Advertisement

ಪ್ರತ್ಯೇಕ ಧರ್ಮದ ಮಾನ್ಯತೆ ಬೇಕೇ, ಬೇಡವೇ?

07:41 AM Jul 26, 2017 | |

ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂಬ ವಿಚಾರ ಇದೀಗ ರಾಜ್ಯವ್ಯಾಪಿ ಬಹುಚರ್ಚಿತ ವಿಷಯವಾಗಿದೆ. ವಿಧಾನಸಭೆ ಚುನಾವಣೆ ಒಂದು ವರ್ಷ ಬಾಕಿ ಇರುವಂತೆ ಆಡಳಿತಾರೂಢ ಕಾಂಗ್ರೆಸ್‌ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೇನುಗೂಡಿಗೆ ಕಲ್ಲು ಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತ್ಯೇಕ ಧರ್ಮದ ಮಾನ್ಯತೆ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಮಠಾಧೀಶರು-ರಾಜಕಾರಣಿಗಳು ಈ ವಿಷಯದಲ್ಲಿ ಬಹಿರಂಗ ಆರೋಪ-ಪ್ರತ್ಯಾರೋಪಕ್ಕೂ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಹಾಗೂ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರೊಂದಿಗೆ ನೇರಾ-ನೇರ ಸಂದರ್ಶನಕ್ಕೆ ಇಳಿದಾಗ  

Advertisement

ಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌

ಸಂದರ್ಶನ: ಶಂಕರ ಪಾಗೋಜಿ 
ಪ್ರತ್ಯೇಕ ಧರ್ಮದ ಕೂಗು ಈಗೇಕೆ ಬಂತು?

ಇದು ಈಗಷ್ಟೇ ಆರಂಭವಾದ ಬೇಡಿಕೆಯಲ್ಲ. ಹಿಂದೆ ಭೀಮಣ್ಣ ಖಂಡ್ರೆಯವರು ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದಾಗ ಅಂದಿನ ಕೇಂದ್ರ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರಿಗೆ ಮನವಿ ಮಾಡಿಕೊಂಡಿದ್ದೆವು. ಆಗಿನಿಂದಲೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿದ್ದ ಕಾರಣ  ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮತ್ತೂಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸುವಂತೆ ಮನವಿ ಮಾಡಿದ್ದೆವು. ಹೀಗಾಗಿ, ಇದು ಏಕಾಏಕಿ ಹುಟ್ಟಿಕೊಂಡ ಬೇಡಿಕೆಯಲ್ಲ. ಆ ರೀತಿ ಭಾವಿಸುವ ಅಗತ್ಯವೂ ಇಲ್ಲ. 

ಲಿಂಗಾಯತ ಹಿಂದೂ ಧರ್ಮದ ಭಾಗ ಅಂತ ಪೇಜಾವರ ಶ್ರೀಗಳು ಹೇಳ್ತಿದ್ದಾರಲ್ಲ ?
ಪೇಜಾವರ ಶ್ರೀಗಳು ಹಿಂದೂ ಧರ್ಮದ ಪ್ರತಿಪಾದಕರು, ಹಿಂದೂ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅವರು ಮೌಡ್ಯ ಬಿತ್ತುವ ಧರ್ಮದ ಪ್ರತಿಪಾದಕರಾಗಿದ್ದಾರೆ. ಅವರು ನಮ್ಮ ಧರ್ಮದ ವಿಷಯದಲ್ಲಿ ಪೌರೋಹಿತ್ಯ ವಹಿಸುವುದು ಬೇಡ. ನಮಗೆ ನಮ್ಮದೇ ಆದ ಗುರುಗಳಿದ್ದಾರೆ. ಸಿದ್ದಗಂಗಾ ಶ್ರೀಗಳು, ಸುತ್ತೂರು ಶ್ರೀಗಳು, ಮುರುಘಾ ಶರಣರು, ನಾಗನೂರು, ಬಾಲ್ಕಿ ಸ್ವಾಮೀಜಿಗಳು ನಮ್ಮಲ್ಲಿದ್ದಾರೆ. 

ಪಂಚ ಪೀಠಾಧೀಶರೇ ಲಿಂಗಾಯತ ಧರ್ಮ ಒಪ್ಪುತ್ತಿಲ್ಲವಲ್ಲ ?
ಪಂಚ ಪೀಠಾಧೀಶರು ತಮ್ಮ ಘನತೆ ಉಳಿಸಿಕೊಳ್ಳಲು ಈ ರೀತಿಯ ವಾದ ಮಾಡುತ್ತಿದ್ದಾರೆ. ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಆ ಮೇಲೆ ವೀರಶೈವರು ಈ ಧರ್ಮದ ಸಿದ್ಧಾಂತಗಳನ್ನು ಒಪ್ಪಿಕೊಂಡು ಬಂದಿದ್ದಾರೆ. ಪಂಚ ಪೀಠಾಧೀಶರು ವೈಭವದ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಡ್ಡ ಪಲ್ಲಕ್ಕಿಯಂಥ ಅನಿಷ್ಠ ಪದ್ಧತಿಗಳನ್ನು ಆಚರಿಸುತ್ತಾರೆ. ಲಿಂಗಾಯತ ಧರ್ಮದಲ್ಲಿ ಅದಕ್ಕೆ ಅವಕಾಶ ಇಲ್ಲ. ಇಲ್ಲಿ ಸರಳ ಆಚರಣೆ ಇದೆ. ಬಸವಣ್ಣ ಯಾವತ್ತೂ  ಮೂಢ ನಂಬಿಕೆ, ಡಂಭಾಚಾರ ಪ್ರತಿಪಾದನೆ ಮಾಡಲಿಲ್ಲ. ಪಂಚ ಪೀಠಾಧೀಶರು ವೀರಶೈವ ಧರ್ಮವನ್ನು ಮೊದಲೇ ಘೋಷಣೆ ಮಾಡಿಕೊಳ್ಳಬಹುದಿತ್ತು. ಅವರೂ ಹಿಂದೂ ಧರ್ಮದಲ್ಲಿಯೇ ಉಳಿದುಕೊಂಡಿರುವುದು ದುರ್ದೈವ. 

Advertisement

ಲಿಂಗಾಯತ ನಾಯಕರಾಗಲು ಈ ಹೋರಾಟವಾ?
ನಾನು ಯಾವುದೇ ನಾಯಕತ್ವಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. 800 ವರ್ಷಗಳ ಹಿಂದೆಯೇ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರೆಯಬೇಕಿತ್ತು. ಆದರೆ, ಅದು ಸಾಧ್ಯವಾಗದಿರುವುದರಿಂದ ಹಿಂದೂ ಧರ್ಮದಲ್ಲಿ ಮುಂದುವರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಧರ್ಮದಲ್ಲಿ ಬಸವಣ್ಣನಿಗೆ ಅಗ್ರಸ್ಥಾನ ಇದೆ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿರುವುದು ಲಿಂಗಾಯತ ಧರ್ಮ.

ಯಡಿಯೂರಪ್ಪ ನಿಮ್ಮ ಬೇಡಿಕೆಯನ್ನು ವಿರೋಧಿಸುತ್ತಿದ್ದಾರಲ್ಲಾ ?
 ಅವರು ಆರೆಸ್ಸೆಸ್‌ ಕಪಿ ಮುಷ್ಟಿಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸತ್ಯ ಹೇಳಲು ಹೆದರುತ್ತಿದ್ದಾರೆ. ಆ ಕಪಿ ಮುಷ್ಠಿಯಿಂದ ಹೊರ ಬಂದು ಹೋರಾಟಕ್ಕೆ ಬೆಂಬಲ ನೀಡಬೇಕು. 

ಯಡಿಯೂರಪ್ಪ ನಿಮ್ಮ ಸಮಾಜದ ಪ್ರಶ್ನಾತೀತ ನಾಯಕ ಅಂತ ಒಪ್ಕೋತೀರಾ ?
ಅವರನ್ನು ಪ್ರಶ್ನಾತೀತ ನಾಯಕ ಅಂತ ಒಪ್ಪಿಕೊಳ್ಳುವುದಿಲ್ಲ. ಹಿಂದುತ್ವ ಸಿದ್ಧಾಂತ ಇರುವ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಆ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ, ಬಹಿರಂಗವಾಗಿ ನಮ್ಮ ಧರ್ಮದ ಬಗ್ಗೆ ಮಾತನಾಡಲು ಅವರಿಗೆ ಅವಕಾಶ ಇಲ್ಲದಂತಾಗಿದೆ. 

ಈ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಿದೆಯಾ? ಇದು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ಹೋರಾಟವಾ?
ಲಿಂಗಾಯತ ಸಮಾಜದ ಮುಖಂಡನಾಗಿ ನಾನು ನಮ್ಮ ಪಕ್ಷದ ಎಲ್ಲ ನಾಯಕರನ್ನೂ ಮನವೊಲಿಸುತ್ತೇನೆ. ಅಲ್ಲದೇ ನಮ್ಮ ಸರ್ಕಾರ ಹಾಗೂ ಸಂಪುಟದ ಸಚಿವರಿಗೂ ಲಿಂಗಾಯತ ಧರ್ಮದ ಅಗತ್ಯತೆ ಕುರಿತು ಮನವರಿಕೆ ಮಾಡಿ ಕೊಡುತ್ತೇನೆ. ಎಲ್ಲರ ಅನುಮತಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಚುನಾವಣೆಗೆ ಇದಕ್ಕೂ ಸಂಬಂಧವಿಲ್ಲ.

ಕೇಂದ್ರ ಸರ್ಕಾರ ನಿಮ್ಮ ಬೇಡಿಕೆ ಒಪ್ಪಬಹುದೇ?
ಕೇಂದ್ರ ಸರ್ಕಾರಕ್ಕೂ ಲಿಂಗಾಯತ ಧರ್ಮದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಒಂದು ವೇಳೆ, ಕೇಂದ್ರ ಸರ್ಕಾರ ಸ್ಪಂದಿಸದೇ ಹೋದರೆ, ಕಾನೂನು ಹೋರಾಟಕ್ಕೂ ನಾವು ಸಿದ್ದರಾಗಿದ್ದೇವೆ. 

ಬಸವಣ್ಣ ಮೂರ್ತಿ ಪೂಜೆ ವಿರೋಧಿಸಿದವರು. ನೀವವರದ್ದೇ ಮೂರ್ತಿ ಪೂಜೆ ಮಾಡ್ತಿದ್ದೀರಾ?
ಬಸವಣ್ಣ ಧರ್ಮ ಸ್ಥಾಪಕ ಅಷ್ಟೆ ಅಲ್ಲ. ಸಮಾಜ ಸುಧಾರಕ ಕೂಡ. ಅವರು ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದವರು, ಅಂತಹ ಸಮಾಜದ ಗೊಡವೆ ಬೇಡ ಅಂತ ಹೇಳಿ ಪ್ರತ್ಯೇಕ ಧರ್ಮ ಸ್ಥಾಪಿಸಿದ್ದಾರೆ. ನಮ್ಮ ಧರ್ಮ ಸ್ಥಾಪಿಸಿದವರಿಗೆ ನಾವು ಗೌರವ ಕೊಡುವುದು ಬೇಡವಾ? ಅವರ ಮೇಲಿನ ಗೌರವಕ್ಕಾಗಿ ನಾವು ಅವರ ಮೂರ್ತಿ ಮಾಡಿದ್ದೇವೆ, ಅದಕ್ಕೂ ಮೂರ್ತಿ ಪೂಜೆಗೆ ವ್ಯತ್ಯಾಸವಿದೆ. 

ನೀವು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿ ಹೋಮ, ಹವನ ಮಾಡೋದು ಸರಿನಾ ?
ನಾನ್ಯಾವತ್ತೂ ಹೋಮ ಹವನ ಮಾಡಿಲ್ಲ.  ಪೂಜೆ ಮಾತ್ರ ಸಲ್ಲಿಸಿದೇನೆ. ಅದನ್ನು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ. ನದಿ ನಮಗೆ ನೀರು ಕೊಟ್ಟಾಗ ಅದಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ ಹಾಗೇ ಪೂಜೆಯ ಮೂಲಕ ಕೃತಜ್ಞತೆ ಸಲ್ಲಿಸಿದ್ದೇನೆ.  

ರಾಜಕೀಯ ಲಾಭಕ್ಕಾಗಿ ಮಾನ್ಯತೆ ಕೇಳುತ್ತಿದ್ದೀರಾ ?
ಪತ್ಯೇಕ ಮಾಡಿಕೊಳ್ಳುವುದರಿಂದ ಯಾವುದೇ ರಾಜಕೀಯ ಲಾಭ ದೊರೆಯುವುದಿಲ್ಲ. ಯಾವುದೇ ಸರ್ಕಾರಿ ಸವಲತ್ತುಗಳಿಗಾಗಿ ನಾವು ಇದನ್ನು ಮಾಡುತ್ತಿಲ್ಲ. 800 ವರ್ಷಗಳಿಂದಲೂ ಈ ಧರ್ಮ ಇದೆ. ಆದರೆ, ಸರಿಯಾದ ಮಾನ್ಯತೆ ದೊರೆಯದೇ ಹಿಂದೂ ಧರ್ಮದಲ್ಲಿದ್ದೇವೆ. ಈಗ ನಮ್ಮ ಬೇಡಿಕೆಯನ್ನ ಮತ್ತೆ ಕೇಳುತ್ತಿದ್ದೇವೆ.

ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ

ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ 

ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕು ಎಂಬ ಕೂಗು ಎದ್ದಿದೆಯಲ್ಲಾ?
ಇದೊಂದು ದೊಡ್ಡ ತಪ್ಪು. ಅಷ್ಟೇ ಅಲ್ಲ ಮೂರ್ಖತನದ ಕೂಗು. ಎಲ್ಲ ದೃಷ್ಟಿಯಲ್ಲೂ ಲಿಂಗಾಯತರು, ವೀರಶೈವರು ಹಿಂದೂಗಳೇ, ಹಿಂದೂ ಧರ್ಮದ ಆಚರಣೆ, ಶಿವ, ಓಂ, ಪರಲೋಕ ಎಲ್ಲವನ್ನೂ ನಂಬುತ್ತಿದ್ದಾರೆ. ಈ ಹಂತದಲ್ಲಿ ಇಂಥದ್ದೊಂದು ಕೂಗು ಯಾವ ಕಾರಣಕ್ಕೆ ಎದ್ದಿದೆ ಎಂಬುದೇ ದೊಡ್ಡ ಪ್ರಶ್ನೆ. ಇದು ಯಾವ ಕಾರಣಕ್ಕೂ ಸರಿಯಲ್ಲ.

ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಅಲ್ಪಸಂಖ್ಯಾತರ ಸ್ಥಾನಮಾನ, ಮೀಸಲಾತಿ ದೊರೆಯುತ್ತದೆ ಎಂದು ಹೇಳುತ್ತಿದ್ದರಲ್ಲಾ?
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮೀಸಲಾತಿ, ಸೌಲಭ್ಯ ಎಂಬುದು ಅರ್ಹತೆ ಇರುವ ಎಲ್ಲರಿಗೂ ಸಿಗಲಿ. ಪ್ರತ್ಯೇಕ ಧರ್ಮ ಮಾನ್ಯತೆ ಕೊಡದೆ ಮೀಸಲಾತಿ ಅಥವಾ ಸವಲತ್ತು ಕೊಡಲು ಸಾಧ್ಯವಿಲ್ಲವೇ? ಆದರೆ, ಅದಕ್ಕಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕು ಎಂಬುದು ನೆಪ. ಸುಳ್ಳು ಹೇಳಬಾರದು, ಇದನ್ನೆಲ್ಲಾ ನೋಡಿದರೆ ಬೇರೇನೋ ಮಾಡಲು ಹೊರಟಿದ್ದಾರೆ ಎಂಬ ಸಂಶಯ ಬರುತ್ತದೆ.

ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂಬ ಮಾತುಗಳಿವೆಯಲ್ಲವಾ?
ಇತಿಹಾಸ, ವಿಚಾರ, ಪರಂಪರೆ, ಸಂಸ್ಕೃತಿ ತಿಳಿಯದವರು ಆಡುವ ಮಾತಿದು. ಯಾವುದೋ ಕಾರಣಕ್ಕೆ ಸುಳ್ಳು ಹೇಳಬಾರದು, ಬಸವಣ್ಣನವರು ಹುಸಿಯ ನುಡಿಯಲು ಬೇಡ ಎಂದು ಹೇಳುತ್ತಾರೆ. ಇವರ ವಾದ ಮತ್ತು ಇವರು ಹೇಳಿದಂತೆ ಹೋದರೆ ಅವಕಾಶ, ಅನುಕೂಲಕ್ಕಾಗಿ ಹುಸಿಯ ನುಡಿ ಎಂಬಂತಾಗುತ್ತದೆ.

ಹಿಂದೂ ಧರ್ಮದ, ವೀರಶೈವ-ಲಿಂಗಾಯತರ ಆಚಾರ-ವಿಚಾರ ಬೇರೆ ಅಂತಾರಲ್ಲಾ?
ಮಾತನಾಡಲು ಬರುತ್ತದೆ ಎಂದು ಏನೇನೋ ಮಾತನಾಡಿದರೆ ವಿಷಯಾಂತರ, ವಿವಾದ ಆಗಬಹುದಷ್ಟೇ. ಸಾಧನೆ ಏನೂ ಆಗದು. ವೀರಶೈವ-ಲಿಂಗಾಯತರು ಅನುಸರಿಸುತ್ತಿರುವುದು ಹಿಂದೂ ಧರ್ಮವನ್ನೇ. ಇಲ್ಲೂ ಜಾತಿ ವ್ಯವಸ್ಥೆ, ಪುರುಷ ಪ್ರಧಾನ, ಮೇಲು-ಕೀಳು ಎಲ್ಲವೂ ಇದೆ. ಆದರೆ, ಅದಕ್ಕೆ ಪ್ರತ್ಯೇಕ ಧರ್ಮ ಕೇಳುವುದು ಪರಿಹಾರವಲ್ಲ. ಲಿಂಗಾಯತರಾಗಲಿ ವೀರಶೈವರಾಗಲಿ ವೇದ-ಸಂಸ್ಕೃತಿ ಒಪ್ಪಿಕೊಂಡವರು ಅದರಲ್ಲಿ ಶ್ರದ್ಧೆ ಇಟ್ಟುಕೊಂಡವರು.

ಸಂವಿಧಾನದಲ್ಲಿ ಪ್ರತ್ಯೇಕ ಧರ್ಮಕ್ಕೆ ಅವಕಾಶ ಇದೆ ಎಂಬ ಸಮರ್ಥನೆ ಇದೆಯಲ್ಲಾ?
ಇದು ಅಷ್ಟು ಸುಲಭದ ಮಾತಲ್ಲ. ಆ ರೀತಿ ಹೇಳಿದರೆ ತಿರುಕನ ಕನಸು ಎಂದಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟೇ ಅಲ್ಲ ಪ್ರಧಾನಿ ಮೋದಿಗೂ ಇದು ಕಷ್ಟ. ಕಾನೂನು ಬದಲಾವಣೆ, ಲೋಕಸಭೆ- ರಾಜ್ಯಸಭೆಯಲ್ಲಿ ಒಪ್ಪಿಗೆ ಇವೆಲ್ಲವೂ ಆಗುವ ಕೆಲಸವಲ್ಲ. ಸಂವಿಧಾನಾತ್ಮಕವಾಗಿ ರೂಪುಗೊಂಡಿರುವ ಹಿಂದೂ ವಿವಾಹ ಕಾನೂನು ಎಲ್ಲರಿಗೂ ಅನ್ವಯ. ಆರ್ಯ ಸಮಾಜ, ಬ್ರಹ್ಮ ಸಮಾಜ, ಲಿಂಗಾಯತ, ವೀರಶೈವ ಸಮಾಜ ಶೇ.100 ಕ್ಕೆ 100 ರಷ್ಟು ಹಿಂದೂ ಧರ್ಮದ ವ್ಯಾಪ್ತಿಗೆ ಬರುತ್ತದೆ. 

ಹಾಗಿದ್ದರೆ ಕಾಂಗ್ರೆಸ್‌ ಯಾಕೆ ಈ ವಿಷಯ ಎತ್ತಿದೆ?
ಅದು ಆ ಪಕ್ಷದವರನ್ನೇ ಕೇಳಿದರೆ ಗೊತ್ತಾಗುತ್ತದೆ. ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಹೋಗಿ ಕೇಳಿ.

ಇದರ ಹಿಂದೆ ರಾಜಕಾರಣ ಇದೆ ಎನಿಸುತ್ತದಾ?
ಇರಬಹುದೇನೋ, ಆದರೆ, ಅದು ನನಗೆ ಬೇಕಿಲ್ಲ. ಅದರಿಂದ ಲಿಂಗಾಯತ-ವೀರಶೈವರಿಗೂ ಆಗಬೇಕಾಗಿರುವುದು ಏನೂ ಇಲ್ಲ. ಹಿಂದೂ ಧರ್ಮ ಒಪ್ಪಿ ನೆಮ್ಮದಿ ಕಂಡು ಕೊಂಡಿರುವವರಿಗೆ ಬೇರೇನೋ ಆಮಿಷವೊಡ್ಡಿ ಸುಳ್ಳು ಹೇಳಿ ವಿವಾದದ ಕಿಡಿಹೊತ್ತಿಸುವ ಕೆಲಸ ಮಾಡಬಾರದು. 

ಕೆಲವು ವೀರಶೈವ-ಲಿಂಗಾಯತ ಮಠಾಧೀಶರೇ ಪ್ರತ್ಯೇಕ ಧರ್ಮದ ಪರ ಒಲವು ಹೊಂದಿದ್ದು, ಹಿಂದೂ ಧರ್ಮವೇ ಅಲ್ಲ ಎಂದು ಹೇಳ್ತಾರಲ್ಲಾ?
ಸಿದ್ಧಗಂಗಾ ಮಠ, ಸುತ್ತೂರು ಮಠ ವೇದ-ಸಂಸ್ಕೃತಿ ಪಾಠ ಶಾಲೆ ನಡೆಸುತ್ತದೆ. 1915ರಲ್ಲಿ ತಿಪಟೂರಿನಲ್ಲಿ ಜಯದೇವ ಸ್ವಾಮಿಗಳು ಅಂದರೆ ಈಗಿನ ಮುರುಘಾಮಠದ ಪರಂಪರೆಯ ಮೂಲ ಸ್ವಾಮಿಗಳು ವೇದ ಸಂಸ್ಕೃತಿ ಪಾಠ ಶಾಲೆ ಪ್ರಾರಂಭಿಸಿದ್ದರು. ವಿಭೂತಿ, ರುದ್ರಾಕ್ಷಿ, ಮಂತ್ರ ಇವೆಲ್ಲವನ್ನೂ ವೀರಶೈವರಷ್ಟೇ ಅಲ್ಲ ಹಿಂದೂ ಧರ್ಮದ ವ್ಯಾಪ್ತಿಯಲ್ಲಿರುವ ಎಲ್ಲರೂ ಪಾಲಿಸುತ್ತಿದ್ದಾರೆ. 

ಅಖೀಲ ಭಾರತ ವೀರಶೈವ ಮಹಸಭಾ ಸಹ ಪ್ರತ್ಯೇಕ ಧರ್ಮದ ಪರ ಇದೆಯಂತೆ?
ಇದೇ ಅಖೀಲ ಭಾರತ ವೀರಶೈವ ಮಹಾಸಭಾ, ಅಧಿವೇಶನದಲ್ಲಿ ವೀರಶೈವರು ಹಿಂದೂಧರ್ಮಕ್ಕೆ ಸೇರಿದವರು ಎಂದು ನಿರ್ಣಯ ಮಾಡಿದೆ. ಬೇಕಾದರೆ ಅದರ ಮಾಹಿತಿ ನನ್ನ ಬಳಿ ಇದೆ ಕೊಡುತ್ತೇನೆ. ಇತ್ತೀಚೆಗೆ ಏನೇನೋ ನಿರ್ಧಾರ ಕೈಗೊಂಡರೆ ಅದಕ್ಕೆ ಸಮುದಾಯವೇ ಸಹಮತ ಕೊಡುವುದಿಲ್ಲ ಎಂಬುದು ನನ್ನ ಅಭಿಪ್ರಾಯ.

ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯವನ್ನು ಹಿಂದುತ್ವದೆಡೆ ಸೆಳೆಯುತ್ತಿದ್ದಾರೆ ಎಂಬ ಆರೋಪ ಇದೆಯಲ್ಲಾ?
ಇದು ಯಡಿಯೂರಪ್ಪ ಅಥವಾ ಇನ್ಯಾರದೋ ಪ್ರಶ್ನೆಯಲ್ಲ. ವೀರಶೈವರು-ಲಿಂಗಾಯತರ ಪ್ರಶ್ನೆ. ಇವರೆಲ್ಲರೂ ಹಿಂದೂಗಳು ಅಷ್ಟೆ. ಇದೊಂದು ಸೂಕ್ಷ್ಮ ಮತ್ತು ಗಂಭೀರ ವಿಷಯ. ಇದರಲ್ಲಿ ಸರ್ಕಾರ ಅಥವಾ  ಆಳುವ ಪಕ್ಷ, ಪ್ರತಿಪಕ್ಷ ಹುಡುಗಾಟಿಕೆ ಆಡುವುದು ಸರಿಯಲ್ಲ.

ಲಿಂಗಾಯತ-ವೀರಶೈವ ಬೇರೆ ಬೇರೆ ಎಂಬ ಕೂಗು ಇದೆಯಲ್ಲಾ?
ಮುಸ್ಲಿಂ ಮತ್ತು ಮಹಮದ್‌ ಬೇರೆ ಬೇರೆನಾ? ಎರಡೂ ಒಂದೇ ತಾನೆ. ಅದೇ ರೀತಿ ವೀರಶೈವ-ಲಿಂಗಾಯತ ಒಂದೇ. ಇಲ್ಲಿ ಶಬ್ಧ ಪ್ರಯೋಗ ಬೇರೆ ಇರಬಹುದು, ಅರ್ಥ ಒಂದೇ. ಮಾತೆ ಮಹಾದೇವಿ ಅವರ ಹೋರಾಟವೂ ಅರ್ಥ ಮತ್ತು ತರ್ಕ ಎರಡೂ ಇಲ್ಲದ್ದು. ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಾಲಗಂಗಾಧರನಾಥ ತಿಲಕರು ನಾವು ಹಿಂದೂಗಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಹಡೇìಕರ್‌ ಮಂಜಪ್ಪ, ಫ‌.ಗು. ಹಳಕಟ್ಟಿ ಅವರು ವೀರಶೈವ-ಲಿಂಗಾಯತರು ಹಿಂದೂಗಳೇ ಎಂದು ಹೇಳಿದ್ದರು. ಇವೆಲ್ಲವನ್ನೂ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?

Advertisement

Udayavani is now on Telegram. Click here to join our channel and stay updated with the latest news.

Next