Advertisement
ದೇಶದ ರಾಜಕಾರಣದಲ್ಲಿ ಪಕ್ಷಾಂತರ ಪಿಡುಗು ಕ್ಯಾನ್ಸರ್‌ನಂತೆ ಹಬ್ಬುತ್ತಿದ್ದು, ಅದಕ್ಕೆ ಸೂಕ್ತ ಚುಚ್ಚು ಮದ್ದು ನೀಡಬೇಕಾದ ಅಗತ್ಯವಿದ್ದು, ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪ್ರಕರಣದಲ್ಲಿ ಸಂವಿಧಾನದಲ್ಲಿ ಸ್ಪೀಕರ್‌ಗೆ ಇರುವ ಅಧಿಕಾರ, ಶಾಸಕರಿಗೆ ಇರುವ ಹಕ್ಕಿನ ಬಗ್ಗೆ ವಿಸ್ತೃತವಾಗಿ ಚಿಂತನೆ ನಡೆಸಿ, ಈಗಿರುವ ಕಾನೂನಿನ ವ್ಯಾಪ್ತಿಯಲ್ಲಿ ತೀರ್ಪು ಪ್ರಕಟಿಸಿರುವುದು ಸದ್ಯದ ಗಾಯಕ್ಕೆ ಮುಲಾಮು ಹಚ್ಚಿದಂತಾಗಿದೆ.
Related Articles
Advertisement
ಪಕ್ಷಾಂತರ ವಿಷಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಜನ ಪ್ರತಿನಿಧಿಗಳ ನಡವಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ನೈತಿಕತೆಯ ಪ್ರಶ್ನೆ ಎತ್ತಿದ್ದು, ರಾಜಕೀಯದಲ್ಲಿ ನೈತಿಕತೆಯ ಪಾಲನೆ ಕಡಿಮೆಯಾಗುತ್ತಿದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದು, ರಾಜಕೀಯ ವ್ಯವಸ್ಥೆಯ ಸುಧಾರಣೆಗೆ ಪರೋಕ್ಷವಾಗಿ ನಿರ್ದೇಶನ ನೀಡಿದಂತಿದೆ.
ವಿಶೇಷವಾಗಿ 17 ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಸರಿ ಎಂದು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್ ಅವರ ಅನರ್ಹತೆಯ ಅವಧಿಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎನ್ನುವ ಮೂಲಕ ಸಂವಿಧಾನದ 10 ನೇ ಪರಿಚ್ಛೇದ ಪಕ್ಷಾಂತರ ನಿಷೇಧ ಕಾಯ್ದೆ ಇನ್ನೂ ಬಲಗೊಳ್ಳಬೇಕಿದೆ ಎನ್ನುವುದನ್ನು ಸೂಚಿಸಿದಂತಿದೆ.
ಆದರೆ, ಈ ಪ್ರಕರಣದ ಮೂಲಕ ಪಕ್ಷಾಂತರಿಗಳಿಗೆ ಸೂಕ್ತ ಸಂದೇಶ ರವಾನೆಯಾಗಬೇಕೆಂಬ ಸಾಮಾನ್ಯ ಜನರ ಬಯಕೆ ಇನ್ನೂ ಜೀವಂತವಾಗಿ ಉಳಿಯುವಂತೆ ಮಾಡಿದೆ. ಸುಪ್ರೀಂ ಕೋರ್ಟ್ ತನಗಿರುವ ಅಧಿಕಾರ ಬಳಸಿಕೊಂಡು ತೀರ್ಪು ನೀಡಿದ್ದು, ಉಪ ಚುನಾವಣೆಯಲ್ಲಿ ಮತದಾರರು ತಮ್ಮ ವಿವೇಚನೆ ಬಳಸಿ ನೀಡುವ ಮತ ಪಕ್ಷಾಂತರ ಪಿಡುಗಿಗೆ ಮದ್ದಾಗಬೇಕಿದೆ. ಅಲ್ಲದೇ ಪಕ್ಷಾಂತರ ನಿಷೇಧ ಕಾಯ್ದೆ ಬಲಗೊಳಿಸಲು ಎಲ್ಲ ರಾಜಕೀಯ ಪಕ್ಷಗಳೂ ಪ್ರಾಮಾಣಿಕ ಯತ್ನ ಮಾಡಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ.