ಸಸಿಹಿತ್ಲು: ಕರಾವಳಿ ಭಾಗದಲ್ಲಿ ಮಲಿನ ಮುಕ್ತ ಕಡಲನ್ನು ಕಾಣುವಂತಾಗಲು, ಪರಿಸರ ಇಲಾಖೆಯೊಂದಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕಾ ಸಿಬಂದಿ ಪರಸ್ಪರ ಕೈ ಜೋಡಿಸಿರುವುದರಿಂದ 13 ದಿನಗಳ ಈ ಅಭಿಯಾನ ಯಶಸ್ಸಾಗಿದೆ ಎಂದು ಪರಿಸರ ಇಲಾಖೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಡಾ| ದಿನೇಶ್ ಕುಮಾರ್ ಹೇಳಿದರು.
ಸಸಿಹಿತ್ಲು ಕಡಲ ತೀರ ಹಾಗೂ ಶ್ರೀ ಭಗವತೀ ದೇವಸ್ಥಾನದ ಪರಿಸರದಲ್ಲಿ ಪರಿಸರ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಎಂಆರ್‌ಪಿಎಲ್‌ನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್)ಯ ಯೋಧರ ತಂಡ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ತಂಡಗಳೊಂದಿಗೆ ಬುಧವಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ ವಿದ್ಯಾರ್ಥಿಗಳಿಗೆ ಯುವಜನರಿಗೆ ಹಾಗೂ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಹಾಗೂ ಸಮುದ್ರ ದಂಡೆಯಲ್ಲಿ ಶೇಖರಣೆಯಾಗುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಬೀಚ್ ಸ್ವಚ್ಛಗೊಳಿಸುವ ಪ್ರಯತ್ನ ನಡೆಸಿದ್ದೇವೆ ಎಂದರು.
ಸ್ವಯಂ ಪ್ರೇರಣೆಯಿಂದ ಜಾಗೃತಿ
ಶ್ರೀನಿವಾಸ್ ಕಾಲೇಜ್ ಆಫ್ ಹೆಲ್ತ್ ಸೈನ್ಸ್ ವಿಭಾಗದ ಡೀನ್ ಡಾ| ರವಿ ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಜಾಗೃತಿಗೊಳ್ಳಲು ಸಹಕಾರಿಯಾಗಿದೆ ಎಂದರು.
ಮೀನುಗಾರಿಕಾ ಉಪ ನಿರ್ದೇಶಕ ಮಹೇಶ್ ಕುಮಾರ್ ಸ್ವಚ್ಛತಾ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಎಂಆರ್‌ಪಿಎಲ್, ಮಂತ್ರಾ ಸರ್ಫ್ ಕ್ಲಬ್, ಸರ್ಫಿಂಗ್ ಸ್ವಾಮಿ ಫೌಂಡೇಶನ್, ಸ್ಟರ್ಲಿಂಗ್ ಫೂಡ್ಸ್, ಬಾವಾ ಫೂಡ್ಸ್ ಮುಕ್ಕ, ರಫ್ತಾರ್ ಫೂಡ್ಸ್ ಮತ್ತಿತರ ಕಂಪೆನಿಗಳ ಸಿಬಂದಿಯೊಂದಿಗೆ ಎಕ್ಸೆಲೆಂಟ್ ಸ್ಕೂಲ್ ಮೂಡಬಿದಿರೆ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸುರತ್ಕಲ್ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ಈ ಸ್ವಚ್ಛತೆಯನ್ನು ಮಾಡಲಾಗಿದೆ ಎಂದರು. ಪಣಂಬೂರು ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ, ಹಳೆಯಂಗಡಿ ಗ್ರಾ.ಪಂ. ನ ಸದಸ್ಯರಾದ ಚಂದ್ರ ಕುಮಾರ್, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬೃಹತ್ ತ್ಯಾಜ್ಯದ ಸ್ವಚ್ಛತೆ
ಸುಮಾರು 500 ಮಂದಿಯ ತಂಡವು ಸಸಿಹಿತ್ಲು ಸಮುದ್ರ ತೀರದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಚಪ್ಪಲಿಗಳು, ತಂಪು ಪಾನೀಯ, ಮದ್ಯದ, ಔಷಧ ಬಾಟಲಿಗಳು, ಕಸಕಡ್ಡಿಗಳು, ಮರದ ಗೆಲ್ಲುಗಳು, ಥರ್ಮಾಕೋಲ್‌ನಂತಹ ಮತ್ತಿತರ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಇದನ್ನು ಮಹಾನಗರ ಪಾಲಿಕೆಯ ಮೂಲಕ ರವಾನಿಸಲಾಯಿತು.