Advertisement

ಬಿರುಗಾಳಿಗೆ ತಡೆ ಒಡ್ಡಬೇಕು !

12:35 PM Jul 23, 2018 | Team Udayavani |

ಮನೆ ವಿನ್ಯಾಸ ಮಾಡುವಾಗ ವಿವಿಧ ಕಾಲದಲ್ಲಿ ಯಾವ ದಿಕ್ಕಿನಿಂದ ಹಾಗೂ ಎಷ್ಟು ಜೋರಾಗಿ ಗಾಳಿ ಬೀಸುತ್ತದೆ ಎಂದು ಪರಿಶೀಲಿಸಿ ನಂತರ ಕಿಟಕಿ ಬಾಗಿಲುಗಳನ್ನು ಇಡುವುದು ಉತ್ತಮ. ನಿಮ್ಮ ಹತ್ತಿರದ ಹವಾಮಾನ ಇಲಾಖೆಯಿಂದ ಗಾಳಿ ಬೀಸುವ ದಿಕ್ಕಿನ ಮಾಹಿತಿ ಪಡೆಯಬಹುದು. ಇಲ್ಲವೇ, ಈಗ ವಿವಿಧ ವೆಬ್‌ ಸೈಟ್‌ಗಳಲ್ಲೂ ಗಾಳಿ ಬೀಸುವ ದಿಕ್ಕಿನ ಮಾಹಿತಿ ದೊರೆಯುತ್ತದೆ. 

Advertisement

ಅತಿಯಾದರೆ ಅಮೃತವೂ ವಿಷವಾಗಿಬಿಡುತ್ತದೆ ಅನ್ನೋದು ಮನೆ ಕಟ್ಟುವ ವಿಚಾರದಲ್ಲಿ ಸುಳ್ಳಲ್ಲ. ಗಾಳಿಯನ್ನೇ ತಗೊಳ್ಳಿ. ಅದಿಲ್ಲದೆ ಜೀವಿಸಲು ಆಗುವುದೇ ಇಲ್ಲ ಎನ್ನುವುದು ನಿಜವಾದರೂ, ಬಿಡುವಿಲ್ಲದೇ ಧೋ ಎಂದು ಬೀಸುವ ಗಾಳಿ ಕೆಲ ನಿಮಿಷಗಳಲ್ಲೇ ಸುಸ್ತು ಹೊಡೆಸುವುದಂತೂ ನಿಜ. ಆಷಾಢದಲ್ಲಿ ನಿಲ್ಲದೆ ಬೀಸುವ ಗಾಳಿ ಕೆಲಕಾಲ ನಿಂತರೂ ನಮಗೆ ಸೆಖೆಯ ಅನುಭವ ಆಗುವುದೂ ಇದ್ದದ್ದೇ! ಹೀಗಾಗಲು ಮುಖ್ಯ ಕಾರಣ- ಈ ಅವಧಿಯಲ್ಲಿ ಮಳೆ ಹೊತ್ತು ಬರುವ ಗಾಳಿಯಲ್ಲಿನ ಅತ್ಯಧಿಕ ತೇವಾಂಶ.  ಹೇಳಿಕೇಳಿ ಇದು ಬೇಸಿಗೆಯ ಮಳೆಗಾಲ.  ಹಾಗಾಗಿ ಬಿಸಿಲಿನಿಂದ ಸಮುದ್ರದ ನೀರು ಆವಿಯಾಗಿ ಮೇಲೆದ್ದು ಗಾಳಿಯಲ್ಲಿನ ತೇವಾಂಶದ ಭಾರ ಹೊರಲಾಗದಿದ್ದಾಗ ಕೆಳಗೆ ಬೀಳುವ ಮಳೆ ನಮಗೆಲ್ಲ ಜೀವದಾಯಕ. ಬಿಟ್ಟೂ ಬಿಡದೆ ಬೀಸುವ ಬಿರುಗಾಳಿಗೆ ನಾವು ಈ ಅವಧಿಯಲ್ಲಿ ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೆ, ಮಳೆಗಾಲದ ಮಾಮೂಲಿ ಸಮಸ್ಯೆಗಳಿಂದ ಪಾರಾಗಬಹುದು.

ಗಾಳಿಯ ಒಳ ಹರಿವನ್ನು ಕಡಿತಗೊಳಿಸಿ
ಬಾಟಲಿಯೊಳಗೆ ನೇರವಾಗಿ ಊದಲು ಆಗುವುದಿಲ್ಲ, ಏಕೆಂದರೆ ಅದಕ್ಕಿರುವ ಒಂದು ಮಾರ್ಗದಿಂದ ಗಾಳಿ ಒಳಹೊಕ್ಕರೆ ಹೊರಗೆ ಹೋಗಲು ಆಗದಿರುವ ಕಾರಣ, ಎಷ್ಟು ಜೋರಾಗಿ ಊದುತ್ತೀವೋ ಅಷ್ಟೇ ಜೋರಾಗಿ ಅದು ತಡೆಯುವ ಕಾರಣ ನಮ್ಮ ಶ್ರಮ ವ್ಯರ್ಥ ಅಗುತ್ತದೆ. ಅದೇ ರೀತಿಯಲ್ಲಿ ನಿಮ್ಮ ಮನೆಗೆ ಕಿಟಕಿಗಳು ಎದುರು ಬದುರಾಗಿದ್ದರೆ, ಒಂದು ಕಡೆಯಿಂದ ಪ್ರವೇಶಿಸುವ ಗಾಳಿ ಮತ್ತೂಂದು ಕಡೆಯಿಂದ ಸುಲಭದಲ್ಲಿ ರಭಸವಾಗಿ ಹೋಗುವಂತಿದ್ದರೆ, ಜೋರು ಗಾಳಿ ಕಾಲದಲ್ಲಿ ಹಾವಳಿ ಇದ್ದೇ ಇರುತ್ತದೆ. ಆದುದರಿಂದ ಎದುರು ಬದುರು ಇರುವ ಕಿಟಕಿಗಳಲ್ಲಿ ಒಂದನ್ನು ಮುಚ್ಚಿದರೆ, ಸಾಕಷ್ಟು ಶುದ್ಧ ಗಾಳಿಯ ಪ್ರವೇಶ ಸಾಧ್ಯವಾದರೂ ಜೋರು ಗಾಳಿ ಒಳನುಸುಳಲು ಆಗುವುದಿಲ್ಲ. 

ಮನೆ ವಿನ್ಯಾಸ ಮಾಡುವಾಗ ವಿವಿಧ ಕಾಲದಲ್ಲಿ ಯಾವ ದಿಕ್ಕಿನಿಂದ ಹಾಗೂ ಎಷ್ಟು ಜೋರಾಗಿ ಗಾಳಿ ಬೀಸುತ್ತದೆ ಎಂದು ಪರಿಶೀಲಿಸಿ ನಂತರ ಕಿಟಕಿ ಬಾಗಿಲುಗಳನ್ನು ಇಡುವುದು ಉತ್ತಮ. ನಿಮ್ಮ ಹತ್ತಿರದ ಹವಾಮಾನ ಇಲಾಖೆಯಿಂದ ಗಾಳಿ ಬೀಸುವ ದಿಕ್ಕಿನ ಮಾಹಿತಿ ಪಡೆಯಬಹುದು. ಇಲ್ಲವೇ, ಈಗ ವಿವಿಧ ವೆಬ್‌ ಸೈಟ್‌ಗಳಲ್ಲೂ ಗಾಳಿ ಬೀಸುವ ದಿಕ್ಕಿನ ಮಾಹಿತಿ ದೊರೆಯುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ- ಬೇಸಿಗೆಯಲ್ಲಿ ಎಷ್ಟು ಬೇಕಾದರೂ ಗಾಳಿ ಬೀಸಿದರೂ ಪರವಾಗಿಲ್ಲ ಎಂದೆನಿಸಿದರೂ, ಇತರೆ ಕಾಲದಲ್ಲಿ ಸ್ವಲ್ಪ ಥಂಡಿ ಅನ್ನಿಸಿದರೂ ಗಾಳಿಯ ಜೋರು ಹರಿವು ಬೇಡವಾಗುತ್ತದೆ. ಬೇಸಿಗೆಯ ಮಳೆ, ಅಂದರೆ ಮುಂಗಾರಿನ ಕಾಲದಲ್ಲಿ ನಮಗೆ ಸ್ವಲ್ಪವಾದರೂ ಗಾಳಿಯ ಒಳಹರಿವು ಬೇಕಾಗುತ್ತದೆ. ಆದುದರಿಂದ ನಾವು ಮನೆಯ ಪ್ಲಾನ್‌ ಮಾಡುವಾಗ ತೆರೆಯಬಹುದಾದ ಕಿಟಕಿಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ, ತಕ್ಕಷ್ಟು ಅಂದರೆ ಒಂದೆರಡು ಇಂಚು ಮಾತ್ರ ತೆರೆದಿಟ್ಟುಕೊಂಡರೆ, ಅಗಲ ಕಡಿಮೆ ಇರುವುದರಿಂದ, ಇಲ್ಲಿ ಪ್ರವೇಶಿಸುವ ಗಾಳಿ ನಮಗೆ ಹೆಚ್ಚು ಉಪಟಳ ಮಾಡುವುದಿಲ್ಲ. ಈ ರೀತಿಯಾಗಿ ನಾವು ಸುಲಭದಲ್ಲಿ ಜೋರು ಗಾಳಿಯಿಂದ ಮುಕ್ತಿ ಪಡೆಯಬಹುದು.

ಜೋರು ಗಾಳಿಗೆ ಗಾಜುಗಳ ಒಡೆತ
ಗಾಜು ಹಾಕಿದ ಕಿಟಕಿಗಳನ್ನು ನಿಲ್ಲಿಸುವ ಅಥವ ಸ್ತಬ್ಧವಾಗಿಸುವ ಹಿಡಿಗಳನ್ನು ಅಳವಡಿಸುವ ಮೂಲಕ ನಮಗೆ ಬೇಕಾದಷ್ಟು ಮಾತ್ರ ತೆರೆದುಕೊಂಡು ಅಲ್ಲೇ ಇರುವಂತೆ ಮಾಡಬೇಕು. ಇಲ್ಲದಿದ್ದರೆ ತೆರೆದ ಕಿಟಕಿಗಳು ಗಾಳಿ ಜೋರಾಗಿ ಬೀಸಿದರೆ, ಕಿಟಕಿ ಬಾಗಿಲು ಟಪಾರ್‌ ಎಂದು ಮುಚ್ಚಿಕೊಂಡರೆ ಅದಕ್ಕೆ ಹಾಕಿದ ಗಾಜು ಒಡೆಯಬಹುದು. ಕಿಟಕಿಗಳು ಮರದ್ದೇ ಇರಲಿ ಇಲ್ಲವೇ ಸ್ಟೀಲ್‌ನವೇ ಆಗಿರಲಿ, ಅದಕ್ಕೆ ವಿವಿಧ ಕೋನಗಳಲ್ಲಿ ಕಿಟಕಿಯನ್ನು ತೆರೆದಿಡಬಹುದಾದ, “ಬಾಗಿಲುಗಳು’ ನಿರ್ದಿಷ್ಟ ಕೋನದಲ್ಲಿ ಫಿಕ್ಸ್‌ ಆಗುವಂತೆ ಸ್ಟೇಗಳನ್ನು ಹಾಕುವುದು ಅತ್ಯಗತ್ಯ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಯುಪಿಸಿ- ಪ್ಲಾಸ್ಟಿಕ್‌ ಹಾಗೂ ಅಲ್ಯುಮೀನಿಯಂ ಕಿಟಕಿಗಳಲ್ಲಿ ಸುಧಾರಿತ ಕೀಲು ವ್ಯವಸ್ಥೆ ಇರುವುದರಿಂದ, ಈ ಮಾದರಿಯವನ್ನು ಯಾವ ಕೋನದಲ್ಲಿ ಬೇಕಾದರೂ ಸುಲಭದಲ್ಲಿ ನಿಲ್ಲಿಸಬಹುದು ಹಾಗೂ ಇವು ಗಾಳಿಗೆ    ಜೋರಾಗಿ ಹೊಡೆದುಕೊಳ್ಳುವುದೂ ಇಲ್ಲ!

Advertisement

ಅಕ್ಕ ಪಕ್ಕ ಕಿಟಕಿಗಳಿದ್ದರೆ
ಮನೆಗಳಿಗೆ ಸಾಮಾನ್ಯವಾ ಕ್ರಾಸ್‌ ವೆಂಟಿಲೇಷನ್‌ ಇರಲಿ ಎಂದು ಅಕ್ಕಪಕ್ಕದ ಗೋಡೆಗಳಿಗೆ ಕಿಟಕಿಗಳನ್ನು ಅಳವಡಿಸಲಾಗುತ್ತದೆ. ಒಂದು ಕಿಟಕಿ ದಕ್ಷಿಣಕ್ಕೆ ಇದ್ದು ಮತ್ತೂಂದು ಪೂರ್ವಕ್ಕೆ ಇದ್ದರೆ- ಈ ಕಾಲದಲ್ಲಿ ಬೀಸುವ ಜೋರು ಗಾಳಿ ದಕ್ಷಿಣದಿಂದ ಹೊಕ್ಕು ಪೂರ್ವದ ಕಡೆಗೆ ಹೊರಳುವಾಗ ಮನೆಯೊಳಗಿನ ವಸ್ತುಗಳನ್ನು ತಳ್ಳಲೂ ಬಹುದು. ಆದುದರಿಂದ ಈ ಅವಧಿಯಲ್ಲಿ ಪೂರ್ವದ ಕಿಟಕಿಯನ್ನು ತೆರೆದಿಟ್ಟರೆ ಪ್ಯಾಸೀವ್‌ ವೆಂಟಿಲೇಷನ್‌- ತಂತಾನೇ ಆಗುವ ಗಾಳಿಯ ಹರಿವಾಗಿ ಜೋರು ಗಾಳಿಯಿಂದ ರಕ್ಷಣೆ ಪಡೆಯಬಹುದು. ಜೋರು ಗಾಳಿ ಬೀಸುವ ಕಿಟಕಿಯನ್ನು ಈ ಅವಧಿಯಲ್ಲಿ ಮುಚ್ಚಿಟ್ಟರೆ ಅನುಕೂಲಕರ. ಬಿರುಬೇಸಿಗೆಯಲ್ಲೂ ನಮಗೆ ದಕ್ಷಿಣದಿಂದ ಗಾಳಿ ಬೀಸುವ ಕಾರಣ, ಆ ಅವಧಿಯಲ್ಲಿ ಈ ದಿಕ್ಕಿನ ಕಿಟಕಿಗಳನ್ನು ಧಾರಾಳವಾಗಿ ತೆರೆದಿಟ್ಟುಕೊಳ್ಳಬಹುದು.

ಕಲಾತ್ಮಕ ಕಿಟಕಿಗಳು
ಇತ್ತೀಚಿನ ದಿನಗಳಲ್ಲಿ ಕಿಟಕಿಗಳನ್ನು ವಿವಿಧ ನಮೂನೆಗಳಲ್ಲಿ ಹಾಗೂ ಸುಂದರವಾಗಿ ವಿನ್ಯಾಸ ಮಾಡಲಾಗುತ್ತದೆ. ಕಂಪ್ಯೂಟರ್‌ ಕಟ್ಟಿಂಗ್‌ ಬಂದಮೇಲಂತೂ ನಮಗಿಷ್ಟವಾದ ರೀತಿಯಲ್ಲಿ ವಿವಿಧ ವಸ್ತುಗಳನ್ನು ಕಲಾತ್ಮಕವಾಗಿ 
ಕತ್ತರಿಸುವುದು ಸ್ವಲ್ಪ ದುಬಾರಿ ಆದರೂ ಶೀಘ್ರವಾಗಿ ಆಗುವುದರಿಂದ ವಿನ್ಯಾಸಗಳ ವೈವಿಧ್ಯತೆ ಹೆಚ್ಚಿದೆ. ಮಾಮೂಲಿ ಕಿಟಕಿಗಳ ಬದಲಾಗಿ ಜಾಲಿ – ಮಾದರಿಯಲ್ಲಿ ಕೊರೆದ ಪದರಗಳನ್ನು ಅಳವಡಿಸುವುದು ಜನಪ್ರಿಯವಾಗುತ್ತಿದೆ. ಕಿಟಕಿಗಳನ್ನು ಸಂಪೂರ್ಣವಾಗಿ ತೆರೆದಿಡುವ ಬದಲು ಒಂದು ಭಾಗದಲ್ಲಿ ಜಾಲಿ ವರ್ಕ್‌ ಮಾಡಿಸಿದರೆ, ನಮಗೆ ಸಾಕಷ್ಟು ಖಾಸಗೀತನ ಒದಗಿಸುವುದರ ಜೊತೆಗೆ ಜೋರು ಗಾಳಿಯ ಹೊಡೆತವನ್ನೂ ಇವು ತಡೆಯಬಲ್ಲವು.

ಈಗಾಗಲೇ ಮನೆ ಕಟ್ಟಿದ್ದರೆ
ಜೋರುಗಾಳಿ ಯಾವ ದಿಕ್ಕಿನಿಂದ ಬೀಸಿ ಉಪಟಳ ಉಂಟುಮಾಡುತ್ತಿದೆ ಎಂದು ಗುರುತಿಸಿ, ಕೆಲವೊಮ್ಮೆ ಮನೆಯ ಅಕ್ಕ ಪಕ್ಕ ಇರುವ ತೆರೆದ ಸ್ಥಳಗಳಲ್ಲಿ – ಟನಲ್ಲಿಂಗ್‌ ಅಂದರೆ ಗಣಿಯ ಕೊಳವೆಯಲ್ಲಿ ಪ್ರವೇಶಿಸುವಂತೆ ಗಾಳಿ ಒಳಹೊಕ್ಕು ನಂತರ ಕಿಟಕಿಗಳ ಮೂಲಕ ಮನೆಯನ್ನು ಪ್ರವೇಶಿಸಿ ನಂತರ ಅಡ್ಡಾದಿಡ್ಡಿಯಾಗಿ ಸುಂಟರ ಗಾಳಿಯಂತೆ  ತಿರುಗಿ ಉಪಟಳ ಮಾಡಬಹುದು. ಇಂಥ ಸಂದರ್ಭದಲ್ಲಿ ಹೆಚ್ಚು ಗಾಳಿ ಪ್ರವೇಶಿಸುವ ಕಿಟಕಿಗೆ ಒಂದು ಕಲಾತ್ಮಕವಾಗಿ ಕಡೆದ ಉಕ್ಕಿನ ಇಲ್ಲವೆ ಸ್ಟೈನ್‌ಲೆಸ್‌ ಸ್ಟೀಲಿನ ಸ್ಕ್ರೀನ್‌ ಅನ್ನು ಅಳವಡಿಸುವುದರ ಮೂಲಕ ಗಾಳಿಯ ಒಳಹರಿವಿಗೆ ನಿಯಂತ್ರಣ ಒಡ್ಡಿ ಎಷ್ಟು ಬೇಕೋ ಅಷ್ಟು ಮಾತ್ರ ಗಾಳಿಯನ್ನು ಒಳಬಿಟ್ಟುಕೊಳ್ಳಬಹುದು. ಈ ಮಾದರಿಯ ಕಲಾತ್ಮಕ ಸ್ಕ್ರೀನುಗಳು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಜೋರು ಗಾಳಿಗೆ ಒಂದು ಮಾದರಿಯ ಸ್ಪೀಡ್‌ ಬ್ರೇಕರ್ ರೀತಿ ಕಾರ್ಯ ನಿರ್ವಹಿಸುತ್ತವೆ.

ಹೆಚ್ಚಿನ ಮಾಹಿತಿಗೆ: 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next