Advertisement

ಸ್ವಚ್ಛ ಸುಂದರ ಪರಿಸರದ ಅಗತ್ಯತೆ

05:15 PM Jun 05, 2020 | mahesh |

ವಿಜ್ಞಾನ, ತಂತ್ರಜ್ಞಾನಗಳ ಮುಖಾಂತರ ದೇಶ ಅಭಿವೃದ್ಧಿ ಹೊಂದುತ್ತಿರುವಾಗ ಮಾನವನು ಆರೋಗ್ಯವಂತನಾಗಿ ಉಳಿಯಬೇಕಾದರೆ ಸ್ವಚ್ಛ ಸುಂದರ ಪರಿಸರವನ್ನು ಉಳಿಸಿ, ಬೆಳೆಸಬೇಕಾದದ್ದು ಅತ್ಯಗತ್ಯ. ಇದಕ್ಕೆ ಅನಿವಾರ್ಯವೋ ಎಂಬಂತೆ ಪ್ರತಿವರ್ಷವೂ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

Advertisement

ನಾವು ಈ ಭೂಮಿಗೆ ಬಂದಾಗ ಈ ಭೂಮಿ ಹೇಗಿತ್ತೋ ಅದಕ್ಕಿಂತ ಒಳ್ಳೆಯ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡಬೇಕಾದದ್ದು ನಮ್ಮ ಕರ್ತವ್ಯ. ಅದಕ್ಕಾಗಿ ವರ್ಷದಲ್ಲಿ ಒಂದು ದಿನವಾದರೂ ನಮ್ಮ ಮನೆ, ಶಾಲೆ, ಸಮಾಜದ ಸುತ್ತ ಮುತ್ತಲಿನ ಪರಿಸರದಲ್ಲಿ ನಾಲ್ಕಾರು ಗಿಡಗಳನ್ನು ನೆಟ್ಟು ಪೋಷಿಸಿದರೆ ಅದೇ ನಾವು ಪರಿಸರಕ್ಕೆ ಕೊಡುವ ದೊಡ್ಡ ಕೊಡುಗೆ ಎಂದೇ ಹೇಳಬಹುದು. ಅಭಿವೃದ್ಧಿ ಅತ್ಯಗತ್ಯ. ಆದರೆ ಅದು ನೈಸರ್ಗಿಕ ಸಂಪನ್ಮೂಲಗಳನ್ನು ಬರಿದು ಮಾಡುವ, ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ರೀತಿಯಲ್ಲಿ ಆಗಬಾರದು. ತಜ್ಞರು ಹೇಳುವಂತೆ, ನಾವು ಈ ಭೂಮಿಯನ್ನು ನಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದಿಲ್ಲ. ನಮ್ಮ ಮುಂದಿನ ಪೀಳಿಗೆಯಿಂದ ಎರವಲಾಗಿ ಪಡೆದಿದ್ದೇವೆ. ಈ ಮಾತನ್ನು ಜ್ಞಾಪಕದಲ್ಲಿ ಇಟ್ಟುಕೊಂಡು ನಾವು ಸಂಪನ್ಮೂಲಗಳನ್ನು ಬಳಸಬೇಕು.

ಪ್ರಕೃತಿಗೆ ಮಾನವನ ಎಲ್ಲಾ ಆಸೆಗಳನ್ನು ಪೂರೈಸುವ ಶಕ್ತಿ ಇದೆ. ಆದರೆ ಅವನ ದುರಾಸೆಯನ್ನಲ್ಲ . ಇಂದು ಜನರು ಪ್ರಕೃತಿಯ ಮೇಲೆ ದೌರ್ಜನ್ಯವನ್ನೆಸಗುತ್ತಿದ್ದಾರೆ. ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಆದರೆ ಪ್ರಕೃತಿಯು ಸುನಾಮಿ, ನೈಸರ್ಗಿಕ ವಿಕೋಪಗಳಂತಹ ತಿರುಗೇಟನ್ನು ಕೊಟ್ಟರೆ ಎಷ್ಟೇ ಶಕ್ತಿವಂತ, ಸಿರಿವಂತ ಮಾನವರಾದರೂ ಅವರು ಪ್ರಕೃತಿಯ ಶಕ್ತಿಯ ಎದುರು ಕುಬ್ಜರೇ ಸರಿ. ಇದನ್ನರಿತು ನಡೆಯಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ.
ಪರಿಸರ ನಾಶ ಮಾಡಿದರೆ ತಾನು ತನಗೇ ಹಾನಿ ಮಾಡಿಕೊಂಡಂತೆ ಎಂಬುದನ್ನು ನಾವು ಅರಿಯಬೇಕು. ಪರಿಸರ ನಾಶರಹಿತ ಅಭಿವೃದ್ದಿಯನ್ನು ಸಾಧಿಸುವ ಪಥದಲ್ಲಿ ಸಾಗಬೇಕು. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಶಪಥಕ್ಕೆ ಕಟಿಬದ್ಧರಾಗೋಣ.

ಪ್ರಿಯಾಂಕ ತೀರ್ಥರಾಮ ಕೊಚ್ಚಿ, ಮರ್ಕಂಜ, ಸುಳ್ಯ.

Advertisement

Udayavani is now on Telegram. Click here to join our channel and stay updated with the latest news.

Next