ನಗರ: ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದರೂ ಪರಿಶ್ರಮದಿಂದ ದುಡಿದು ಜೀವನ ನಡೆಸುತ್ತಿದ್ದ ಯುವನೋರ್ವನಿಗೆ ಏಕಾಏಕಿ ಎದುರಾದ ಸಂಕಷ್ಟ ಪ್ರತಿದಿನ ಕಣ್ಣೀರಿನೊಂದಿಗೆ ಕಳೆಯುವಂತೆ ಮಾಡಿದೆ.
ತಾಲೂಕಿನ ಕುರಿಯ ಗ್ರಾಮದ ಬೊಳಂತಿಮಾರ್ ನಿವಾಸಿ ನಾರಾಯಣ ಪೂಜಾರಿ ಮತ್ತು ಚಂದ್ರಾವತಿ ಅವರ ಪುತ್ರ ಸತೀಶ್ ಪೂಜಾರಿ (31) ಈಗ ದುಡಿಯುವುದಿರಲಿ, ಹಾಸಿಗೆಯಿಂದ ಎದ್ದು ಕೂರುವುದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ. 2016 ರ ನ. 11ರಂದು ಬೆಳಗ್ಗೆ ದುಡಿಯಲು ತೆರಳಿ ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಮೇಲಿನಿಂದ ಬಿದ್ದು ಗಾಯಗೊಂಡು ಅಂದಿನಿಂದ ಹಾಸಿಗೆ ಹಿಡಿದವರು ಅದೇ ಸ್ಥಿತಿಯಲ್ಲಿದ್ದಾರೆ.
ಅವರ ಸ್ಥಿತಿಗೆ ಇಡೀ ಕುಟುಂಬ ಇದ್ದಬದ್ದ ಹಣವನ್ನೆಲ್ಲ ಒಟ್ಟು ಮಾಡಿ ಚಿಕಿತ್ಸೆ ನೀಡುತ್ತಲೇ ಇದೆ. ದಾನಿಗಳು ಅಪಾರ ಪ್ರಮಾಣದಲ್ಲಿ ನೆರವು ನೀಡಿದ್ದಾರೆ. ಆದರೆ ಸತೀಶ್ ಪೂಜಾರಿ ಪೂರ್ಣ ಪ್ರಮಾಣದಲ್ಲಿ ಎದ್ದು ನಿಂತು ಎಲ್ಲರಂತಾಗಬೇಕಾದರೆ ಇನ್ನೂ ಹಲವು ಲಕ್ಷ ರೂ. ಬೇಕಾಗಿದೆ. ನಿರಂತರ ಚಿಕಿತ್ಸೆಯೂ ಬೇಕಾಗಿದೆ. ದಾನಿಗಳು, ಸಂಘ ಸಂಸ್ಥೆಗಳು ಮನಪೂರ್ವಕವಾಗಿ ಈ ಯುವಕನ ಸಂಕಷ್ಟಕ್ಕೆ ನೆರವಾದರೆ ಅವರು ಮತ್ತೆ ಆರೋಗ್ಯವಂತರಾಗಿ ಹಿಂದಿನ ಆರೋಗ್ಯವಂತ ಸ್ಥಿತಿಗೆ ಬರಲಿದ್ದಾರೆ.
ಬೆನ್ನುಹುರಿ ಮುರಿತದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಸತೀಶ್‌ಗೆ 3 ವರ್ಷದಿಂದ ಶಸ್ತ್ರಚಿಕಿತ್ಸೆ, ಚಿಕಿತ್ಸೆ ಮಾಡಲಾಗುತ್ತಿದೆ. ಗೆಳೆಯರು ಹಣ ಹೊಂದಿಸಿ ನೀಡಿದ್ದಾರೆ. ಪ್ರತೀ ತಿಂಗಳು 8 ಸಾವಿರದಷ್ಟು ಹಣ ಔಷಧಿಗೆಂದೇ ಖರ್ಚಾ ಗುತ್ತಿದೆ. ಅಪಾರ ಭರವಸೆಯೊಂದಿಗೆ ತಿಂಗಳ ಹಿಂದೆ ತಮಿಳುನಾಡಿನ ವೆಲ್ಲೂರಿ ನಲ್ಲಿರುವ ಸಿಎಂಸಿ ಆಸ್ಪತ್ರೆಗೆ ದಾಖಲಾದ ಸತೀಶ್, ನಿರ್ಣಾಯಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಲ್ಲೂ 10 ಲಕ್ಷ ರೂ. ಅಧಿಕ ವೆಚ್ಚವಾಗಿದೆ.
ಈ ನಿಟ್ಟಿನಲ್ಲಿ ಸಹೃದಯಿ ದಾನಿಗಳು ನೆರವು ನೀಡಬೇಕೆಂದು ಸತೀಶ್ ಪೂಜಾರಿ ಮತ್ತು ಅವರ ಹೆತ್ತವರು ವಿನಂತಿಸಿದ್ದಾರೆ. ಬ್ಯಾಂಕ್ ಖಾತೆ: ಸತೀಶ್ ಬಿ., ವಿಜಯ ಬ್ಯಾಂಕ್, ಕುಂಬ್ರ ಶಾಖೆ, ಖಾತೆ ಸಂಖ್ಯೆ- 124201012000 104 (ಐಎಫ್‌ಎಸ್‌ಸಿ ವಿಐಜೆಬಿ – 0001242). ಇದಕ್ಕೆ ಹಣ ಜಮೆ ಮಾಡಬಹುದು.