Advertisement

ಬಿದಿರಿನ ಬಗ್ಗೆ ಜಾಗೃತಿ ಅಗತ್ಯ

12:43 PM Sep 19, 2018 | |

ಬೆಂಗಳೂರು: ರೈತರು ಮತ್ತು ಅರಣ್ಯ ಇಲಾಖೆ ನಡುವೆ ಸಮನ್ವಯ ಕೊರತೆಯಿಂದ ಸರ್ಕಾರದ ಅನೇಕ ಯೋಜನೆಗಳು ಫ‌ಲಾನುಭವಿಗಳಿಗೆ ತಲುಪುತ್ತಿಲ್ಲವೆಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಬೇಸರ ವ್ಯಕ್ತಪಡಿಸಿದರು. 

Advertisement

ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಮತ್ತು  ಬಾಂಬೂ ಸೊಸೈಟಿ ಆಫ್ ಇಂಡಿಯಾ ಸಂಯುಕ್ತವಾಗಿ ಮಂಗಳವಾರ ಹಮ್ಮಿಕೊಂಡಿದ್ದ “ವಿಶ್ವ ಬಿದಿರು ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು. ಬಿದಿರಿನಲ್ಲಿ ಹಲವಾರು ಉತ್ಪನ್ನಗಳಿದ್ದು, ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೆ, ರೈತರಿಗೆ ಪೂರಕ  ಮಾಹಿತಿ ನೀಡಿ ಬಿದಿರು ಕೃಷಿ ಪ್ರೋತ್ಸಾಹಿಸಬೇಕು.

ಆ ಮೂಲಕ ರೈತರನ್ನು ಆರ್ಥಿಕ ಸಬಲರನ್ನಾಗಿಸುವ ಹೊಣೆ ಅರಣ್ಯ ಇಲಾಖೆಯದ್ದಾಗಿದೆ. ಆದರೆ, ರೈತರು ಮತ್ತು ಇಲಾಖೆ ನಡುವೆ ಸಂಪರ್ಕವೇ ಇಲ್ಲವಾಗಿದೆ. ಇದರಿಂದ ಯೋಜನೆಗಳು ಫ‌ಲಾನುಭವಿಗಳಿಗೆ ತಲುಪುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುತ್ತಿದೆ. ಅದಕ್ಕೆ ಅಗತ್ಯ ಹಣವನ್ನೂ ಬಿಡುಗಡೆ ಮಾಡುತ್ತಿದೆ.

ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ ಎಂದ ಸಚಿವರು, “ಅಧಿಕಾರಿಗಳಿಗೆ ಕೆಲಸ ಮಾಡುವ ಮನೋಭಾವ ಇಲ್ಲದಿದ್ದರೆ, ಸರ್ಕಾರದಿಂದ  ಎಷ್ಟೇ ಹಣ ಬಿಡುಗಡೆ ಮಾಡಿದರೂ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು. 

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ಎಸ್‌. ಶಾಂತಪ್ಪ ಮಾತನಾಡಿ, ಬಿದಿರು ಆಧಾರಿತ ಉದ್ಯಮ ಅಭಿವೃದ್ಧಿಗೆ ಮತ್ತು ಅದರ ಉತ್ಪನ್ನಗಳ ಆಮದು ಪ್ರಮಾಣ ತಗ್ಗಿಸಲು ರೈತರಿಗೆ ಪ್ರತಿ ಹೆಕ್ಟೇರ್‌  ಪ್ರದೇಶದಲ್ಲಿ ಬಿದಿರು ಬೆಳೆಸಲು ಮೂರು ವರ್ಷ ಅವಧಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಹೈಟೆಕ್‌ ನರ್ಸರಿಗಾಗಿ 8ರಿಂದ 10 ಲಕ್ಷ  ರೂ.ವರೆಗೂ ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿ ಪ್ರಸ್ತುತ 3,500 ಹೆಕ್ಟೇರ್‌ನಲ್ಲಿ ವಿವಿಧ ತಳಿಗಳ  ಬಿದಿರು ಬೆಳೆಯಲಾಗುತ್ತಿದೆ. ರೈತರ ಜಮೀನುಗಳಲ್ಲಿ 2,500 ಹೆಕ್ಟೇರ್‌ ಹಾಗೂ 13,500 ಹೆಕ್ಟೇರ್‌ ಮೀಸಲು ಅರಣ್ಯದಲ್ಲಿ ಬೆಳೆಯಲಾಗಿದೆ. ರಾಷ್ಟ್ರೀಯ ಬಿದಿರು ಮಿಷನ್‌ ಯೋಜನೆಯ ಎರಡನೇ ಹಂತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 220 ಕೋಟಿ ರೂ. ಘೋಷಿಸಿದ್ದು, ಈಗಾಗಲೇ 28 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next