ಮೂಡಲಗಿ: ಕಬ್ಬು ಬೆಳೆಗಾರರು ಕಬ್ಬಿನ ಬೆಲೆ ನಿಗದಿಗಾಗಿ ಪ್ರತಿ ವರ್ಷ ಕಬ್ಬು ನುರಿಸುವ ಹಂಗಾಮ ಪ್ರಾರಂಭವಾಗುವುದಕ್ಕಿಂತ ಮುಂಚೆ ಹೋರಾಟ ಮಾಡಬೇಕಾಗಿದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಈರಣ್ಣಾ ಕಡಾಡಿ ವಿಷಾದ ವ್ಯಕ್ತ ಪಡಿಸಿದರು. ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್. ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ ಶನಿವಾರ ಪಕ್ಷಾತೀತವಾಗಿ ಜರುಗಿದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ 4.62.500 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಜಿಲ್ಲೆಯ 23 ಕಾರ್ಖಾನೆಗಳು ಕಬ್ಬು ನುರಿಸಿದರು ಇನ್ನೂ ಬಾಕಿ ಉಳಿಯುತ್ತವೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಜಿಲ್ಲಾಧಿಕಾರಿಗಳು ಘಟ್ರಪ್ರಭಾ ಮತ್ತು ಮಲಪ್ರಭಾ ಹೊರತು ಪಡಿಸಿ ಉಳಿದೆಲ್ಲವುಗಳು ಬಿಲ್ ಪಾವತಿಸಿವೆ ಎಂದು ಹೇಳಿ ಇವುಗಳಲ್ಲಿ ಯಾವ ಕಾರ್ಖಾನೆಗಳು ಬಿಲ್ ಉಳಿಸಿಕೊಂಡಿದ್ದರೆ ರೈತರು ಆಥವಾ ರೈತ ಮುಖಂಡರು ಮಾಹಿತಿ ಕೊಟ್ಟರೆ ಆ ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳುತ್ತೇನೆ ಎಂದು ಹೇಳಿರುವುದು ತುಂಬಾ ಹಾಸ್ಯಾಸ್ಪದವಾಗಿದೆ ಎಂದರು.
ಜಿಲ್ಲಾಧಿಕಾರಿಗಳು ರೈತರ ಮೇಲೆ ಕಳಕಳಿ ಇದ್ದರೆ ಕಾರ್ಖಾನೆಗಳು ಕಳೆದ ಸಾಲಿನ ಎಷ್ಟು ಕಬ್ಬು ನುರಿಸಿವೆ ಎಂಬುವುದು ಹಾಗೂ ರೈತರ ಖಾತೆಗಳು ಹಣ ಜಮೆ ಮಾಡಿರುವ ಮಾಹಿತಿ ಪಡೆದು ಪರಿಶೀಲನೆ ಮಾಡುವುದು ಬಿಟ್ಟು ರೈತ ಮುಖಂಡರ ಕಡೆ ಕೈ ಮಾಡುವುದು ಜಿಲ್ಲಾಡಳಿತದ ಅಸಹಾಯಕತೆ ಎದ್ದು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮಪ್ಪ ಗಡಾದ ಮಾತನಾಡಿ, 15ದಿನಗಳಲ್ಲಿ ರೈತರ ಬಾಕಿ ಬಿಲ್ ಕೊಡಬೇಕು. ಕಳೆದ ಎರಡು ವರ್ಷಗಳಿಂದ ಕೆಲವು ಕಾರ್ಖಾನೆಗಳು ಬಾಕಿ ಹಣ ನೀಡಿಲ್ಲ. ಇಂತಹ ಕಾರ್ಖಾನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಧನ ಸಹಾಯ ನೀಡಬಾರದು. ಅಲ್ಲದೇ ಕಾರ್ಖಾನೆಗಳ ಪುನಶ್ಚೇತನ ಹೆಸರಲ್ಲಿ 50-60ಕೋಟಿ ಹಣ ನೀಡಲಾಗಿದ್ದು. ಈ ಹಣವನ್ನು ಬಡ್ಡಿ ಸಮೇತವಾಗಿ ವಸೂಲಿ ಮಾಡಲು ಸರ್ಕಾರಗಳಿಗೆ ಪತ್ರ ಬರೆಯಲಾಗಿದ್ದು. ಸರ್ಕಾರಗಳು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಿಸುದಾಗಿ ಹೇಳಿದರು.
ರೈತ ಮುಖಂಡ ಅರವಿಂದ ದಳವಾಯಿ ಮಾತನಾಡಿ, ನ. 5ರಂದು ಮೂಡಲಗಿ ಪಟ್ಟಣದಲ್ಲಿ ಹಮ್ಮಿಕೊಳ್ಳುವ ಕಬ್ಬು ಬೆಳೆಗಾರ ಬೃಹತ್ ಸಮಾವೇಶಕ್ಕೆ ಮಹಾರಾಷ್ಟ್ರದ ಸ್ವಾಭಿಮಾನಿ ರೈತ ಸಂಘದ ಮುಖಂಡ ಹಾಗೂ ಸಂಸದ ರಾಜು ಶೆಟ್ಟಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಹ್ವಾನಿಸಲಾಗುವುದು ಎಂದರು.
ಮೂಧೋಳದ ರೈತ ಮುಖಂಡ ಸುಭಾಸ ಶಿರಬೂರ, ಅಶೋಕ ಪೂಜೇರಿ ಪ್ರಕಾಶ ಸೋನವಾಲ್ಕರ, ಲಖನ ಸವಸುದ್ದಿ, ಪ್ರಕಾಶ ಬಾಗೋಜಿ, ಬಸವಂತ ಕಾಂಬಳೆ, ಎಸ್.ಆರ್.ಸೋನವಾಲ್ಕರ, ಭೀಮಪ್ಪ ಹಂದಿಗುಂದ, ಪರಮಹಂಸ ಬಂಗಿ, ಈರಣ್ಣ ಕೊಣ್ಣೂರ, ಖಾನಗೌಡ ಪಾಟೀಲ, ಚೂನಪ್ಪ ಪೂಜೇರಿ, ಗಂಗಾಧರ ಮೇಟಿ ಮಾತನಾಡಿದರು. ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್‌ಗಳ ಬಗ್ಗೆ ಮತ್ತು ಬೆಲೆ ನಿಗದಿ, ಮಹಾರಾಷ್ಟ್ರ ಮತ್ತು ಗುಜರಾತ್ ಕಾರ್ಖಾನೆಗಳಲ್ಲಿ ಕಬ್ಬಿನ ಬೆಲೆ ಹೆಚ್ಚಳ ಹಾಗೂ ರಾಜ್ಯದಲ್ಲಿ ಅತಿ ಕಡಿಮೆ ಬೆಲೆ ನೀಡುತ್ತಿರುವ ಅನ್ಯಾಯದ ಕುರಿತು ಚರ್ಚಿಸಲಾಯಿತು. ಚೂನಪ್ಪ ಪೂಜೇರಿ ಸ್ವಾಗತಿಸಿದರು. ಶ್ರೀಶೈಲ ಅಂಗಡಿ ವಂದಿಸಿದರು.