ಜೇವರ್ಗಿ: ಕೊರೊನಾ ಹಾವಳಿ ಕಡಿಮೆಯಾಗಿದೆ ಎಂದು ಭಾವಿಸಿ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ಇತ್ತೀಚೆಗೆ ದೇಶ-ವಿದೇಶಗಳಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗುತ್ತಿದ್ದು, ಜನತೆ ಜಾಗೃತಿ ವಹಿಸುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಆಮ್ಲಜನಕ ಘಟಕವನ್ನು ಗುರುವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇಗವಾಗಿ ಒಮಿಕ್ರಾನ್ ಹರಡುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಇದನ್ನು ತಡೆಯಲು ಮುಂಜಾಗ್ರತೆ ಅಗತ್ಯ ಎಂದರು.
ಈಗಾಗಲೆ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ 50 ಕೋವಿಡ್ ಪ್ರಕರಣಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಜನರು ಒಮಿಕ್ರಾನ್ ಸೋಂಕಿನ ಕುರಿತು ಹಗುರವಾಗಿ ತೆಗೆದುಕೊಳ್ಳದೇ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು, ಎರಡು ಲಸಿಕೆ ಹಾಕಿಸಿಕೊಂಡು ಓಡಾಡಬೇಕು ಎಂದು ಹೇಳಿದರು.
ಜೇವರ್ಗಿ, ಯಡ್ರಾಮಿ ತಾಲೂಕಿನಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ. ಭಾಗಶಃ ಕೆಲವೆಡೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.
ಬಳಿಕ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳರೋಗಿಗಳ ಕೋಣೆ, ಔಷಧ ಕೋಣೆ, ಎಕ್ಸ್‌ರೇ ಕೋಣೆ ಪರಿಶೀಲನೆ ನಡೆಸಿದ ಡಾ| ಅಜಯಸಿಂಗ್ ಸಿಬ್ಬಂದಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಜಿಪಂ ಮಾಜಿ ಸದಸ್ಯ ಕಾಸಿಂ ಪಟೇಲ ಮುದಬಾಳ, ರಾಜಶೇಖರ ಸೀರಿ, ಶಿವುಕುಮಾರ ಕಲ್ಲಾ, ಶ್ರೀಶೈಲಗೌಡ ಪೊಲೀಸ್ ಪಾಟೀಲ, ಚಂದ್ರಶೇಖರ ನೇರಡಗಿ, ಇಮ್ರಾನ್ ಕಾಸರಬೋಸಗಾ, ರಹಿಮೋದ್ದಿನ್ ಇಜೇರಿ, ಮಹಾಂತೇಶ ಹಾದಿಮನಿ, ಮರೆಪ್ಪ ಸರಡಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಇದ್ದರು.