Advertisement

ವ್ಯಾಜ್ಯ ತ್ವರಿತ ವಿಲೇ ಅಗತ್ಯ: ಜೋಶಿ

10:31 AM Jan 15, 2020 | Suhan S |

ಹುಬ್ಬಳ್ಳಿ: ದೇಶದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಅಪಾರ ಸಂಖ್ಯೆಯ ವ್ಯಾಜ್ಯಗಳು ಬಹಳ ವರ್ಷಗಳಿಂದ ಬಾಕಿ ಉಳಿದಿವೆ. ಇವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಿಗೆ ಸೇರಿ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿನ ತಿಮ್ಮಸಾಗರ ರಸ್ತೆಯ ನೂತನ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ನ್ಯಾಯಾಲಯದ ಪ್ರಥಮ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರು ತ್ವರಿತ ನ್ಯಾಯ ಅಪೇಕ್ಷೆ ಪಡುವುದು ಸಾಮಾನ್ಯ. ಆಗ ಕಾರ್ಯಾಂಗ ಹಾಗೂ ನ್ಯಾಯಾಂಗದಿಂದ ಸೂಕ್ತ ಪ್ರತಿಸ್ಪಂದನೆ ಮತ್ತು ಕ್ರಮವಾಗಬೇಕು. ಕೆಲ ಸಂದರ್ಭಗಳಲ್ಲಿ 10-15 ವರ್ಷಗಳ ಕಾಲ ಕೆಳಹಂತದಿಂದ ಮೇಲ್ಮಟ್ಟದ ನ್ಯಾಯಾಲಯಕ್ಕೆ ಪ್ರಕರಣಗಳು ಹೋಗಲ್ಲ. ತ್ವರಿತವಾದ ನ್ಯಾಯ ದೊರಕಲು ನ್ಯಾಯಾಲಯಗಳಿಗೆ ಮೂಲಸೌಕರ್ಯ, ನೇಮಕ ಸೇರಿದಂತೆ ಇನ್ನಿತರೆ ವಿಷಯವಾಗಿ ಚರ್ಚೆ ಆಗಬೇಕು. ಆ ಮೂಲಕ ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವವರಿಗೆ ಹೊಸ ವ್ಯವಸ್ಥೆ ನಿರ್ಮಾಣ ಮಾಡುವ ದಿಕ್ಕಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿ, ಆಮೂಲಾಗ್ರ ಬದಲಾವಣೆ ತರಬೇಕಾಗಿದೆ. ದೇಶದ ಏಳು ದಶಕಗಳ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರು ನ್ಯಾಯಾಲಯದ ಅಂತಿಮ ತೀರ್ಮಾನವನ್ನು ಒಪ್ಪುತ್ತಾರೆ. ಇದು ದೇಶದ ಜನರ ಪ್ರಬುದ್ಧತೆಗೆ ಸಾಕ್ಷಿ ಎಂದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಮಾತನಾಡಿ, ನ್ಯಾಯಾಂಗವು ಸಂವಿಧಾನ ಬದ್ಧ ಹಕ್ಕುಗಳನ್ನು ಸಂರಕ್ಷಣೆ ಮಾಡುವ ಹಾಗೂ ದೇಶದ ಸಂವಿಧಾನಕ್ಕೆ ಶಕ್ತಿ ಕೊಡುವ ಕಾರ್ಯ ಮಾಡುತ್ತದೆ. ಜೊತೆಗೆ ಶಾಸಕಾಂಗ ಮತ್ತು ಕಾರ್ಯಾಂಗ ಮಾಡದ ಕೆಲಸಗಳನ್ನು ಮಾಡಿಸುತ್ತದೆ. ಸಾರ್ವಜನಿಕ ವಿಚಾರವಾಗಿ ಹಲವು ಪ್ರಕರಣಗಳಿಗೆ ನಿರ್ದೇಶನ ನೀಡುತ್ತದೆ ಹಾಗೂ ಅಯೋಧ್ಯೆ ಪ್ರಕರಣ ಸೇರಿದಂತೆ ಜಟಿಲವಾದಂತಹ ಪ್ರಕರಣಗಳಿಗೆ ಚರಿತ್ರಾರ್ಹ ತೀರ್ಪು ನೀಡುತ್ತದೆ ಎಂದು ಹೇಳಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎನ್‌. ಕೆ. ಪಾಟೀಲ, ರಾಮ ಮೋಹನ ರೆಡ್ಡಿ, ಬೆಂಗಳೂರಿನ ಗ್ರಾಮೀಣ ಕೋರ್ಟ್‌ ಪ್ರಧಾನ ನ್ಯಾಯಾಧೀಶ ಶ್ರೀಶಾನಂದ,ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಕೆ.ಎಸ್‌. ಬೀಳಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿಗಳು, ನ್ಯಾಯಾಧೀಶರು ಹಾಗೂ ಸಚಿವರಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಹಾಗೂ ಹೈದರಾಬಾದ್‌ನ ಕೆಎಂವಿ ಪ್ರೊಜೆಕ್ಟ್ ನಿರ್ದೇಶಕ ಜಿ. ಹರ್ಷ ಅವರನ್ನು ಸನ್ಮಾನಿಸಲಾಯಿತು. ನ್ಯಾಯಮೂರ್ತಿಗಳು, ಗಣ್ಯರು ನ್ಯಾಯಾಲಯ ಆವರಣದಲ್ಲಿ ಸಸಿನೆಟ್ಟರು. ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.

Advertisement

ಪ್ರಿಯಾ ಕಂಬಳಿಮಠ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಎಸ್‌.ವಿ. ಕೊಪ್ಪರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಬಿ.ವಿ. ಕೋರಿಮಠ, ಶೋಭಾ ಪವಾರ ನಿರೂಪಿಸಿದರು.

15 ಲಕ್ಷ ವೆಚ್ಚದಲ್ಲಿ ಇ-ಗ್ರಂಥಾಲಯ : ನೆರೆ ಹಾವಳಿಯಿಂದ ನ್ಯಾಯಾಲಯದ ಸಂಕೀರ್ಣಕ್ಕೆ ನೀರು ನುಗ್ಗಿ ಹಾನಿಯಾಗಿತ್ತು. ಹವಾನಿಯಂತ್ರಿತ ವ್ಯವಸ್ಥೆ ಹದಗೆಟ್ಟಿದೆ. ಅದನ್ನು ಪುನರ್‌ ಆರಂಭಿಸುವ ಸಲುವಾಗಿ ಸರಕಾರದಿಂದ 74 ಲಕ್ಷ ರೂ. ಮಂಜೂರಾಗಿದೆ. ಶೀಘ್ರವೇ ಟೆಂಡರ್‌ ಕರೆದು ಸಮಸ್ಯೆ ಬಗೆಹರಿಸಲಾಗುವುದು. 15 ಲಕ್ಷ ರೂ. ವೆಚ್ಚದಲ್ಲಿ ಇ-ಗ್ರಂಥಾಲಯ ಆರಂಭಿಸಲಾಗುವುದು. ಹೊಸೂರ ವೃತ್ತದಲ್ಲಿನ ಅತಿಕ್ರಮಣ ಮನೆಗಳನ್ನು ತೆರವುಗೊಳಿಸಿ ಉಣಕಲ್‌ ಕ್ರಾಸ್‌ವರೆಗೆ ಸಿಸಿ ರಸ್ತೆ ನಿರ್ಮಿಸಲಾಗುವುದು. ಜೊತೆಗೆ ಮೂಲಸೌಕರ್ಯಕ್ಕೆ ಅವಶ್ಯವಾದ ಎಲ್ಲ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next