ಇಂಡಿ: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಸಾವಿರಾರು ರೈತರು ಇಂಡಿ
ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಡಾ| ಪಿ.ರಾಜು ಅವರಿಗೆ
ಮನವಿ ಸಲ್ಲಿಸಿದರು.
ತಾಲೂಕಿನ ಹಿರೇರೂಗಿ, ಬೋಳೆಗಾಂವ, ತಡವಲಗಾ ಹಾಗೂ ಹಂಜಗಿ ಗ್ರಾಮದ ಜಮೀನುಗಳಿಗೆ ಕಾಲುವೆಗಳ
ಮೂಲಕ ನೀರು ಹರಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ
ಸಂಘದ ಹಿರೇರೂಗಿ ಗ್ರಾಮ ಘಟಕ ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಹಿರೇರೂಗಿ ಗ್ರಾಮದ ಪ್ರಮುಖ ವೃತ್ತದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.
ಈ ವೇಳೆ ಬಿಜೆಪಿ ಮುಖಂಡ ದಯಾಸಾಗರ ಪಾಟೀಲ, ಅನಿಲಗೌಡ ಬಿರಾದಾರ, ಶೀಲವಂತ ಉಮರಾಣಿ ಮತ್ತಿತರರು ಮಾತನಾಡಿ, ರೈತರ ಹೋರಾಟದಲ್ಲಿ ಯಾವುದೇ ರಾಜಕೀಯ ಬೆರೆಸುವುದು ಬೇಡ. ಈ ಭಾಗದಲ್ಲಿ ಕಾಲುವೆಗಳಿಗಾಗಿ ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಆದರೆ ಭೂಮಿಯನ್ನು ಕಳೆದುಕೊಂಡರು ಅವರಿಗೆ ಸೂಕ್ತ ಪರಿಹಾರ ನೀಡದಿರುವುದು ವಿಪರ್ಯಾಸ ಸಂಗತಿ.
ಈ ಭಾಗದ ರೈತರು ತಮ್ಮ ಜಮೀನುಗಳಿಗೆ ನೀರು ಬರುತ್ತದೆ ಎಂಬ ನಂಬಿಕೆಯಿಂದ ಭೂಮಿ ಕೊಟ್ಟಿದ್ದಾರೆ. ಇಂದು ಹನಿ ನೀರು ಸಹಿತ ಈ ಗ್ರಾಮಗಳಿಗೆ ತಲುಪಿಸದೆ ಇರುವುದು ನಾಚಿಕೆಗೇಡು. ಇಂಡಿ ತಾಲೂಕಿನಲ್ಲಿ 60 ಕಿ.ಮೀ. ಭೀಮಾನದಿ ಹರಿದರೂ ಬರದ ಬವಣೆ ತಪ್ಪಿಲ್ಲ. ರೈತರು ಇಂದು ನಡೆಸುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ರೈತರ
ಪರವಾದ ಹೋರಾಟಗಳಿಗೆ ಸದಾ ಬೆಂಬಲ ನೀಡುವದಾಗಿ ಹೇಳಿದರು.
ರೈತ ಮುಖಂಡರು ಮಾತನಾಡಿ, ಗುತ್ತಿ ಬಸವಣ್ಣ ಏತ ನೀರಾವರಿ ಮುಖ್ಯ ಕಾಲುವೆ 148 ಕಾಮಗಾರಿ ಪೂರ್ಣಗೊಂಡಿದ್ದು 148 ಕಿ.ಮೀ. ನೀರು ಹರಿಸಬೇಕು. ಆದರೆ ಇನ್ನು ನೀರು ಹರಿಸುತ್ತಿಲ್ಲ. 127ರ ಕಾಲುವೆಯಲ್ಲಿ ಹೂಳು ತುಂಬಿದೆ. ಕಾಟಾಚಾರಕ್ಕೆ ಎನ್ನುವಂತೆ ಕೆಲಸ ಮಾಡಿದ್ದಾರೆ. ರೈತರು ರಾತ್ರಿ ಹೊತ್ತಿನಲ್ಲಿ ಬೆಳೆಗಳಿಗೆ ನೀರು ಉಣಿಸುತ್ತಿದ್ದಾರೆ. ಇದರಿಂದ ಸಾಕಷ್ಟು ರೈತರು ವಿಷ ಜಂತುಗಳ ಕಡಿತದಿಂದ ಸಾವನ್ನಪ್ಪಿದ್ದು ಕೂಡಲೆ ಹೆಸ್ಕಾಂ ಇಲಾಖೆಯವರು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತ್ರೀಫೇಸ್ ವಿದ್ಯುತ್ ವಿತರಣೆ ಮಾಡಬೇಕು. ಬೇಡಿಕೆಗಳು ಈಡೇರಿಸದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅದೃಶ್ಯಪ್ಪ ವಾಲಿ, ಶಿವಯೋಗಿ ರೂಗಿಮಠ, ಜಟ್ಟೆಪ್ಪ ಮರಡಿ, ಜಟ್ಟೆಪ್ಪ ಸಾಲೋಟಗಿ, ಭೀಮುಸುತ್ತಾರ, ತಾಪಂ ಸದಸ್ಯ ಶ್ರೀಶೈಲ ಗಿಣ್ಣಿ, ಶರಣು ಗಿಣ್ಣಿ, ಗುರಪ್ಪ ಅಗಸರ, ಭೀಮು ಉಪ್ಪಾರ, ಜಟ್ಟೆಪ್ಪ ಹಂಜಗಿ, ರಾಜಕುಮಾರ
ತೇಲಿ, ಜಟ್ಟೆಪ್ಪ ನಿಂಬಾಳ ಸೇರಿದಂತೆ ಅನೇಕ ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.