ಹೊಸದಿಲ್ಲಿ: ರೈಲ್ವೇ ಆನ್‌ಲೈನ್ ಮುಂಗಡ ಟಿಕೆಟ್ ಪಡೆಯಲು ಆಧಾರ್ ಬಳಕೆ ಕಡ್ಡಾಯಪಡಿಸಲು ರೈಲ್ವೇ ಸಚಿವಾಲಯ ಮುನ್ನಡೆ ಇಟ್ಟಿದೆ. ಹೆಚ್ಚು ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸುವ ವೇಳೆ ನಡೆಯುವ ಮೋಸ, ನಕಲಿ ಗುರುತಿನ ಚೀಟಿ ಬಳಸಿ ಟಿಕೆಟ್ ಕಾಯ್ದಿರಿಸುವುದು ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಯಂತ್ರಣ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಿದೆ. 2017-18ರ ರೈಲ್ವೆ ವಾಣಿಜ್ಯ ಯೋಜನೆಯನ್ನು ಬಹಿರಂಗಪಡಿಸಿದ ರೈಲ್ವೇ ಸಚಿವ ಸುರೇಶ್ ಪ್ರಭು ಟಿಕೆಟ್‌ಗೆ ಆಧಾರ್ ಜೋಡಣೆ ಕುರಿತು ಹೇಳಿದರು. ಇದಕ್ಕಾಗಿ ಮೇ ತಿಂಗಳ ಒಳಗಾಗಿ ಮೊಬೈಲ್ ಆ್ಯಪ್ ಕೂಡ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು. ಟಿಕೆಟ್ ಕಾಯ್ದಿರಿಸಲು ಆಧಾರ್ ಸಂಖ್ಯೆಯನ್ನು ಐಆರ್‌ಸಿಟಿಸಿ ಟಿಕೆಟ್ ಸೈಟ್‌ನಲ್ಲಿ ಒಂದು ಬಾರಿ ನೋಂದಾಯಿಸಬೇಕು ಎಂದರು. ಇದಲ್ಲದೇ ನಗದು ರಹಿತ ಟಿಕೆಟ್ ಪಡೆಯುವ ವ್ಯವಸ್ಥೆ ಉತ್ತೇಜಿಸುವ ಸಲುವಾಗಿ ದೇಶಾದ್ಯಂತ 1,000 ಸ್ವಯಂ ಚಾಲಿತ ಟಿಕೆಟ್ ವಿತರಣೆ ಯಂತ್ರ ಸ್ಥಾಪಿಸುವುದಾಗಿ ಮತ್ತು 6,000 ಪಾಯಿಂಟ್ ಆಫ್ ಸೇಲ್ ಮೆಷಿನ್ ಸ್ಥಾಪಿಸುವುದಾಗಿ ಹೇಳಿದ್ದಾರೆ.