Advertisement

ನಿರಾಶೆ ಅನಗತ್ಯ; ವಿಪಕ್ಷಗಳ ವಿತ್ತ ಟೀಕೆಗಳಿಗೆ ಮೋದಿ ತಿರುಗೇಟು

06:00 AM Oct 05, 2017 | Team Udayavani |

ನವದೆಹಲಿ: ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಯಾವುದೇ ಕಾರಣಕ್ಕೂ ಹದಗೆಡಲು ಅವಕಾಶವನ್ನೂ ನೀಡುವುದಿಲ್ಲ. ತ್ತೈಮಾಸಿಕ ವರದಿಯಂತೆ ದೇಶಿ ಉತ್ಪನ್ನ ಕ್ಷೇತ್ರದಲ್ಲಿ ಕುಸಿತ ಆಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಆರ್ಥಿಕಾಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ,’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಾಕಾರರಿಗೆ ಖಡಕ್‌ ಉತ್ತರ ನೀಡಿದ್ದಾರೆ.

Advertisement

ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಭಾರತೀಯ ಇನ್‌ಸ್ಟಿಟ್ಯೂಟ್‌ ಆಫ್ ಕಂಪನಿ ಸೆಕ್ರೆಟರೀಸ್‌ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಜಿಡಿಪಿ ಕುಸಿತದಿಂದ ದೇಶದಲ್ಲಿ ಭಾರಿ ಅನಾಹುತವೇ ಆಗಿಹೋಯಿತೆನ್ನುವಂತೆ ಟೀಕಿಸುತ್ತಿರುವ ವಿಪಕ್ಷಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ತಮ್ಮ ಎಂದಿನ ಭಾಷಣಕ್ಕಿಂತ ಕೊಂಚ ಭಿನ್ನ ಧಾಟಿಯಲ್ಲಿ ಟೀಕಾಕಾರರನ್ನು ಲೇವಡಿ ಮಾಡಿದರು. ಆರ್ಥಿಕ ಸ್ಥಿತಿಯಲ್ಲಾಗಿರುವ ಏರಿಳಿತ ಹಾಗೂ ಎನ್‌ಡಿಎ ಸರ್ಕಾರದ ಕ್ರಮಗಳನ್ನು ಬಲವಾಗಿಯೇ ಸಮರ್ಥಿಸಿಕೊಂಡರು.

ಯುಪಿಎ ಸರ್ಕಾರದ ಕಾಲಾವಧಿಯ ದತ್ತಾಂಶಗಳಿಗೆ ಹೋಲಿಕೆ ಮಾಡುವ ಮೂಲಕ ದಾಖಲೆ ಸಮೇತ ನಿರರ್ಗಳವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ, “”ಕೆಲವರಿಗೆ ನಮ್ಮ ಬಗ್ಗೆ ನಿರಾಶೆ ವ್ಯಕ್ತಪಡಿಸದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಅಂಥವರನ್ನು ನಾವು ಗುರುತಿಸಬೇಕು. ಅಷ್ಟಕ್ಕೂ ಜಿಡಿಪಿ ಕುಸಿತ ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಕುಸಿತ ಕಂಡಿದೆ. ಯುಪಿಎ ಸರ್ಕಾರದ ಕಾಲಾವಧಿಯಲ್ಲಿ, ಎಂಟು ಬಾರಿ ಜಿಡಿಪಿ ಕುಸಿತ ಕಂಡಿತ್ತು. 5.7%ಕ್ಕೆ ಕುಸಿದುಬಿದ್ದಿರುವುದನ್ನೂ ನೋಡಿದ್ದೇವೆ. ಆದರೆ ಕಳೆದ ಎರಡು ತ್ತೈಮಾಸಿಕ ವರದಿಯಲ್ಲಿನ ಕುಸಿತದ ಬಗ್ಗೆ ಕೆಲವರು ಖುಷಿಪಟ್ಟು, ಟೀಕಿಸುತ್ತಾರೆ. ಆದರೆ ಅಂದು ಬಿಜೆಪಿ ಸರ್ಕಾರ ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯುಪಿಎ ಅವಧಿಯಲ್ಲೇ ಅಲ್ಲವೆ ಶೇ.10 ರಷ್ಟು ಹಣದುಬ್ಬರ ಇಳಿಕೆಯಾಗಿದ್ದು. ಆದರೆ ಈಗ ಏಪ್ರಿಲ್‌-ಜೂನ್‌ನ ಬೆಳವಣಿಗೆ ಶೇ.5.7ಕ್ಕಿಂತ ಕೆಳಕ್ಕೆ ಕುಸಿದು ಪ್ರಳಯವೇ ಆಗಿಹೋಯಿತೆನ್ನುವಂತೆ ಮಾತನಾಡುತ್ತಿದ್ದಾರೆ ಎಂದು ಚಟಾಕಿ ಹಾರಿಸಿದರು.

ಸಿನ್ಹಾಗೆ ತಿರುಗೇಟು
ತಮ್ಮದೇ ಪಕ್ಷದ ನಾಯಕ ಯಶವಂತ್‌ ಸಿನ್ಹಾ ಹೇಳಿಕೆಗೂ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “”ಸರ್ಕಾರ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಸೂಕ್ತ ಕ್ರಮವನ್ನೂ ತೆಗೆದುಕೊಳ್ಳಲಿದ್ದೇವೆ” ಎಂದಿದ್ದಾರೆ. “ನಾನೀಗ ಮಾತನಾಡಬೇಕಾಗಿದೆ’ ಎಂಬ ಶೀರ್ಷಿಕೆ ನೀಡಿ ಲೇಖನ ಬರೆದಿದ್ದ ಸಿನ್ಹಾ “ಆರ್ಥಿಕತೆ ಅದೆಷ್ಟು ಅಸ್ತವ್ಯಸ್ತಗೊಂಡಿದೆ ಎಂದರೆ, ಮುಂದಿನ ಚುನಾವಣೆ ನಡೆಯುವಷ್ಟರಲ್ಲಿ ಚೇತರಿಸಿಕೊಳ್ಳುವ ಲಕ್ಷಣವೇ ಇಲ್ಲ’ ಎಂದು ಹೇಳಿದ್ದರು.

ಜಿಎಸ್‌ಟಿ ಲೋಪ ಸರಿಪಡಿಸುತ್ತೇವೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಸಣ್ಣ ಮತ್ತು ಮಧ್ಯಮದ ಉದ್ಯಮ ಕ್ಷೇತ್ರಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳು ಹಾಗೂ ಅಡಚಣೆಗಳನ್ನು ಜಿಎಸ್‌ಟಿ ಕೌನ್ಸಿಲ್‌ ಗುರುತಿಸಿಕೊಳ್ಳುತ್ತಿದೆ. ಈ ಬಗ್ಗೆ ನಿರ್ದೇಶನ ನೀಡಲಾಗಿದ್ದು, ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ಯಾವುದೇ ಕ್ಷೇತ್ರದ ಉದ್ಯಮಿಗಳೂ ಆತಂಕಪಡಬೇಕಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ಇದೇ ವೇಳೆ ಶಂಕಿತ ಶೆಲ್‌ ಕಂಪನಿಗಳನ್ನು ಪತ್ತೆ ಮಾಡಲಾಗಿದ್ದು, ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Advertisement

ಮೋದಿ ಮಾತಿಗೆ ಯೆಚೂರಿ ಚಾಟಿ
“ಮುಂದಿನ ತ್ತೈಮಾಸಿಕದಲ್ಲಿ ಆರ್ಥಿಕ ಪ್ರಗತಿ 7.7%ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ನಿರೀಕ್ಷಿಸುತ್ತಿದೆ ಮತ್ತು ಕಳೆದ ಆರು ಸಂದರ್ಭಗಳಲ್ಲಿ ಕುಸಿತ ಕಂಡಿಲ್ಲ’ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಇದಕ್ಕೆ ಟ್ವಿಟರ್‌ನಲ್ಲಿ ಕಟುವಾದ ಪ್ರತಿಕ್ರಿಯಿಸಿರುವ ಸಿಪಿಎಂ ನಾಯಕ ಸೀತಾರಾಂ ಯೆಚೂರಿ, “”ಮೋದಿ ಆರ್‌ಬಿಐ ನೀಡಿದ ಮಾಹಿತಿಯನ್ನು ತಪ್ಪಾಗಿ ಹೇಳಿ, ಘನತೆಗೆ ಧಕ್ಕೆ ತರುತ್ತಿದ್ದಾರೆ. ಅಷ್ಟಕ್ಕೂ ಕಳೆದ ಆರು ತ್ತೈಮಾಸಿಕ ಅವಧಿಯಲ್ಲೂ ಆರ್ಥಿಕ ಪ್ರಗತಿ ಕುಸಿತ ಕಾಣುತ್ತಲೇ ಇದೆ, ಒಂದು ತ್ತೈಮಾಸಿಕದಲ್ಲಿ ಅಲ್ಲ” ಎಂದಿದ್ದಾರೆ.

ನಾನು ಅರ್ಥಶಾಸ್ತ್ರಜ್ಞ ಅಲ್ಲ. ಹಾಗೆಂದು ಯಾವತ್ತೂ ಹೇಳಿಕೊಂಡೂ ಇಲ್ಲ. ಆದರೆ ಮೂರು ವರ್ಷದ ಕಾಲಾವಧಿಯಲ್ಲಿ ಆರ್ಥಿಕ ಪ್ರಗತಿಯು ಶೇ.7.5 ರಷ್ಟು ಸಾಧಿಸಿದ ಮೇಲೆ ಈಗ ಇಳಿಮುಖವಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ

ಆರ್ಥಿಕ ಸುಧಾರಣೆಗಳ ಪ್ರಕ್ರಿಯೆ ಇನ್ನೂ ಅಪೂರ್ಣವಾಗಿದೆ. ದೇಶದ ಸಾಮಾಜಿಕ ಹಾಗೂ ಆರ್ಥಿಕ ನೀತಿಯಲ್ಲಿನ ಪ್ರಗತಿ
ಬದಲಾವಣೆಗೆ ಹೊಸ ಹೊಸ ಆಲೋಚನೆ ಗಳ ಅಗತ್ಯವಿದೆ.

– ಮನಮೋಹನ್‌ಸಿಂಗ್‌ ಮಾಜಿ ಪ್ರಧಾನಿ 

 

Advertisement

Udayavani is now on Telegram. Click here to join our channel and stay updated with the latest news.

Next