Advertisement
ನನಗೆ 12 ಸೆಂಟ್ಸ್ ಜಾಗ ಮತ್ತು ಅದರಲ್ಲಿ ಒಂದು ಮನೆಯೂ ಇತ್ತು. ಮನೆ ಈಗ ಜರಿದು ಬಿದ್ದಿದೆ. ಯಾರೂ ಇಲ್ಲದ ಮೇಲೆ ಮನೆಯಲ್ಲಿದ್ದೇನು ಮಾಡುವುದೆಂದು ಬೀದಿಗೆ ಬಂದಿದ್ದೇನೆ. ಸುತ್ತತೊಡಗಿದೆ. ಆರು ತಿಂಗಳಿನಿಂದ ಇಲ್ಲೇ ಮಲಗುತ್ತಿದ್ದೇನೆ. ಮಧ್ಯಾಹ್ನ ದೇವಸ್ಥಾನದ ಛತ್ರಕ್ಕೆ ಹೋಗಿ ಊಟ ಮಾಡುತ್ತೇನೆ.ಯಾರಾದರೂ ಅಲ್ಪಸ್ವಲ್ಪ ದುಡ್ಡು ಕೊಟ್ಟರೆ ಅದರಿಂದ ಬೆಳಗ್ಗಿನ ತಿಂಡಿ ಹೊಟೇಲ್‌ನಲ್ಲಿ ತಿನ್ನುತ್ತೇನೆ. ರಾತ್ರಿ ನೀರು ಕುಡಿದು ಮಲಗುತ್ತೇನೆ ಎನ್ನುತ್ತಾರೆ ಹುಕ್ರಪ್ಪ ಮೂಲ್ಯ. ಯಾರಾದರೂ ನನ್ನನ್ನು ಆಶ್ರಮಕ್ಕೆ ಸೇರಿಸಿದರೂ ನೆಮ್ಮದಿಯಿಂದ ಬದುಕಬಲ್ಲೆ ಎನ್ನುತ್ತಾ ಕಣ್ಣೀರಾಗುತ್ತಾರೆ ಈ ಅಜ್ಜ.
ಇವರ ಸ್ಥಿತಿ ಕಂಡು ಹತ್ತಿರ ಹೋಗಿ ವಿಚಾರಿಸಿದರೆ ಮೊದಲಿಗೆ ಮಾತನಾಡಲು ನಿರಾಕರಿಸುವ ಅಜ್ಜ ಆತ್ಮೀಯತೆ ತೋರಿದರೆ ನೆನಪಿನಾಳದಿಂದ ನೋವಿನ ಕಥೆ ಹೇಳುತ್ತಾರೆ. ನಾನು ಯುವಕನಾಗಿದ್ದ ಎಂತಹ ಕಠಿಣ ಕೆಲಸವಾದರೂ ಮಾಡುತ್ತಿದ್ದೆ. ಅಷ್ಟೊಂದು ನೈಪುಣ್ಯತೆ ನನ್ನಲ್ಲಿತ್ತು. ಈಗ ಏನಿಲ್ಲ ನೋಡಿ..! ನನಗೆ ಮೂವರು ಗಂಡು ಮಕ್ಕಳು. ಮೂವರು ಕೂಡ ಅಕಾಲಿಕ ಮೃತ್ಯುಗೀಡಾಗಿದ್ದಾರೆ. ಒಬ್ಬ ಸಣ್ಣದರಲ್ಲೇ ತೀರಿಕೊಂಡರೆ ಮತ್ತೊಬ್ಬ ಕೆಲ ವರ್ಷಗಳ ಬಳಿಕ ತೀರಿ ಹೋದ. ಇನ್ನೊಬ್ಬ ಯುವಕನಾಗಿ ಒಳ್ಳೆ ಕೆಲಸದಲ್ಲಿದ್ದ. ಅವನೂ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದೆ. ಪತ್ನಿ ಮಾತ್ರ ಜತೆಗಿದ್ದಳು. ಅವಳೂ ಕೂಡ ಹೋದ ಮೇಲೆ ನನಗೆ ಯಾರೂ ಇಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.