ಗುಡಿಬಂಡೆ: ಪಟ್ಟಣದ ಹೃದಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಸುರಸದ್ಮಗಿರಿ ಬೆಟ್ಟ ಸೂಕ್ತ ನಿರ್ವಹಣೆ ಇಲ್ಲದೆ ಅವನತಿಯ ಅಂಚಿಗೆ ತಲುಪಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿಬೆಟ್ಟ ನಂತರ ಅತಿಎತ್ತರದ ಬೆಟ್ಟ ಸುರಸದ್ಮಗಿರಿ.
16ನೇ ಶತಮಾನದಲ್ಲಿ ಪಾಳೇಗಾರ ಹಾವಳಿಬೈರೇಗೌಡ ಈ ಬೆಟ್ಟವನ್ನು ನಿರ್ಮಿಸಿದ್ದು, ಭವ್ಯವಾದ ಏಳು ಸುತ್ತಿನಕೋಟೆ, ವಿಶಿಷ್ಟ ಕಲಾಕೃತಿ ಹೊಂದಿರುವ ಪ್ರವೇಶ ದ್ವಾರಗಳು, ಸ್ವಾಗತ ಕಮಾನು, ಕಾವಲು ಗುಮ್ಮಟಗಳು, ಎತ್ತರದ ಬುರಜು ಗಳು, ಕಾವಲು ಕೋಣೆಗಳು, ವಿಶ್ರಾಂತಿ ಗೃಹಗಳು, ಕಾರಾಗೃಹಗಳು, ಹತ್ತಕ್ಕೂ ಹೆಚ್ಚು ನೀರಿನ ಕೊಳಗಳನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ:- ಚಳಿಗಾಳಿ ತಾಳಲಾರದೇ ನಿಲ್ದಾಣದಲ್ಲಿ ಭಿಕ್ಷುಕ ಸಾವು ..!
ಇದರ ಜೊತೆಗೆ ಪಾರ್ವತಿ, ರಾಮಲಿಂಗೇಶ್ವರ ಸ್ವಾಮಿ ದೇಗುಲವನ್ನೂ ನಿರ್ಮಾಣ ಮಾಡಿದ್ದಾರೆ. ಇಂತಹ ಗತಐತಿಹಾಸಿಕ ಸ್ಮಾರಕಗಳುಳ್ಳ ಕೋಟೆ ಗಿಡಗಂಟಿಗಳಿಂದ ಆವರಿಸಿ, ಮಳೆ ಗಾಳಿಗೆ ಮೈಯೊಡ್ಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಆಗಬೇಕಾಗಿದ್ದ ಸ್ಮಾರಕ ಇಂದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ, ಬೆಟ್ಟ ಹತ್ತುವ ಮಾರ್ಗವೆಲ್ಲ ಗಿಡಗಂಟಿಗಳಿಂದ ಮುಚ್ಚಿಹೋಗಿದೆ.
ವಿದ್ಯುತ್ ದೀಪ ಕಳ್ಳರ ಪಾಲು: ಎಡಬಿಡದೆ ಬೀಳುತ್ತಿರುವ ಮಳೆಯಿಂದಾಗಿ ಕೋಟೆಯ ಎತ್ತರದ ಬುರುಜುಗಳು ಒಂದೊಂದಾಗಿ ಬಿದ್ದು ನೆಲಕಚ್ಚು ತ್ತಿದ್ದರೆ, ಕೋಟೆ ದ್ವಾರಗಳು ಕುಸಿಯುತ್ತಿವೆ, ಈ ಹಿಂದೆ ಪಪಂನಿಂದ ಲಕ್ಷಾಂತರ ರೂ. ಖರ್ಚು ಮಾಡಿ ಬೆಟ್ಟದ ಮೇಲೆ ಹಾಕಿದ್ದ ಹೈಮಾಸ್ಟ್ ವಿದ್ಯುತ್ ದೀಪದ ಕಂಬ ಬಿದ್ದು ಹೋಗಿದ್ದರೆ, ಅದಕ್ಕೆ ಅಳವಡಿಸಿದ್ದ ದೀಪಗಳು ಮಾತ್ರ ಕಳ್ಳರ ಪಾಲಾಗಿವೆ.
ತಲೆ ಹಾಕುವುದೇ ಕಷ್ಟವಾಗಿದೆ: ಹಲವು ವರ್ಷಗಳ ಹಿಂದೆ ಅಧಿಕಾರಿಗಳು ತಾಲೂಕಿನ ಇತಿಹಾಸ ಪ್ರಸಿದ್ಧ ಸ್ಥಳ, ಸ್ಮಾರಕಗಳನ್ನು ರಕ್ಷಿಸಬೇಕೆಂದು 15 ದಿನಕ್ಕೊಮ್ಮೆ ಅಥವಾ ತಿಂಗಳಿಗೆ ಒಂದು ಬಾರಿ ಬೆಟ್ಟದಲ್ಲಿ ಅನವಶ್ಯಕ ವಾಗಿ ಬೆಳೆದ ಗಿಡಗಂಟಿ, ಬೆಟ್ಟದ ಮೇಲಿನ ತ್ಯಾಜ್ಯ ತೆರವುಗೊಳಿಸಿದ್ದರು. ಆದರೆ, ಈಗಿನ ಪಪಂ, ತಾಲೂಕು ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕುತ್ತಿಲ್ಲ.
ವಾರಾಂತ್ಯದಲ್ಲಿ ಪ್ರವಾಸಿಗರ ದಂಡು: ಚಿಕ್ಕಬಳ್ಳಾ ಪುರದ ನಂದಿ ಬೆಟ್ಟದಲ್ಲಿ ರಸ್ತೆ ದುರಸ್ತಿ ಆಗಿರುವುದರಿಂದ ಪ್ರವಾಸಿಗರ ವಾಹನಗಳಿಗೆ ನಿರ್ಬಂಧ ಏರಲಾಗಿದೆ. ಹೀಗಾಗಿ ಬೆಟ್ಟ ಹತ್ತಲು ಕಷ್ಟಸಾಧ್ಯವಾದ ಕಾರಣ, ನಂದಿ ನಂತರದ ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತೆ ಅವುಲಬೆಟ್ಟ, ಅಮಾನಿಬೈರ ಸಾಗರ, ಸುರಸದ್ಮಗಿರಿ ಬೆಟ್ಟ, ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟಗಳು ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸುರಸದ್ಮಗಿರಿ ಬೆಟ್ಟ ಮಾತ್ರ ನಿರ್ವಹಣೆ ಕೊರತೆಯಿಂದ ಅವನತಿಯ ಅಂಚಿಗೆ ಸಿಲುಕುತ್ತಿದೆ.
ಭರವಸೆಗಳ ಮಹಾಪೂರ: ಸುರಸದ್ಮಗಿರಿ ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರದಿಂದ ಈ ವರ್ಷ ಇಷ್ಟು ಕೋಟಿ, ಆ ವರ್ಷ ಕೋಟಿ ಬಿಡುಗಡೆ ಆಗಿದೆ, ಇನ್ನೇನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಯಾಗಿಯೇ ಬಿಟ್ಟಿತು ಎಂದು ಭರವಸೆಗಳು ಮಾತ್ರ ಹಲವು ದಶಕಗಳಿಂದ ಸಾರ್ವಜನಿಕರು ಕೇಳುತ್ತಿದ್ದಾ ರೆಯೇ ಹೊರತು, ಕನಿಷ್ಠ ಬೆಟ್ಟದ ಮೇಲೆ ಇರುವ ದೇವಾಲಯಕ್ಕೆ ನಿತ್ಯ ಪೂಜೆ ಮಾಡಲು ಪೂಜಾ ಸಾಮಾನುಕೊಳ್ಳಲು ಸಹ ಹಣ ಬಿಡುಗಡೆಯಾಗಿಲ್ಲ.
ಇತಿಹಾಸ ಪ್ರಸಿದ್ಧ ಸುರಸದ್ಮಗಿರಿ ಬೆಟ್ಟ ಕಣ್ಮರೆ ಆಗುವುದಕ್ಕೆ ಮೊದಲೇ ಸ್ಥಳೀಯ ಅಧಿಕಾರಿಗಳಾಗಲಿ, ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಆಗಲಿ, ಮುಜರಾಯಿ ಇಲಾಖೆ ಅಧಿಕಾರಿಗಳು ಆಗಲಿ ಎಚ್ಚರಗೊಂಡು ಸ್ಮಾರಕಗಳ ರಕ್ಷಣೆಗೆ ಮುಂದಾಗ ಬೇಕೆಂದು ಸಾರ್ವಜನಿಕರ ಆಶಯವಾಗಿದೆ.
– ಎನ್.ನವೀನ್ ಕುಮಾರ್