Advertisement

ಬೇಕಿದೆ ಕೋಟಕ್ಕೆ ಇನ್ನಷ್ಟು ಮೂಲಸೌಕರ್ಯ

12:17 AM Jan 28, 2020 | Sriram |

ಕೋಟ ಬ್ರಹ್ಮಾವರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ. ಅಭಿವೃದ್ಧಿಯ ದೃಷ್ಟಿಯಲ್ಲಿ ಇಲ್ಲಿನ ಆಡಳಿತ ಕೇಂದ್ರ ಒಂದಷ್ಟು ಹಿಂದುಳಿದಿದೆ. ಹೀಗಾಗಿ ಭವಿಷ್ಯದ 10-15ವರ್ಷಗಳಲ್ಲಿ ಇಲ್ಲಿನ ಬೆಳವಣಿಗೆಗೆ ಬೇಕಾಗುವ ಸೌಲಭ್ಯಗಳ ಕುರಿತಾದ ಒಂದು ವರದಿ ಇಲ್ಲಿದೆ.

Advertisement

ಕೋಟ: ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ವಿಸ್ತಾರವಾದ ಭೌಗೋಳಿಕ ವ್ಯಾಪ್ತಿ ಹಾಗೂ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಈ ಹೋಬಳಿಯ ಮುಖ್ಯ ಆಡಳಿತ ಕೇಂದ್ರ ಕೋಟತಟ್ಟು ಹಾಗೂ ಕೋಟ ಗ್ರಾ.ಪಂ. ನಡುವಿನ ಮುಖ್ಯ ಪೇಟೆಯಾದ ಕೋಟದಲ್ಲಿದೆ.

31 ಗ್ರಾಮ, 14 ಗ್ರಾ.ಪಂ. ಹಾಗೂ 1 ಪ.ಪಂ.ಗಳನ್ನು ಹೋಬಳಿ ಒಳಗೊಂಡಿದೆ. ಭೌಗೋಳಿಕವಾಗಿ 50,588.37 ಎಕ್ರೆ ವಿಸ್ತೀರ್ಣ ಹೊಂದಿದ್ದು 96,556 ಜನಸಂಖ್ಯೆಯನ್ನು ಹೊಂದಿದೆ. 7753 ಹೆಕ್ಟೇರ್‌ ಕೃಷಿ ಭೂಮಿ ಹಾಗೂ 11,400 ಮಂದಿ ರೈತರು ಇಲ್ಲಿದ್ದಾರೆ. ಹೀಗಾಗಿ ಇದು ಹೆಬ್ರಿ ತಾಲೂಕಿಗಿಂತ ಹೆಚ್ಚು ಗ್ರಾಮ ಹಾಗೂ ಜನಸಂಖ್ಯೆಯನ್ನು ಹೊಂದಿದೆ.

ಈಗಿರುವ ಸೌಲಭ್ಯಗಳು
ನಾಡಕಚೇರಿ, ಅಟಲ್‌ ಜೀ ಜನಸ್ನೇಹಿ ಕೇಂದ್ರ, ಕಂದಾಯ ನಿರೀಕ್ಷಕರ ಕಚೇರಿ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್‌ ಠಾಣೆ, ಮೆಸ್ಕಾಂ ಉಪ ವಿಭಾಗ, ವಿದ್ಯುತ್‌ ಬಿಲ್‌ ಪಾವತಿ ಕೇಂದ್ರ, ಅಂಚೆಕಚೇರಿ, 2 ಗ್ರಾ.ಪಂ. ಆಡಳಿತ ಕಚೇರಿ, 5 ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಸಂಸ್ಥೆಯ 2 ಕೇಂದ್ರ ಶಾಖೆಗಳು, 4 ಸಹಕಾರಿ ಶಾಖೆಗಳು, ಪಡುಕರೆಯಲ್ಲಿನ ಅಂಗನವಾಡಿಯಿಂದ ಪದವಿ ತನಕದ ಶಿಕ್ಷಣ ಗುತ್ಛ (ಪ.ಪೂ. ಹೊರತುಪಡಿಸಿ) 2 ಪ್ರಮುಖ ದೇವಾಲಯ, ಕಾರಂತ ಕಲಾಭವನ, ಪಡುಕರೆ ಕಡಲ ತೀರ, ಜಾನುವಾರು ಆಸ್ಪತ್ರೆ, 3 ಮೀನುಸಂಸ್ಕರಣ ಘಟಕಗಳು, ಹೋರಿಪೈರು, 1ಐಸ್‌ ಪ್ಲ್ರಾಂಟ್‌, ವಾರದ ಸಂತೆ ಮುಂತಾದ ಸೌಲಭ್ಯಗಳು ಕೋಟದಲ್ಲಿವೆೆ.

ಒಂದೇ ಸೂರಿನಲ್ಲಿ ಆಡಳಿತ ಕೇಂದ್ರಕ್ಕೆ ಅವಕಾಶ
ಇಲ್ಲಿನ ಗೋ ಆಸ್ಪತ್ರೆಯ ಸಮೀಪ 1ಎಕ್ರೆಗೂ ಹೆಚ್ಚು ಕಂದಾಯ ಇಲಾಖೆಗೆ ಸೇರಿದ ಭೂಮಿ ಇದ್ದು ಇದರಲ್ಲಿ 50 ಸೆಂಟ್ಸ್‌ ನಾಡಕಚೇರಿಗೆ ಕಾಯ್ದಿರಿಸಲಾಗಿದೆ. ಮುಂದೆ ವಿಶೇಷ ತಹಶೀಲ್ದಾರರು, ಕಂದಾಯ ಅಧಿಕಾರಿಗಳ ಕಚೇರಿ ಇಲ್ಲಿಗೆ ಸ್ಥಳಾಂತರಗೊಂಡಿದೆ. ಇಲ್ಲೇ ಪಕ್ಕದಲ್ಲಿ ಈಗಾಗಲೇ ಕೃಷಿ ಇಲಾಖೆಯ ಕಚೇರಿ ಇದೆ. ಹೀಗಾಗಿ ಮಿಕ್ಕುಳಿದ ಸರಕಾರಿ ಕಚೇರಿಗಳಿಗೂ ಇದೇ ಪರಿಸರದಲ್ಲಿ ಜಾಗ ಕಾಯ್ದಿರಿಸಿದಲ್ಲಿ ಒಂದೇ ಸೂರಿನಡಿ ಎಲ್ಲಾ ಸರಕಾರಿ ಕಚೇರಿಗಳನ್ನು ಸ್ಥಾಪಿಸಲು ಅವಕಾಶವಿದೆ.

Advertisement

ತೊಡಕೇನು?
ಕೋಟ ಹೋಬಳಿ ಕೇಂದ್ರವಾಗಿದ್ದರೂ ಕೂಡ ಸಾಲಿಗ್ರಾಮ ಪೇಟೆ ಈ ಊರನ್ನು ಹಿಂದಿಕ್ಕಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಕೋಟ ಮೂರುಕೈ ಪ್ರತ್ಯೇಕ ತಾಣವಾಗಿ ಬೆಳೆದಿದೆ, ಪಡುಕರೆ ಕೋಟದ ಒಂದು ಭಾಗವಾಗಿದ್ದರೂ ಕೂಡ ಅಷ್ಟೊಂದು ನಿಕಟವಾಗಿಲ್ಲ. ಚತುಷ್ಪಥ ಕಾಮಗಾರಿಯ ಅನಂತರ ಇಲ್ಲಿನ ಮುಖ್ಯ ಪೇಟೆ ಇಬ್ಭಾಗವಾಗಿದೆ. ಈ ಕಾರಣಗಳು ಅಭಿವೃದ್ಧಿಗೆ ತೊಡಕಾಗಿವೆ.

2011ರ ಜನಗಣತಿಯಂತೆ ಕೋಟತಟ್ಟು ಗ್ರಾ.ಪಂ.ನಲ್ಲಿ 5263 ಜನಸಂಖ್ಯೆ ಹಾಗೂ ಕೋಟ ಗ್ರಾ.ಪಂ.ನಲ್ಲಿ 9858 ಜನಸಂಖ್ಯೆ ಇದೆ. ಇದೀಗ 9 ವರ್ಷಗಳ‌ಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಆಡಳಿತಾತ್ಮಕ ಕೇಂದ್ರಗಳ ಅಭಿವೃದ್ಧಿಗೆ ಅವಕಾಶಗಳು ಇರುವುದರಿಂದ ಭವಿಷ್ಯದಲ್ಲಿ ಎರಡು ಗ್ರಾ.ಪಂ.ಗಳು ಸೇರಿ ಪ.ಪಂ. ಆಗಿ ಮೇಲ್ದರ್ಜೆಗೇರಿದರೆ ಬೆಳವಣಿಗೆಗೆ ಮತ್ತಷ್ಟು ಪೂರಕವಾಗಲಿದೆ.

ಒಂದೇ ಸೂರಿನಡಿ ವ್ಯವಸ್ಥೆ
ಗೋ ಆಸ್ಪತ್ರೆ ಸಮೀಪ 50ಸೆಂಟ್ಸ್‌ ಜಾಗ ಕಂದಾಯ ಕಚೇರಿಗೆ ಮೀಸಲಿರಿಸಲಾಗಿದ್ದು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮಿಕ್ಕುಳಿದ ಸ್ಥಳವನ್ನು ಸರಕಾರಿ ಕಚೇರಿಗಳಿಗೆ ಮೀಸಲಿಡುವ ಚಿಂತನೆ ಇದೆ.
– ರಾಜು, ಕಂದಾಯ ನಿರೀಕ್ಷಕರು ಕೋಟ

ದೂರದೃಷ್ಟಿ ಇರಲಿ
ಕೋಟದ ಅಭಿವೃದ್ಧಿ ಗೆ ಸಾಕಷ್ಟು ಪೂರಕ ಅಂಶಗಳಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು ದೂರದೃಷ್ಟಿಯಿಂದ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ.
– ಕೋಟ ಗಿರೀಶ್‌ ನಾಯಕ್‌, ಸ್ಥಳೀಯರು

ಸಮಗ್ರ ಯೋಜನೆ ಅಗತ್ಯ
ಕರಾವಳಿ ಸೇರಿದಂತೆ ಎಲ್ಲಾ ಮುಖ್ಯ ಭಾಗಗಳ ಸಂಪರ್ಕವಿದ್ದು ಬೆಳವಣಿಗೆಗೆ ಒಳ್ಳೆಯ ಅವಕಾಶವಿದೆ. ಹೀಗಾಗಿ ಅಭಿವೃದ್ಧಿ ವಿಶೇಷ ಯೋಜನೆ, ಅನುದಾನಗಳು ಅಗತ್ಯವಿವೆ.
– ಸಂತೋಷ್‌ ಪ್ರಭು,
ವಾರ್ಡ್‌ ಸದಸ್ಯರು, ಕೋಟ ಗ್ರಾ.ಪಂ.

ಆಡಳಿತ
ಕೋಟ ಮೇಲ್ದರ್ಜೆಗೇರಿದಾಗ ಜನರಿಗೂ ಹೆಚ್ಚಿನ ಪ್ರಯೋಜನವಾಗುತ್ತದೆ.

ಆಗಬೇಕಾಗಿರುವುದು
-ಎಲ್ಲಾ ಸರಕಾರಿ ಕಚೇರಿ ಒಂದೇ ಸೂರಿನಡಿ ಸೇವೆ
-ಮಣೂರು-ಪಡುಕರೆ-ಪಾರಂಪಳ್ಳಿ ಪ್ರದೇಶಗಳಿಗೆ ಬಸ್ಸು ಸೌಲಭ್ಯ
-ವಿದ್ಯಾರ್ಥಿನಿಲಯ, ಪ್ರವಾಸಿ ಮಂದಿರ
-ರಿಕ್ಷಾ -ಟ್ಯಾಕ್ಸಿನಿಲ್ದಾಣ
– ಕ್ರೀಡಾಂಗಣ, ಉದ್ಯಾನವನ
– ಕೃಷಿ ಯಂತ್ರೋಪಕರಣಗಳ ಮಳಿಗೆ
– ಎ.ಪಿ.ಎಂ.ಸಿ. ಉಪಕೇಂದ್ರದಲ್ಲಿ ಸಮಗ್ರ ಕೃಷಿ ಚಟುವಟಿಕೆ
– ಸರ್ವೀಸ್‌ ರಸ್ತೆ ಗಿಳಿಯಾರು ತಿರುವಿನ ತನಕ ವಿಸ್ತರಣೆ
– ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next