Advertisement

ಜಗಲಿಯಲ್ಲಿ ಕುಳಿತುಕೊಳ್ಳುತ್ತಿರುವ ಮಕ್ಕಳು

02:40 PM Sep 30, 2022 | Team Udayavani |

ಹೆಮ್ಮಾಡಿ: ಬೆಳ್ಳಿ ಹಬ್ಬದ ವರ್ಷಾಚರಣೆ ಸಂಭ್ರಮದಲ್ಲಿರುವ ಹೆಮ್ಮಾಡಿ ಗ್ರಾ. ಪಂ. ವ್ಯಾಪ್ತಿಯ ಕಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಮಾಡು ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಭೀತಿ ಎದುರಾಗಿದೆ. ಇದರಿಂದ ಕೊಠಡಿಯ ಕೊರತೆಯಿಂದಾಗಿ ಅನಿವಾರ್ಯವಾಗಿ ಮಕ್ಕಳು ಜಗಲಿಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿದೆ.

Advertisement

ಹೆಮ್ಮಾಡಿ ಕಟ್ಟುವಿನ ಸರಕಾರಿ ಕಿ.ಪ್ರಾ. ಶಾಲೆಯ ಒಂದು ಕೊಠಡಿಯ ಮಾಡಿನ ಪಕ್ಕಾಸಿ ಮುರಿದಿದ್ದು, ಕುಸಿದು ಬೀಳುವ ಅಪಾಯದಲ್ಲಿದೆ. ಇದರಿಂದ ಮುನ್ನೆಚ್ಚರಿಕೆ ನೆಲೆಯಲ್ಲಿ ಪಕ್ಕದ ಕೊಠಡಿಯಲ್ಲಿ ಮಕ್ಕಳನ್ನು ಕುಳ್ಳಿರಿಸಲಾಗಿದ್ದು, ಅಲ್ಲಿ ಪಾಠ – ಪ್ರವಚನ ನಡೆಸಲಾಗುತ್ತಿದೆ. ಆದರೆ ಅಲ್ಲಿಯೂ ಸ್ಥಳಾವಕಾಶದ ಕೊರತೆ ದೊಡ್ಡ ಸಮಸ್ಯೆಯಾಗಿದೆ.

ಒಂದೇ ಕೊಠಡಿ

ಈ ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಐದನೇ ತರಗತಿಯವರೆಗೆ 27 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ಸಾಲಿನಲ್ಲಿ 6 ಮಂದಿ ದಾಖಲಾತಿ ಮಾಡಿಕೊಂಡಿದ್ದಾರೆ. ಇಬ್ಬರು ಶಿಕ್ಷಕಿಯರಿದ್ದಾರೆ. ಇಲ್ಲಿ ಆರಂಭದಿಂದಲ್ಲೂ ಎರಡು ಕೊಠಡಿಯಿದೆ. ಎಲ್ಲ 5 ತರಗತಿಗಳಿಗೂ ಇಲ್ಲಿಯೇ ಪಾಠ- ಪ್ರವಚನ ನಡೆಯುತ್ತಿದೆ. ಇನ್ನು ಶಿಕ್ಷಕರ ಕೊಠಡಿಯೂ ಇಲ್ಲ. ಈಗ ಎರಡರಲ್ಲಿ ಒಂದರ ಮಾಡು ಕುಸಿಯುವ ಭೀತಿ ಇರುವುದರಿಂದ ಮತ್ತೂಂದು ಕೊಠಡಿಗೆ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಪರೀಕ್ಷೆ, ಪಾಠ ಸಹಿತ ಇನ್ನಿತರ ಎಲ್ಲ ಚಟುವಟಿಕೆಗಳು ಇದೇ ಒಂದು ಕೊಠಡಿಯಲ್ಲಿ ನಡೆಯುತ್ತಿದೆ.

ತುರ್ತು ದುರಸ್ತಿಗೆ ಆಗ್ರಹ

Advertisement

ಈಗಾಗಲೇ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದವರು, ಶಾಲೆಯ ಕಡೆಯಿಂದ ದುರಸ್ತಿಗೆ ಶಿಕ್ಷಣ ಇಲಾಖೆ ಹಾಗೂ ಹೆಮ್ಮಾಡಿ ಗ್ರಾ.ಪಂ.ಗೆ ಮನವಿ ಕೊಡಲಾಗಿದೆ. ಪಂಚಾಯತ್‌ ಕಡೆಯಿಂದ, ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಯಾವುದೇ ಬೆಳವಣಿಗೆ ಆಗಿಲ್ಲ. ಈಗಿನ್ನು ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದ್ದು, ಮತ್ತೆ ರಜೆ ಮುಗಿಸಿ, ದುರಸ್ತಿಯಾದರೆ ಮಕ್ಕಳಿಗೆ ಪ್ರಯೋಜನವಾಗಲಿದ್ದು, ಆ ನಿಟ್ಟಿನಲ್ಲಿ ಆದಷ್ಟು ಬೇಗ ದುರಸ್ತಿ ಮಾಡಿ ಎಂದು ಪೋಷಕರು, ಊರವರು ಒತ್ತಾಯಿಸಿದ್ದಾರೆ.

ಮನವಿ ಕೊಟ್ಟಿದ್ದೇವೆ: ನಾವು ಹೆಮ್ಮಾಡಿ ಪಂ.ಗೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೂ ಮನವಿ ನೀಡಲಾಗಿದೆ. ಆದಷ್ಟು ಬೇಗ ದುರಸ್ತಿಯಾಗಬೇಕಿದೆ. ಇಲ್ಲದಿದ್ದರೆ ಮಕ್ಕಳಿಗೆ ತೊಂದರೆಯಾಗ ಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಒಂದು ಕೊಠಡಿಯಾದರೆ ಶಾಲೆಗೆ ಪ್ರಯೋಜನವಾಗಲಿದೆ. –ಸುನಿಲ್‌ ಎನ್‌. ಪೂಜಾರಿ ಕಟ್ಟು,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು

ಶೀಘ್ರ ದುರಸ್ತಿ: ಕಟ್ಟು ಶಾಲೆಯ ಮಾಡು ಕುಸಿಯುವ ಬಗ್ಗೆ ಗಮನಕ್ಕೆ ಬಂದಿದ್ದು, ಈಗಾಗಲೇ ಅಲ್ಲಿಗೆ ಭೇಟಿ ನೀಡಿದ್ದೇವೆ. ಆದಷ್ಟು ಬೇಗ ಪಂ.ನಿಂದ ದುರಸ್ತಿ ಮಾಡುವ ಕ್ರಮಕೈಗೊಳ್ಳಲಾಗುವುದು. –ಸುಧಾಕರ ದೇವಾಡಿಗ, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next