Advertisement

3ರಿಂದ 6 ಅಡಿ ಅಂತರವೂ ಸಾಕಾಗದು?

11:15 AM Mar 29, 2020 | Suhan S |

ಲಂಡನ್‌, ಮಾ. 28: ಈ ಹೊತ್ತಿನವರೆಗೂ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಷ್ಟು ಅಡಿ ಎಂಬುದರ ಗೊಂದಲದಲ್ಲೇ ಮುಳುಗಿದ್ದೆವು. ಕೊನೆಗೂ ಮೂರು ದಿನಗಳಿಂದ ಮೂರು ಅಡಿ ಎಂದು ಕೆಲವರು, ಇನ್ನು ಕೆಲವರು ಎರಡೇ ಅಡಿ ಎಂದು ಅನುಸರಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಆರು ಅಡಿ ಎಂಬ ಮಾತು ಕೇಳಿಬರುತ್ತಿದೆ. ಈ ಲೆಕ್ಕಾಚಾರದಲ್ಲೇ ಮುಳುಗಿರುವ ಹೊತ್ತಿನಲ್ಲಿ ವಿದ್ಯಾಸಂಸ್ಥೆ ಎಂಐಟಿ ಅಧ್ಯಯನವೊಂದು ಘಂಟಾಘೋಷವಾಗಿ ಹೇಳಿರುವುದು ಏನೆಂದರೆ, “ನೀವೆಲ್ಲಾ ಮಾಡುತ್ತಿರುವುದು ತಪ್ಪು’.

Advertisement

ಹಾಗಾದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬೇಡವೇ ಎಂದು ಕೇಳಬೇಡಿ. ಖಂಡಿತಾ ಕಾಯ್ದುಕೊಳ್ಳಬೇಕು. ಕಾಲೇಜಿನ ಅಧ್ಯಯನ ಪ್ರಕಾರ ನಾವೀಗ ಕಾಯ್ದುಕೊಳ್ಳುವ ಅಂತರ ಏನೇನೂ ಸಾಲದು. ಅದು ಅಪಾಯದಿಂದ ನಮ್ಮನ್ನು ರಕ್ಷಿಸುವುದಿಲ್ಲವಂತೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರ ಅಳತೆಯಲ್ಲಿ ಈ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ.

ನಮ್ಮಲ್ಲಿ ಹೆಚ್ಚೆಂದರೆ ಮೂರು ಅಡಿ. ಯುರೋಪನ್‌ಲ್ಲಿ ಹತ್ತಿರ ಹತ್ತಿರ ಐದು ಅಡಿ. ಇನ್ನು ಕೆಲವೆಡೆ ಎರಡು ಅಡಿ. ಇವೆಲ್ಲವನ್ನೂ ಸಾರಾಸಗಟಾಗಿ ತಳ್ಳಿ ಹಾಕಿರುವ ಅಧ್ಯಯನ, ಈಗ ಎಷ್ಟು ಕಾಯ್ದುಕೊಳ್ಳುತ್ತಿದ್ದೀರಿ ಅದರ ಮೂರು ಅಥವಾ ನಾಲ್ಕರಷ್ಟು ಹೆಚ್ಚು ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದೆ. ಅಲ್ಲಿಗೆ ನಮ್ಮ ಊರಿನ ಲೆಕ್ಕದಲ್ಲಿ 12 ಅಡಿಗೆ ಒಬ್ಬರಂತೆ ನಿಲ್ಲಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯೊಳಗೇ ಇರುವವರು ಅಗತ್ಯ ವಸ್ತುಗಳಿಗಾಗಿ ಮಾರುಕಟ್ಟೆಗೆ ಬಂದಾಗ ಪರಸ್ಪರ ಸಾಮಾಜಿಕಅಂತರ ಕಾದುಕೊಳ್ಳಲು ಸೂಚಿಸಲಾಗಿದೆ.

ರೋಗಪೀಡಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಬೀಳುವ ಬಾಷ್ಪಕಣಗಳಲ್ಲಿರುವ ವೈರಸ್‌ ಇನ್ನೊಬ್ಬನ ದೇಹ ಸೇರುವ ಮೂಲಕ ರೋಗ ಪ್ರಸರಣವಾಗುತ್ತದೆ. ಇದನ್ನು ತಡೆಯಲು ಹಾಲಿ ಶಿಫಾರಸು ಮಾಡಿರುವ ಅಂತರವು ಈ ಬಾಷ್ಪಕಣಗಳು ಗಾಳಿಯ ಜತೆಗೆ ಸಾಗುವ ವೇಗ ಮತ್ತು ಕೆಮ್ಮಿದ ಅಥವಾ ಸೀನಿದ ಸನ್ನಿವೇಶದಲ್ಲಿ ಎಷ್ಟು ಕಣಗಳು ವಾತಾವರಣ ಸೇರಿವೆ, ರೋಗಿಯಿಂದ ಹೊರಬಿದ್ದು ಬಾಷ್ಪಕಣಗಳಲ್ಲಿ ಇರುವ ವೈರಾಣುಗಳ ಪ್ರಮಾಣ ಎಷ್ಟು ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ. ರೋಗಪೀಡಿತ ವ್ಯಕ್ತಿ ತುಂಬಾ ಬಲವಾಗಿ ಕೆಮ್ಮಿದ ಯಾ ಸೀನಿದ್ದಾಗ ಅಥವಾ ಫ್ಯಾನ್‌ ಗಾಳಿ/ ಸಹಜ ಗಾಳಿ ವೇಗವಾಗಿದ್ದರೆ ಮೂರರಿಂದ ಆರು ಅಡಿ ಅಂತರ ಸಾಕಾಗದು ಎನ್ನುತ್ತಿವೆ ಅಧ್ಯಯನಗಳು.

ನಮ್ಮೂರುಗಳಲ್ಲಿ ಪುಟ್ಟ ಮಕ್ಕಳು ಬೆದರಿ ಕಿರುಚಿಕೊಳ್ಳುವಷ್ಟು ಘನಘೋರವಾಗಿ ಆಕ್ಷೀ———— ಮಾಡುವ ಮಹಾನುಭಾವರಿರುವುದನ್ನು ಇದಕ್ಕೆ ಸಂವಾದಿಯಾಗಿ ನೆನಪಿಸಿಕೊಳ್ಳಬಹುದು! ಇಷ್ಟು ಮಾತ್ರವಲ್ಲದೆ, ವಾತಾವರಣದಲ್ಲಿ ಇರುವ ತೇವಾಂಶವೂ ವೈರಸ್‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಆದ್ರತೆ ಕಡಿಮೆ ಇರುವಲ್ಲಿ ಇರುವ ಅಂತರ ಹೆಚ್ಚು ಆದ್ರìತೆ ಇರುವಲ್ಲಿ ಕೆಲಸಕ್ಕೆ ಬಾರದು ಎಂಬ ಅಭಿಪ್ರಾಯವೂ ಇದೆ.

Advertisement

ಆದ್ದರಿಂದಲೇ ಮುನ್ನೆಚ್ಚರಿಕೆಯಾಗಿ ಎಲ್ಲ ಸಾರ್ವಜನಿಕರೂ ಪರಸ್ಪರ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಉತ್ತಮ. ಜತೆಗೆ ಶಂಕಿತ ರೋಗ ಲಕ್ಷಣಗಳುಳ್ಳವರ ಜತೆಗೆ ವ್ಯವಹರಿಸುವ ಆರೋಗ್ಯ ಸೇವಾ ಸಿಬಂದಿ ಸಾಕಷ್ಟುಅಂತರ ಕಾಯ್ದುಕೊಳ್ಳುವ ಜತೆಗೆ ಮೈಯೆಲ್ಲ ಮುಚ್ಚುವಂತಹ ಸೋಂಕು ರಕ್ಷಕ ಮೇಲುಡುಗೆ ಧರಿಸುವುದು ಕ್ಷೇಮಕರ.

ಹೆಚ್ಚು ಉಷ್ಣತೆಯಲ್ಲೂ ಕೋವಿಡ್ 19 ವೈರಸ್‌ ಬದುಕಬಲ್ಲುದು : ಇದುವರೆಗೆ ಕೋವಿಡ್ 19 ವೈರಸ್‌ ಅಧಿಕ ತಾಪಮಾನದಲ್ಲಿ ಬೇಗನೆ ಸಾವನ್ನಪ್ಪುತ್ತದೆ ಎಂದು ಹೇಳಲಾಗಿತ್ತು. ಆದರೆ ಇದು ಕೂಡ ಬಹುತೇಕ ಸುಳ್ಳು ಎಂದು ಸಾಬೀತಾಗಿದೆ. ಚೀನದ ನ್ಯಾನ್‌ಜಿಂಗ್‌ ಮೆಡಿಕಲ್‌ ಯುನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ 25 ಡಿಗ್ರಿ ಸೆ.ಯಿಂದ 41 ಡಿಗ್ರಿ ಸೆ.ವರೆಗಿನ ತಾಪ; ಶೇ.60ರಷ್ಟು ತೇವಾಂಶವಿರುವ ಈಜುಕೊಳದ ವಾತಾವರಣದಲ್ಲಿ ಕೊರೊನಾ ವೈರಸ್‌ ದೀರ್ಘ‌ಕಾಲ ಬದುಕಬಲ್ಲ ಸಾಮರ್ಥ್ಯ ಪ್ರದರ್ಶಿಸಿರುವುದು ಗೊತ್ತಾಗಿದೆ. ಇಲ್ಲೂ ವಾತಾವರಣದ ಆರ್ದ್ರತೆ ಪ್ರಮುಖ ಪಾತ್ರ ವಹಿಸಿರುವುದು ಸಂಭಾವ್ಯ. ಬೇಸಗೆಯ ಉಗ್ರ ತಾಪಮಾನ ಕೊರೊನಾ ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲುದು ಎಂದೇ ಇದುವರೆಗೆ ಭಾವಿಸಲಾಗಿತ್ತು. ಆದರೆ ಈಗ ಇದು ಸಾಮಾನ್ಯ ಫ‌ೂ ಉಂಟುಮಾಡುವ ವೈರಸ್‌ಗಳಿಗಷ್ಟೇ ಮಾರಕ ವಿನಾ ಕೋವಿಡ್‌-19ಗಲ್ಲ ಎಂಬುದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next