ಉಡುಪಿ: ನೀರಿನ ಹರಿವು ನಿಂತಿರುವ ತೋಡಿನಿಂದ ಹೂಳೆತ್ತಿ ತೆಂಗಿನ ಮರದ ಬುಡಕ್ಕೆ ಹಾಕಿದ ಕೃಷಿಕನಿಗೆ ಕಾನೂನಿನ ನೆಪವೊಡ್ಡಿ ಪೊಲೀಸರು ಗದರಿಸಿದ ಘಟನೆ ಬಾರಕೂರು – ಶಿರಿಯಾರ ಸಮೀಪದ ಯಡ್ತಾಡಿಯಲ್ಲಿ ಶುಕ್ರವಾರ ನಡೆದಿದೆ!
ಹೂಳನ್ನು ತೋಟಕ್ಕೆ ಹಾಕಿದರೆ ತೋಡಿನಲ್ಲಿ ನೀರು ಸಂಗ್ರಹಕ್ಕೆ ಅನುವಾಗುತ್ತದೆ, ಜತೆಗೆ ತೆಂಗಿನ ಮರಕ್ಕೆ ಗೊಬ್ಬರವೂ ಆಗುತ್ತದೆ ಎಂದು ಕೃಷಿಕ ಯಡ್ತಾಡಿ ಸತೀಶ ಕುಮಾರ್ ಶೆಟ್ಟಿ ಅವರು ಆಲೋಚಿಸಿ ಕಾರ್ಮಿಕರನ್ನು ಕಲೆ ಹಾಕಿ ಕೆಲಸ ಆರಂಭಿಸಿದರು. ಯಾರು ಮಾಹಿತಿ ಕೊಟ್ಟರೋ ಗೊತ್ತಿಲ್ಲ. ಅಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ವಾಸನೆ ಪೊಲೀಸರ ಮೂಗಿಗೆ ಬಡಿ ಯಿತು; ಧಾವಿಸಿ ಬಂದವರೇ “ಏನು ಮಾಡುತ್ತಿದ್ದೀರಿ? ಇದಕ್ಕೆ ಯಾರ ಅನುಮತಿ ಪಡೆದುಕೊಂಡಿದ್ದೀರಿ?’ ಎಂದೆಲ್ಲ ಪ್ರಶ್ನಿಸಲಾರಂಭಿಸಿದರು.
ಹಿಂದಿನ ಜಿಲ್ಲಾಧಿಕಾರಿಯವರು ಜಿಲ್ಲಾ ಜನಸಂಪರ್ಕ ಸಭೆಯಲ್ಲಿ ತಲೆಹೊರೆಯಲ್ಲಿ ಹೊಳೆ ಬದಿ ಹೂಳನ್ನು ಎತ್ತಬಹುದು. ವಾಹನದಲ್ಲಿ ಕೊಂಡೊಯ್ಯಬಾರದು ಎಂದಿದ್ದರು ಎಂದು ಶೆಟ್ಟರು ಉತ್ತರಿಸಿದರು. “ಇದಕ್ಕೆ ಎಲ್ಲಿದೆ ಅನುಮತಿ ಪತ್ರ?’ ಎಂದು ಪೊಲೀಸ್ ಸಿಬಂದಿ ಕೇಳಿದಾಗ, “ಇದನ್ನು ತಡೆಯಲು ನಿಮಗೆಲ್ಲಿದೆ ಆದೇಶ?’ ಎಂದು ಶೆಟ್ಟರು ಮರು ಪ್ರಶ್ನಿಸಿದರು. ಅವರ ಪ್ರಶ್ನೆಗಳ ಬಾಣಕ್ಕೆ ಉತ್ತರಿಸಲಾಗದ ಸಿಬಂದಿ ಬಂದ ಹಾಗೇ ಮರಳಿದರು.
ಪ್ರಕರಣದ ಬಗ್ಗೆ ಉದಯವಾಣಿ ಪ್ರತಿನಿಧಿ ಪೊಲೀಸ ರಿಂದ ಪ್ರತಿಕ್ರಿಯೆ ಬಯಸಿದಾಗ, “ಮಾಹಿತಿ ಬಂದಾಗ ಸ್ಥಳಕ್ಕೆ ಬಾರದೆ ಹೋದರೆ ನಮ್ಮದು ಕರ್ತವ್ಯ ಲೋಪವಾ ಗುತ್ತದೆ’ ಎಂದು ಅಸಹಾಯಕತೆ ಬಿಚ್ಚಿಟ್ಟರು. ನಮಗೆ ಮಾಹಿತಿಷ್ಟೇ ಬಂದಿತ್ತು; ಅಧಿಕೃತ ದೂರು ಬಂದರೆ ತನಿಖೆ ನಡೆಸಲಾ ಗುವುದು ಎಂದರು.
ಗಣಿ ಇಲಾಖೆ ಏನೆನ್ನುತ್ತದೆ?
“ತೋಡು ಮೊದಲಾದೆಡೆ ಸಿಗುವ ಮರಳನ್ನು ಬಳಸಲು ಕಾನೂನು ಅಡ್ಡಿ ಇಲ್ಲ. ಹೊರಗೆ ವ್ಯಾಪಾರ ದೃಷ್ಟಿಯಿಂದ ಸಾಗಿಸಬಾರದು ಎಂದಿದೆ ಅಷ್ಟೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ.