Advertisement

ಹಣ್ಣಿನ ಸಸಿ, ಅಲಂಕಾರಿಕ ಸಸಿ ಬೇಕಾ?, ಸಸ್ಯಸಂತೆಗೆ ಬನ್ನಿ

02:38 PM Jul 27, 2019 | Suhan S |

ಮೈಸೂರು: ಗುಣಮಟ್ಟದ ಸಪೋಟ, ಪಪ್ಪಾಯ, ಮಾವು, ನಿಂಬೆ ಹೀಗೆ ವಿವಿಧ ಜಾತಿಯ ಕಸಿ ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ಒದಗಿಸಿಕೊಡುವ ಸಸ್ಯಸಂತೆ ಪ್ರದರ್ಶನ ಮತ್ತ ಮಾರಾಟ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು.

Advertisement

ನಗರದ ಕರ್ಜನ್‌ ಪಾರ್ಕ್‌ ಆವರಣದಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ ಯೋಜನೆಯಡಿ ಮೂರು ದಿನಗಳ ಸಸ್ಯಸಂತೆ ಕಾರ್ಯಕ್ರಮಕ್ಕೆ ಮೈಸೂರು ವಿಭಾಗ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ 21 ತೋಟಗಾರಿಕೆ ಕ್ಷೇತ್ರ ನರ್ಸರಿಗಳಿದ್ದು, ಮಾವು, ಸಪೋಟ, ಹಲಸು, ಸೀಬೆ, ನಿಂಬೆ, ಬೆಟ್ಟದನೆಲ್ಲಿ, ನೇರಳೆ, ತೆಂಗು, ಅಡಿಕೆ, ನುಗ್ಗೆ, ಕರಿಬೇವು, ವೀಳ್ಯೆದೆಲೆ, ಮಲ್ಲಿಗೆ, ಅಲಂಕಾರಿಕ ಗಿಡಗಳು ಹಾಗೂ ಇತರೆ ಸಸಿಗಳ ಸಸ್ಯಾಭಿವೃದ್ಧಿ ಮಾಡಿ ಕಡಿಮೆ ದರದಲ್ಲಿ ರೈತರಿಗೆ ಅನುಕೂಲವಾಗುವಂತೆ ಗಿಡಗಳನ್ನು ಮಾರಾಟ ಮಾಡುವ ಕಾರ್ಯವಾಗಿದೆ ಎಂದು ಹೇಳಿದರು.

25 ವಿವಿಧ ಜಾತಿಯ ಸಸಿಗಳಿದ್ದು, ಮನೆಗಳ ಸುತ್ತಮುತ್ತ ನೆಡಬಹುದಾದ ನುಗ್ಗೆ, ಕರಿಬೇವು, ಮೈಸೂರು ವಿಳ್ಯದೆಲೆ, ನಂಜನಗೂಡು ರಸಬಾಳೆ ಕಂದುಗಳು ಹೀಗೆ ಅನೇಕ ಸಸಿಗಳು ದೊರೆಯಲಿವೆ. ತೋಟಗಾರಿಕೆ ಇಲಾಖೆಯಲ್ಲಿ ರೈತರ ಪ್ರೋತ್ಸಾಹಕ್ಕಾಗಿ ಅನೇಕ ಯೋಜನೆಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಸ್ಯಸಂತೆ ಯಾವುದೇ ರೀತಿಯ ಲಾಭಗಳಿಕೆಯ ಉದ್ದೇಶವಲ್ಲ. ಗುಣಮಟ್ಟದ ಸಸಿಗಳನ್ನು ರೈತರಿಗೆ ಒದಗಿಸುವುದಾಗಿದೆ ಎಂದು ತಿಳಿಸಿದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಹಬೀಬಾ ನಿಶಾತ್‌ ಮಾತನಾಡಿ, ಇಲಾಖೆಯ ಸುಮಾರು 500 ಎಕರೆ ಜಾಗದಲ್ಲಿ ವಿವಿಧ ಜಾತಿಯ ಗುಣಮಟ್ಟದ ಕಸಿ ಸಸಿಗಳನ್ನು ಸಿದ್ಧಪಡಿಸಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಈ ಸಸ್ಯಸಂತೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.

Advertisement

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ.ರುದ್ರೇಶ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next