Advertisement

ರಸ್ತೆ ದುರಸ್ತಿಗೆ ಸಾಲಲ್ಲ ಹಣ

11:15 AM Dec 06, 2019 | Team Udayavani |

ಬಾಗಲಕೋಟೆ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಒಂದೇ ವರ್ಷದಲ್ಲಿ ಜಿಲ್ಲೆಯ 701 ಕಿ.ಮೀ ರಸ್ತೆ ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ನೀಡಿದ ಹಣ, ಗುಂಡಿ ಮುಚ್ಚಲೂ ಸಾಕಾಗಲ್ಲ ಎಂಬ ಮಾತು ಆಡಳಿತ ಪಕ್ಷದ ಜನಪ್ರತಿನಿಧಿಗಳಿಂದಲೇ ಕೇಳಿಬರುತ್ತಿದೆ.

Advertisement

ಹೌದು, ಆಗಸ್ಟ್‌ನಲ್ಲಿ ಬಂದ ಭಾರಿ ಪ್ರವಾಹ ಹಾಗೂ ಸೆಪ್ಟೆಂಬರ್‌ನಲ್ಲಿ ಉಂಟಾದ ಮಳೆಯಿಂದ ಜಿಲ್ಲೆಯ ಆರು ತಾಲೂಕು ವ್ಯಾಪ್ತಿ (ಹೊಸ ತಾಲೂಕು ಸಹಿತ)317 ರಸ್ತೆಗಳು ಹಾಳಾಗಿವೆ.

ಅತಿವೃಷ್ಟಿ ಹಾಗೂ ಮಳೆಯಿಂದ ಯಾನಿಯಾದ ಜಿಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಸಮೀಕ್ಷೆ ಮಾಡಿದ್ದು, ಒಟ್ಟು 701.58 ಕಿ.ಮೀ ರಸ್ತೆ ಹಾನಿಯಾಗಿದ್ದು, ಇದಕ್ಕಾಗಿ 3099.82 (30.99 ಕೋಟಿ) ಅನುದಾನದ ಅಗತ್ಯವಿದೆ ಎಂದು ಜಿಪಂ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ, ಕೇವಲ 3.57 ಕೋಟಿ ಅನುದಾನ ಜಿಲ್ಲೆಗೆ ಬಂದಿದೆ‌.

ವಾರಗಳ ಕಾಲ ನೀರಲ್ಲೇ ನಿಂತಿದ್ದವು: ಭೀಕರ ಪ್ರವಾಹ ಈ ಬಾರಿ ಜಿಲ್ಲೆಯಲ್ಲಿ ಉಂಟಾಗಿತ್ತು. 198 ಗ್ರಾಮಗಳು ಅಕ್ಷರಶಃ ನೀರಿನಲ್ಲಿದ್ದರೆ, 224 ಗ್ರಾಮಗಳ ರೈತರು ಬೆಳೆದ ಬೆಳೆ, ಸಂಪೂರ್ಣ ಹಾನಿಯಾಗಿತ್ತು. ಜಮಖಂಡಿ, ಮುಧೋಳ, ಹುನಗುಂದ ಹಾಗೂ ಬಾದಾಮಿ ತಾಲೂಕಿನ ಹಲವು ಮನೆ, ರಸ್ತೆಗಳು ವಾರಗಟ್ಟಲೇ ನೀರಿನಲ್ಲೇ ನಿಂತಿದ್ದವು. ನೀರು ಇಳಿದ ಮೇಲೆ ರಸ್ತೆಗಳು ಸಂಪೂರ್ಣ ನೆನೆದು ಡಾಂಬರ್‌ ಕಿತ್ತು ಹೋಗಿದೆ.

19 ಸೇತುವೆಸಿಡಿ ಹಾನಿ: ಈ ವರ್ಷ ಜಿಲ್ಲೆಯಲ್ಲಿ 19 ಸಿಡಿ, ಸೇತುವೆ ಹಾನಿಯಾಗಿವೆ. ಬಾದಾಮಿ-4, ಹುನಗುಂದ-1, ಜಮಖಂಡಿ-7 ಹಾಗೂ ಮುಧೋಳ ತಾಲೂಕಿನಲ್ಲಿ 7 ಸಿ.ಡಿ/ ಸೇತುವೆ ಹಾನಿಯಾಗಿದ್ದು, ಇವುಗಳ ಪುನರ್‌ ನಿರ್ಮಾಣಕ್ಕೆ 65.05 ಲಕ್ಷ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೇವಲ 11.40 ಲಕ್ಷ ಅನುದಾನ ನೀಡಿದ್ದು, ಇದರಿಂದ ತಾತ್ಕಾಲಿಕ ದುರಸ್ತಿ ಮಾಡುವುದೂ ಕಷ್ಟವಾಗಿದೆ ಎನ್ನಲಾಗಿದೆ.

Advertisement

ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಗ್ರಾಮೀಣ ರಸ್ತೆ, ಸಿಡಿ/ಸೇತುವೆ ನಿರ್ಮಾಣಕ್ಕೆ ಒಟ್ಟು 30.64 ಕೋಟಿ ಪ್ರಸ್ತಾವನೆ ಬಂದಿತ್ತು ಎನ್‌ಡಿಆರ್‌ಎಫ್‌ ನಿಯಾಮಾವಳಿ ಪ್ರಕಾರ, ತಾತ್ಕಾಲಿಕ ದುರಸ್ತಿಗಾಗಿ ಗ್ರಾಮೀಣ ರಸ್ತೆಗಾಗಿ 3.57 ಕೋಟಿ ಹಾಗೂ ಸಿಡಿ/ ಸೇತುವೆಗಳಿಗಾಗಿ 11.40 ಲಕ್ಷ ರೂ. ಅನುದಾನ ನೀಡಲಾಗಿದೆ. –ಮಹಾದೇವ ಮುರಗಿ, ಅಪರ ಜಿಲ್ಲಾಧಿಕಾರಿ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next