ಬೆಂಗಳೂರು: ಧರ್ಮವನ್ನು ತಪ್ಪು ವ್ಯಾಖ್ಯಾನ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿದ ಮಾತನಾಡಿದರು. ಕೆಲವರು ಧರ್ಮವನ್ನು ತಮಗೆ ಬೇಕಾದಂತೆ ತಪ್ಪು ವ್ಯಾಖ್ಯಾನ ಮಾಡುತ್ತಾರೆ. ಆ ಮೂಲಕ ಜನರನ್ನು ದಾರಿ ತಪ್ಪಿಸುತ್ತಾರೆ ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಜೆಪಿಯವರ ಹೆಸರು ಹೇಳದೆ ಜರಿದರು.
ನಮ್ಮ ಸರ್ಕಾರ ಟಿಪ್ಪು ಜಯಂತಿ ಆಚರಿಸಿದಾಗ ಟೀಕೆ ಮಾಡಿದರು. ಆದರೆ, ಅವರು ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಟಿಪ್ಪುವಿನ ಕಿರೀಟ, ವೇಷಭೂಷಣ ಹಾಕಿ ಮೆರೆದಾಡಿದರು. ಆತನನ್ನು ದೇಶಪ್ರೇಮಿ ಅಂದರು. ಆದರೆ, ತಮ್ಮ ಅನುಕೂಲಕ್ಕಾಗಿ ಈಗ ದೇಶದ್ರೋಹಿ ಎನ್ನುತ್ತಾರೆ. ಎರಡು ನಾಲಿಗೆಯ ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
ರಾಜಕೀಯ ಲಾಭಕ್ಕಾಗಿ ಜಯಂತಿ ಆಚರಿಸುತ್ತಿಲ್ಲ: ಸರ್ಕಾರ ಅನೇಕ ಪುರುಷರು ಮತ್ತು ಮಾತೆಯರ ಜಯಂತಿ ಆಚರಿಸುತ್ತಿದೆ. ಇದರಲ್ಲಿ ವೇಮನ ಜಯಂತಿ 27ನೆಯದ್ದು. ಆದರೆ, ಕೆಲವರು ಈ ಜಯಂತಿಗಳನ್ನು ಆಚರಿಸುತ್ತಿರುವುದಕ್ಕೆ ಟೀಕೆ ಮಾಡುತ್ತಾರೆ. ಮಹಾಪುರುಷರ ತತ್ವ, ವಿಚಾರಗಳನ್ನು ಸಮಾಜಕ್ಕೆ ಹರಡುವ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ ಜಯಂತಿಗಳ ಆಚರಣೆ ಮೂಲಕ ಆ ಕೆಲಸ ಮಾಡಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಜಯಂತಿ ಆಚರಿಸುವುದಿಲ್ಲ. ಹೀಗಾಗಿ ಅದಕ್ಕೆ ಸೊಪ್ಪು ಹಾಕುವುದಿಲ್ಲ ಎಂದರು.
ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಸಂಪತ್‌ರಾಜ್, ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಬಸವರಾಜ ರಾಯರಡ್ಡಿ, ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮತ್ತಿತರರು ಇದ್ದರು.