ಈ ಪ್ರಶ್ನೆ ನಿಮ್ಮಲ್ಲೂ ಕಾಡಿರಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಖಂಡಿತಾ ಅಗತ್ಯ ಎಂಬ ಉತ್ತರ ಬಂದರೂ. ಒಂದು ದೇಶಕ್ಕೆ ಅಗತ್ಯಕ್ಕಿಂತ ಹೆಚ್ಚು ಶಸ್ತ್ರಾಸ್ತ್ರ ಪಡೆ ಹೊಂದಿರುವುದು ಯುದ್ಧ ಸನ್ನಿವೇಶಕ್ಕೆ ಪ್ರೇರಣೆ ಎಂಬ ತಜ್ಞರ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. ಗಡಿ ಭದ್ರತೆಗಾಗಿ ಶಸ್ತ್ರಾಸ್ತ್ರ ಪಡೆಯನ್ನು ಹೊಂದಿರುವುದು ರಕ್ಷಣಾ ದೃಷ್ಠಿಯಿಂದ ಸರಿ ಎನಿಸಿದರೂ ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಸಂಗ್ರಹದ ಸ್ಫೋಟ 3ನೇ ಜಾಗತಿಕ ಯುದ್ಧಕ್ಕೂ ಸಿದ್ಧತೆ ನಡೆಸುತ್ತಿರುವುದು ಇಂದಿನ ಸ್ಥಿತಿಯಾಗಿದೆ. ದೇಶದಲ್ಲಿ ಜನಸಂಖ್ಯೆಯನ್ನು ಒಂದು ಸಂಪನ್ಮೂಲವಾಗಿ ಪರಿಗಣಿಸುವಾಗ ಅತ್ಯಂತ ಹಿಂದುಳಿದ ರಾಷ್ಟ್ರಗಳು ಜನಸಂಖ್ಯೆ ಕಡಿಮೆ ಇದ್ದರೂ ತಮ್ಮ ಪ್ರಾಬಲ್ಯ ಮೆರೆಯುತ್ತಿರುವುದು ಶಸ್ತ್ರಾಸ್ತ್ರ ಪಡೆಗಳಿಂದಲೇ.
ವಿಶ್ವದ ದೊಡ್ಡಣ್ಣ ಅಮೆರಿಕಾ ಇಡೀ ಜಾಗತಿಕ ವ್ಯವಸ್ಥೆಯನ್ನು ಆಳುತ್ತಲೇ ತನ್ನ ಎದುರಾಳಿಯನ್ನು ಹೊಡೆದುರುಳಿಸಲು ಬೇಕಾದ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಹೆಚ್ಚು ಹಣವನ್ನು ವಿನಿಯೋಗಿಸುತ್ತಿದ್ದು ವಿಶ್ವಸಂಸ್ಥೆಯ ಅಲಿಪ್ತ ನೀತಿ ಹೆಸರಿಗಷ್ಟೇ ಎಂಬಂತಿದೆ. ಪ್ರಬಲ ಬಣಗಳಾದ ಅಮೆರಿಕಾ ಮತ್ತು ರಷ್ಯಾ ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಅಧಿಕ ಮಹತ್ವ ನೀಡುವ ಹೊತ್ತಿಗೆ ಭಾರತ ಅಲಿಪ್ತ ನೀತಿಗೆ ತನ್ನ ಬೆಂಬಲವನ್ನು ಸೂಚಿಸಿದ್ದು ಈ ಎರಡು ಬಣಗಳ ಬದಲು ತಟಸ್ಥ ನಿಲುವನ್ನು ತಾಳಿದ್ದು ಪ್ರಸ್ತುತ ಸಂದರ್ಭದಲ್ಲಿ ಆಶ್ಚರ್ಯವೆನಿಸುತ್ತದೆ.
ಯಾಕೆಂದರೆ ಇಂದು ಜಗತ್ತಿನ ಬಲಿಷ್ಠ ಶಸ್ತ್ರಾಸ್ತ್ರಪಡೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಪಾಕಿಸ್ತಾನ ಮತ್ತು ಭಾರತ, ಭಾರತ ಮತ್ತು ಚೀನಾ, ಭಾರತ ಮತ್ತು ಬಾಂಗ್ಲಾದೇಶದ ನಡುವೇ ಗಡಿವಿವಾದ ಎಲ್ಲೆ ಮೀರಿ ನಡೆಯುತ್ತಿದೆ. ಸ್ವಲ್ಪ ಮಟ್ಟಿಗೆ ನೇಪಾಳ ಭಾರತಕ್ಕೆ ಮಿತ್ರರಾಷ್ಟ್ರವೆನಿಸಿದರೂ ಗಡಿವಿಷಯದಲ್ಲಿ ಹಾವು-ಮುಂಗುಸಿಯಂತಿರುವುದು ಕಾಣುತ್ತೇವೆ. ಇದೇ ಗಡಿ ವಿಚಾರವಾಗಿಯೇ ವಿಶ್ವಸಂಸ್ಥೆಯ ಶೃಂಗಸಭೆಯ ಮೂಲಕ ಕಾಯಂ ಸದಸ್ಯತ್ವವನ್ನು ಪಡೆಯಲು ಭಾರತ ಇಂದಿಗೂ ಸಾಧ್ಯವಾಗಲಿಲ್ಲ. ಶತ್ರುವಿನ ಶತ್ರು ಮಿತ್ರ ಎಂಬ ಧೊರಣೆ ಅನುಸರಿಸಿದ ಚೀನಾ ಪಾಕಿಸ್ತಾನದ ಪರವಾಗಿ ನಿಂತು ಆ ದೇಶದ ಭಯೋತ್ಪಾದಕ ಕೃತ್ಯಗಳನ್ನು ತಳ್ಳಿಹಾಕುತ್ತಲೇ ಬರುತ್ತಿದೆ.
ಹೀಗಾಗಿ ಇಂದಿಗೂ ಬೃಹತ್‌ಸಂಖ್ಯೆಯ ಉಗ್ರವಾದಿಗಳೂ, ಭಯೋತ್ಪಾದಕರು ಪಾಕಿಸ್ತಾನದಲ್ಲಿ ತುಂಬಿಕೊಂಡಿದ್ದಾರೆ. ಮೊದಲು ಅಮೆರಿಕಾ ಉಗ್ರವಾದಿಗಳನ್ನು ಹತ್ತಿಕ್ಕುವ ಆಲೋಚನೆಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಬಿನ್ ಲಾಡೆನ್ ಅಮೇರಿಕಾದ ಅವಳಿ ಕಟ್ಟಡವನ್ನು ಸ್ಫೋಟಿಸಿದ ಮೇಲೆ ಭಯೋತ್ಪಾದನೆ ಜಾಗತಿಕ ಸಮಸ್ಯೆ ಎಂಬ ಅರಿವು ಬಂದು ವಿಶ್ವ ಸಂಸ್ಥೆಯ ಜತೆಗೂಡಿ ಅದರ ನಿರ್ಮೂಲನೆಗೆ ಪಣತೊಟ್ಟಿತು. ಬರೀ ಗಡಿಭದ್ರತೆಗಾಗಿ ಶಸ್ತ್ರಾಸ್ತ್ರ ಬಳಕೆಯಾಗುತ್ತಿಲ್ಲ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧರಾದವರ ರಕ್ಷಣೆಗೆ ಝಡ್ ಪ್ಲಸ್ ಸೆಕ್ಯೂರಿಟಿ ವ್ಯವಸ್ಥೆ ನೀಡುವಾಗಲೂ ಇದರ ಅಗತ್ಯ ಅಧಿಕ ಮಟ್ಟದಲ್ಲಿರುವುದು ಕಾಣಬಹುದು. ಓರ್ವಉದ್ಯಮಿ ತನ್ನ ವೈಯಕ್ತಿಕ ರಕ್ಷಣೆಗೆ ರಿವಾಲ್ವರ್ (ಗನ್) ಪಡೆಯಬೇಕಾದರೆ ಕಾನೂನಾತ್ಮಕ ಮಾನ್ಯತೆ, ಪರವಾನಿಗೆ ಪಡೆಯಬೇಕು. ಆದರೆ ಓರ್ವ ಭಯೋತ್ಪಾದಕನಿಗೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿ ದೇಶ ಭ್ರಷ್ಟ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಶಸ್ತ್ರಾಸ್ತ್ರವೇ ಬಲವೆನ್ನಬಹುದು.
ಇಂದೆನಿದ್ದರೂ ಎಕೆ47 ಯುಗ. ಸಿನೆಮಾ, ನಾಟಕ ಮುಂತಾದ ದೃಶ್ಯಗಳನ್ನು ನೋಡುವ ಎಳೆಯ ಮಕ್ಕಳಿಗೂ ಬಂದೂಕು ಪಿಸ್ತೂಲುಗಳಂತಹ ಆಟದ ವಸ್ತುಗಳು ಶಸ್ತ್ರಾಸ್ತ್ರ ವೂ ಮನುಷ್ಯನ ಅಗತ್ಯತೆಯಲ್ಲಿ ಒಂದೆಂಬಂತೆ ಬಿಂಬಿಸಿಬಿಟ್ಟಿದೆ. ಒಟ್ಟಾರೆಯಾಗಿ ಒಂದು ದೇಶದ ರಕ್ಷಣೆಗೆ ಶಸ್ತ್ರಾಸ್ತ್ರಗಳು ಅಗತ್ಯ ಅದರಂತೆ ಅನಗತ್ಯ ಬಳಕೆಗೆ ಕಡಿವಾಣ ಬೀಳಬೇಕಾಗಿದೆ.
ರಾಧಿಕಾ ಕುಂದಾಪುರ