರು. ದೇವಸ್ಥಾನದಲ್ಲಿ ಮರುದಿನ ನಡೆದ ಸಿದ್ಧತೆ ಸಭೆಗೆ ರಾಘವಯ್ಯಂಗಾರರಿಗೆ, ಪಟೇಲರಾದ ಕಾರಣ ಹಯಾತ್ ಸಾಹೇಬರಿಗೆ ಕುರ್ಚಿ ಹಾಕಲಾಗಿತ್ತು. ವೇದಿಕೆಯ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಹೇಬರು ಒಪ್ಪಲಿಲ್ಲ. ಜಯಂತಿ ಉತ್ಸವಕ್ಕೆ ಸಾಹಿತ್ಯ ದಿಗ್ಗಜರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ ಮೊದಲಾದವರನ್ನು ಕರೆಯಲು ಗಣ್ಯರ ಜತೆ ಸಾಹೇಬರೂ ಹೋಗಿದ್ದರು. ಡಿವಿಜಿಯವರ ಮನೆಗೆ ಹೋದಾಗ ಸಾಹೇಬರ ಭುಜದ ಮೇಲೆ ಕೈಹಾಕಿ “ನಡೆಯುತ್ತಿರುವುದು ಲಕ್ಷ್ಮೀಶ ಜಯಂತಿ. ನಡೆಸಿಕೊಡುತ್ತಿರುವವರು ಮಹಮ್ಮದ್ ಹಯಾತ್ ಸಾಹೇಬ್, ಪರಮೇಶ್ವರ ತೃಪ್ತಿಪಡ್ತಾನೆ. ನನ್ನಂಥೋರು ಬಂದ್ರೆಷ್ಟು? ಬಿಟ್ರೆಷ್ಟು? ಭಗವಂತನಿಗೆ ಮುಟ್ಟುತ್ತೆ ಬಿಡಿ. ಅಷ್ಟೇ ಸಾಕು’ ಎಂದು ಹೇಳಿದ್ದರು.
Advertisement
ಮೂರು ದಿನಗಳ ಕಾರ್ಯಕ್ರಮದಲ್ಲಿ ಕೊನೆಯ ದಿನ ಮಾಸ್ತಿಯವರು ಒಂದು ಹಾರಬೇಕೆಂದು, ಹಯಾತ್ ಸಾಹೇಬರನ್ನು ಕರೆಯಲು ಹೇಳಿದರು. ಸಾಹೇಬರು ಇದಕ್ಕೆಲ್ಲ ಸಿಕ್ಕುವವರಲ್ಲ. ಯಾರೋ ಬಲವಂತವಾಗಿ ವೇದಿಕೆಗೆ ಕರೆತಂದರು. ಮಾಸ್ತಿಯವರು ಸಾಹೇಬರಿಗೆ ಮೆಚ್ಚುಗೆ ಮಾತನ್ನಾಡಿ ಹಾರ ಹಾಕಿದರು. ಹಾರವನ್ನು ತೆಗೆದು “ನೋಡ್ರಪ್ಪ ಇದು ನಮ್ಮೆಲ್ಲರಿಗೂ ಸಿಕ್ಕಿರುವ ಗೌರವ. ಈ ಊರಿಗೆ, ಜನರಿಗೆ ಸಿಕ್ಕಿರುವ ಮರ್ಯಾದೆ’ ಎಂದರು. ಮೊದಲ ದಿನ 600 ರೂ., ಎರಡನೆಯ ದಿನ 1,000 ರೂ., ಮೂರನೆಯ ದಿನ 2,000 ರೂ. ಖರ್ಚು ಆಗಿತ್ತು. ಮೊದಲ ದಿನದ ಖರ್ಚು ಹಯಾತ್ ಸಾಹೇಬರದ್ದು ಎಂದು ಘೋಷಿಸಿದಾಗ ಸಿಟ್ಟುಗೊಂಡು ಕೊನೆಯ ದಿನದ ಖರ್ಚನ್ನು ವಹಿಸಿ ಸಂತೋಷಪಟ್ಟರು.
ದೇವಸ್ಥಾನಕ್ಕೆ ಸಂಬಂಧಿಸಿ ಯಾರೋ ತಗಾದೆ ತೆಗೆದಾಗ ಹಯಾತ್ ಸಾಹೇಬರು ದುಃಖದಿಂದ “ಪ್ಲೇಗ್ ಮಾರಿ ಬಂದಾಗ ನಮ್ಮಪ್ಪ ನನಗೆ ದರ್ಶನ ಕೊಟ್ಟಿದ್ದಾನೆ. ಅನುಗ್ರಹ ಮಾಡಿದ್ದಾನೆ. ಇಂಥ ಭಾಗ್ಯ ಯಾರಿಗಿದೆ ಹೇಳಿ?’ ಎಂದು ಸಾಹಿತ್ಯ ಪರಿಚಾರಕ, ದೇವನೂರಿನಲ್ಲಿ ಶಿಕ್ಷಕರಾಗಿದ್ದ ಬೆಳಗೆರೆ ಕೃಷ್ಣ ಶಾಸಿŒಗಳಲ್ಲಿ ಹೇಳಿದ್ದರು. 90 ವರ್ಷ ಬದುಕಿದ್ದ ಹಯಾತ್ ನಿಧನ ಹೊಂದಿ ಒಂದು ಮಂಡಲ ವರ್ಷ (48 ವರ್ಷ) ಆಗಿವೆ.
-ಮಟಪಾಡಿ ಕುಮಾರಸ್ವಾಮಿ