Advertisement

ಅರಣ್ಯ ಕೃಷಿಗೆ ಸಸಿ ಬೇಕೇ? ಬೆಲಸಿಂದ ಸಸ್ಯಕಾಶಿಗೆ ಬನ್ನಿ

10:50 AM Jun 10, 2019 | Suhan S |

ಚನ್ನರಾಯಪಟ್ಟಣ: ಅರಣ್ಯ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು ಒಂದು ಹಾಗೂ ಮೂರು ರೂ.ಗೆ ಗಿಡವನ್ನು ತಾಲೂಕಿನ ಅರಣ್ಯ ಇಲಾಖೆ ವತಿಯಿಂದ ನೀಡಲು ಮುಂದಾಗಿದ್ದು, ರೈತರು ಹಾಗೂ ವೃಕ್ಷ ಪ್ರಿಯರು ಇದರ ಲಾಭ ಪಡೆಯಲು ಜೂ.10 ರಂದು ಬೆಲಸಿಂದ ಸಸ್ಯಕಾಶಿಗೆ ಆಗಮಿಸಬೇಕಿದೆ.

Advertisement

ಇಂದೇ ಆಗಮಿಸಿ: ಸಸಿಗಳನ್ನು ಪಡೆಯಲು ಆಸಕ್ತರು ಕೃಷಿ ಭೂಮಿ ಪಹಣಿ, ಬ್ಯಾಂಕ್‌ ಖಾತೆಯ ಪುಸ್ತಕ ಹಾಗೂ ಎರಡು ಭಾವ ಚಿತ್ರದೊಂದಿಗೆ ಬೆಲಸಿಂದ ಸಸ್ಯಕಾಶಿಗೆ ಆಗಮಿಸಿ ಒಂದು ರೂ. ನಂತೆ ತಮಗೆ ಅಗತ್ಯವಿರುವಷ್ಟು ಸಸಿಗಳನ್ನು ಪಡೆಯಬಹುದು. ಹೀಗೆ ಕಡಿಮೆ ಬೆಲೆಗೆ ಕೊಂಡ ಸಸಿಗಳನ್ನು ಮೂರು ವರ್ಷಗಳು ಪೋಷಣೆ ಮಾಡುವುದಕ್ಕೆ ಸರ್ಕಾರ ಪ್ರೋತ್ಸಾಹ ಧನವನ್ನು ನೀಡಲಿದೆ. ಇಂತಹ ಸದವಕಾಶವನ್ನು ತಾಲೂಕಿನ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದರೆ ಇಂದೇ ಬೆಲಸಿಂದ ಸಸ್ಯಕಾಶಿಗೆ ಬನ್ನಿ.

ಬ್ಯಾಂಕ್‌ ಖಾತೆಗೆ ಹಣ ಜಮಾ: ಕಡಿಮೆ ಬೆಲೆಗೆ ಸಸಿಗಳು ದೊರೆಯುತ್ತವೆ ಎಂದು ಅಗತ್ಯಕ್ಕಿಂತ ಹೆಚ್ಚು ಕೊಳ್ಳುವಂತಿಲ್ಲ. ತಾವು ಕೊಂಡ ಸಸಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಖಲು ಮಾಡಿಕೊಂಡು ಮುಂದಿನ ವರ್ಷ ತಮ್ಮ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಗಿಡಗಳು ಉತ್ತಮವಾಗಿ ಬೆಳೆದಿದ್ದರೆ ತಲಾ ಗಿಡಕ್ಕೆ ಪ್ರಥಮ ವರ್ಷ 30 ರೂ. ದ್ವಿತೀಯ ವರ್ಷ 30 ರೂ. ಹಾಗೂ ತೃತೀಯ ವರ್ಷ 40 ರೂ.ನಂತೆ ನೇರವಾಗಿ ತಮ್ಮ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಿದ್ದಾರೆ.

ಯಾವ ಸಸಿ ಲಭ್ಯ: ತೇಗ, ಕಾಡು ಗೋಡಂಬಿ, ಹೊಂಗೆ, ಬೀಟೆ, ಗೋಣಿ, ಆಲ, ಬಸರಿ, ತಾರೆ, ಹತ್ತಿ, ಶಿವನೆ, ಮಹಗನಿ, ಆರ್ಥಿಕವಾಗಿ ಲಾಭ ತರುವ ಶ್ರೀಗಂಧ, ಹೊನ್ನೆ, ರಕ್ತಚಂದನ, ಸಿಲ್ವರ್‌, ಬೇವು, ಹೆಬ್ಬೇವು, ಹಣ್ಣಿನ ಗಿಡಗಳಾದ ಹಲಸು, ನೇರಳೆ ಸಿತಾಫ‌ಲ, ಸಪೋಟಾ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ನರ್ಸರಿ ಮಾಡಿ ಬೆಳೆಸಿದ್ದಾರೆ. ಇವುಗಳಲ್ಲಿ ಕೆಲವು ಒಂದು ರೂ.ಗೆ ದೊರೆತರೆ ಇನ್ನು ಹಲವು ಮೂರು ರೂ.ಗೆ ನಿಮ್ಮ ಕೈ ಸೇರಲಿವೆ.

ಎಲ್ಲೆಲ್ಲಿಗೆ ಮೀಸಲು: ಅರಣ್ಯ ಇಲಾಖೆ ಬೆಳೆದಿರುವ ಲಕ್ಷಾಂತರ ಸಸಿಗಳಲ್ಲಿ ಒಂದು ಲಕ್ಷ ಸಸಿಗಳು ರಸ್ತೆಯ ಇಕ್ಕೆಲಗಳಲ್ಲಿ ನಾಟಿ ಮಾಡಿ ಪೋಷಣೆ ಮಾಡಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮಗುವಿ ಗೊಂದು ಮರ, ಶಾಲೆಗೊಂದು ವನ ಯೋಜನೆ ಅಡಿಯಲ್ಲಿ ವನ ನಿರ್ಮಾಣಕ್ಕೆ ಪೂರಕವಾದ ಪ್ರದೇಶ ಹೊಂದಿರುವ ಶಾಲೆಗಳಿಗೆ ನೀಡಲಾಗುವುದು. ಇದಲ್ಲದೇ ಅರಣ್ಯ ಕೃಷಿ ಪೋತ್ಸಾಹಕ್ಕಾಗಿ ರೈತರಿಗೆ ಕಡಿಮೆ ದರದಲ್ಲಿ ಸಸಿಗಳನ್ನು ವಿತರಣೆ ಮಾಡಲಾಗುತ್ತದೆ.

Advertisement

ಅರಣ್ಯ-ಕೃಷಿಗೆ ಆದ್ಯತೆ: ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ಪ್ರತಿ ರೈತರಿಗೆ 400 ಸಸಿಗಳನ್ನು ನಿಗದಿ ಮಾಡಿದ್ದು, ಯೋಜನೆ ಹೊರತುಪಡಿಸಿ ಸಾಮಾನ್ಯರು ಎಕರೆಗೆ 160 ಸಸಿಗಳನ್ನು ಪಡೆಯಬಹುದಾಗಿದೆ. ಸಸಿಗಳನ್ನು ಸಮರ್ಪಕವಾಗಿ ಪಾಲನೆ ಮಾಡುವವರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ, ಇತ್ತಿಚಿನ ದಿವಸಗಳಲ್ಲಿ ಕೃಷಿ ಅರಣ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದ್ದು, ಜಮೀನಿನಲ್ಲಿ ಮರಗಳನ್ನು ಬೆಳೆಸಿ ಮಧ್ಯದಲ್ಲಿ ತೋಟಗಾರಿಕಾ ಬೆಳೆಯನ್ನು ಬೆಳೆಯುವ ಪದ್ಧತಿ ಚಾಲ್ತಿಯಲ್ಲಿದ್ದು ಅಂತಹ ರೈತರಿಗೂ ಸಸಿಗಳನ್ನು ವಿತರಣೆ ಮಾಡಲಾಗುವುದು. ಕೃಷಿ-ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಇಂದಿನಿಂದಲೇ ಇಲಾಖೆಗೆ ಅರ್ಜಿಯನ್ನು ಸಲ್ಲಿಸುವುದು ಸೂಕ್ತ.

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next