Advertisement

ಬೇಕೇ ಬೇಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

10:38 AM Jun 24, 2019 | Suhan S |

ಕುಮಟಾ: ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅತೀ ಅವಶ್ಯವಿದ್ದು, ಈ ಕುರಿತು ಪಕ್ಷಾತೀತವಾಗಿ ಹೋರಾಡಲು ನಾನು ಸಿದ್ಧನಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.

Advertisement

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಭಾನುವಾರ ಇಲ್ಲಿನ ಖಾಸಗಿ ಹೊಟೇಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆ ರಾಜ್ಯ ಹಾಗೂ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ. ಜಿಲ್ಲೆಗಾಗಿ ಸರ್ಕಾರ ವಿಶೇಷ ಸೌಲಭ್ಯ ಒದಗಿಸುವಂತಾಗಬೇಕು. ಆಸ್ಪತ್ರೆ ಕನಸು ಈಡೇರುವವರೆಗೂ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕು. ಯಾರೇ ನಾಯಕರಾದರೂ ಪರವಾಗಿಲ್ಲ. ನಾನು ಅವರ ಜೊತೆ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದಲೇ ಜಿಲ್ಲೆಯ ಅಭಿವೃದ್ಧಿಯಾಗುತ್ತಿಲ್ಲ. ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವಿಚಾರದಲ್ಲಿ ಇಂತಹ ಕೆಲಸ ಮಾಡಬೇಡಿ. ಆಸ್ಪತ್ರೆಯ ನಿರ್ಮಾಣಕ್ಕೆ ಖಾಸಗಿಯವರು ಬಂದರೆ ಅವರಿಗೆ ಜಾಗ ತೋರಿಸುವ ಕೆಲಸವಾಗಲಿ. ಸಣ್ಣಪುಟ್ಟ ಲೋಪದೋಷಗಳನ್ನು ಬದಿಗಿಟ್ಟು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುವವರೆಗೂ ಹೋರಾಡೋಣ ಎಂದರು.

ಅಂಕೋಲಾ-ಹುಬ್ಬಳ್ಳಿ ರೈಲ್ವೆಗೆ ಪರಿಸರವಾದಿಗಳು ಅಡ್ಡಿಯಾಗಿದ್ದಾರೆ. ಬಂದ ಸಾಕಷ್ಟು ಯೋಜನೆಗಳು ಪರಿಸರದ ನೆಪದಲ್ಲಿ ಬೇರೆ ಜಿಲ್ಲೆಗೆ ಹೋಗಿವೆ. ಆರ್‌.ವಿ. ದೇಶಪಾಂಡೆಯವರಂತಹ ಹಿರಿಯ ನಾಯಕರೂ ಕೂಡ ಇದರಿಂದ ಬೇಸರಗೊಂಡಿದ್ದಾರೆ. ಯಾವ ಯೋಜನೆ ಬಂದರೂ ಅಡ್ಡಿ ಮಾಡುವವರು ಇದ್ದಾರೆ ಎಂದರೆ, ಮತ್ಯಾಕೆ ದೊಡ್ಡ ದೊಡ್ಡ ಯೋಜನೆ ತರಬೇಕೆಂಬ ನಿರಾಸಕ್ತಿ ಮೇಲ್ಮಟ್ಟದಲ್ಲಿ ಇರಬಹುದು. ಇದರಿಂದಲೇ ನಮ್ಮ ಜಿಲ್ಲೆ ಹಿಂದುಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಅಪಘಾತ ಸಂಭವಿಸಿದಾಗ ದಕ್ಷಿಣ ಕನ್ನಡಕ್ಕೆ ಅಥವಾ ದೂರದ ಗೋವಾಕ್ಕೆ ಹೋಗುವ ಅನಿವಾರ್ಯತೆಯಿದೆ. ಹೀಗಾಗಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸುವ ಅನಿವಾರ್ಯತೆಯಿದೆ. ಈ ಹೋರಾಟಕ್ಕೆ ನಾನು ಸದಾ ಸಿದ್ಧ ಎಂದರು.

ಜೆಡಿಎಸ್‌ ಮುಖಂಡ ಪ್ರದೀಪ ನಾಯಕ ದೇವರಬಾವಿ ಮಾತನಾಡಿ, ಉತ್ತರಕನ್ನಡಕ್ಕೆ ಸರ್ಕಾರಿ ಅಥವಾ ಖಾಸಗಿ ಯಾವುದಾದರೂ ಆಸ್ಪತ್ರೆ ಬರಲಿ. ಆಸ್ಪತ್ರೆ ನಿರ್ಮಾಣಕ್ಕೆ ಕುಮಟಾದ ಹಲವು ಕಡೆಗಳಲ್ಲಿ ಜಾಗವಿದ್ದು, ಹಿರೇಗುತ್ತಿಯಲ್ಲಿ 1800 ಎಕರೆ ಜಾಗವೂ ಇದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಈ ಕುರಿತು ಒಲವು ತೋರಿದ್ದಾರೆ. ಆಸ್ಪತ್ರೆ ನಿರ್ಮಾಣವಾಗುವವರೆಗೂ ನಮ್ಮ ಹೋರಾಟ ನಿಲ್ಲಬಾರದು ಎಂದರು.

Advertisement

ಜೆಡಿಎಸ್‌ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿದರೆ ನುರಿತ ವೈದ್ಯರು ನಮ್ಮ ಜಿಲ್ಲೆಗೆ ಬರುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯಕ್ಕೆ ಸಾಕಷ್ಟು ತ್ಯಾಗ ಮಾಡಿದ ಉತ್ತರ ಕನ್ನಡವನ್ನು ಗ್ರಾಮೀಣ ಜಿಲ್ಲೆಯೆಂದು ಘೋಷಿಸಿದರೆ, ಗ್ರಾಮೀಣ ಸೇವೆಗಾಗಿ ವೈದ್ಯರು ಈ ಜಿಲ್ಲೆಯನ್ನು ಅರಸಿ ಬರುತ್ತಾರೆ. ಇದರಿಂದ ಆಸ್ಪತ್ರೆ ಅಭಿವೃದ್ಧಿ ಹಾಗೂ ಹಲವು ಉದ್ಯೋಗಗಳು ನಿರ್ಮಾಣವಾಗುತ್ತದೆ ಎಂದರು. ಉದ್ಯಮಿ ಮುರಳೀಧರ ಪ್ರಭು ಮಾತನಾಡಿ, ಶೇ. 80 ರಷ್ಟು ಅರಣ್ಯವನ್ನೇ ಹೊಂದಿರುವ ಈ ಜಿಲ್ಲೆಯು ರಾಜ್ಯಕ್ಕೇ ಆಮ್ಲಜನಕವನ್ನು ನೀಡುತ್ತಿದೆ. ಕೈಗಾ, ಸೀಬರ್ಡ್‌, ಡ್ಯಾಮ್‌ನಂತಹ ಅನೇಕ ಯೋಜನೆಗಳಿಗೆ ಇಲ್ಲಿನ ಜನತೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಹೈಕಕ್ಕೆ ಹಲವು ಸೌಲಭ್ಯಗಳನ್ನು ನೀಡುವಂತೆ ನಮ್ಮ ಜಿಲ್ಲೆಗೂ ವಿಶೇಷ ಪ್ರಾತಿನಿಧ್ಯ ನೀಡಬೇಕು ಎಂದರು. ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಎಲ್ಲರೂ ಒಂದಾಗಿ ಹೋರಾಟ ನಡೆಸುವ ಅಗತ್ಯತೆಯಿದೆ ಎಂದರು.

ಕೆನರಾ ಹೆಲ್ತ್ ಕೇರ್‌ನ ಮುಖ್ಯಸ್ಥ ಡಾ| ಜಿ.ಜಿ. ಹೆಗಡೆ ಮಾತನಾಡಿ, ಕೆನರಾ ಹೆಲ್ತ್ ಕೇರ್‌ ಕೂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೇ ಆಗಿದ್ದು, ಎಲ್ಲಾ ವೈದ್ಯರೂ ನಮ್ಮಲ್ಲಿದ್ದಾರೆ. ಆದರೆ ಬಿ.ಆರ್‌. ಶೆಟ್ಟಿಯಂತವರು ಕುಮಟಾದಲ್ಲಿ ಖಾಸಗಿ ಆಸ್ಪತ್ರೆ ಸ್ಥಾಪಿಸುವುದಾದರೆ ನನ್ನ ಆಸ್ಪತ್ರೆಯನ್ನು ಅವರಿಗೆ ಬಿಟ್ಟು ಕೊಟ್ಟು ನಾನು ಅಲ್ಲಿಯೇ ಕೆಲಸ ಮಾಡಲು ಸಿದ್ಧನಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಟೂರಿಸಂ ನಿರ್ಮಿಸಲು ಸಾಧ್ಯವಿದ್ದು, ಆಲ್ ಇಂಡಿಯಾ ಮೆಡಿಕಲ್ ಸೈನ್ಸ್‌ನಿಂದ ಒಂದು ಶಾಖೆಯನ್ನು ಉತ್ತರ ಕನ್ನಡದಲ್ಲಿ ತೆರೆದರೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ಜಿ.ಪಂ ಸದಸ್ಯ ಗಜಾನನ ಪೈ, ಗಜು ನಾಯ್ಕ, ಡಾ| ಡಿ.ಡಿ. ನಾಯಕ, ಸಂತೋಷ ನಾಯ್ಕ, ಭಾಸ್ಕರ ಪಟಗಾರ ಸೇರಿದಂತೆ ಹಲವರು ತಮ್ಮತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಶ್ನೆಗೆ ಉತ್ತರಿಸದ ಸಂಸದ:

 ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ಮಾಧ್ಯಮದವರು ಕೇಂದ್ರ ಮಾಜಿ ಸಚಿವ ಅನಂತಕುಮಾರ್‌ ಹೆಗಡೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದೇ ತೆರಳಿದ ಘಟನೆ ರವಿವಾರ ಕಾರವಾರದಲ್ಲಿ ನಡೆಯಿತು. ಸಾಯಿ ಟ್ರಸ್ಟ್‌ನ ಸಮಾರಂಭಕ್ಕೆ ಬಂದಿದ್ದ ಅವರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದರು. ಪ್ರಶ್ನೆ ಕೇಳಿಸಿಕೊಳ್ಳದ ಅವರು ದೃಶ್ಯ ಮಾಧ್ಯಮದವರ ಮೈಕ್‌ ತಳ್ಳಿದರು. ನಮಸ್ಕಾರ ಎಂದಷ್ಟೇ ಹೇಳಿ ಕಾರು ಹತ್ತಿದರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸೋಶಿಯಲ್ ಮೀಡಿಯಾದಲ್ಲಿ ನಡೆದ ಅಭಿಯಾನಕ್ಕೆ ಮಾಜಿ ಕೇಂದ್ರ ಸಚಿವ ಹೆಗಡೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ. ಈ ಸಂಬಂಧ ಯುವಕ ಕಳಿಸಿದ ಟಿಟ್ವರ್‌ ಸಂದೇಶವನ್ನೇ ಬ್ಲಾಕ್‌ ಮಾಡಿದ್ದರು. ಇದು ಸಂಸದರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.
ಸಂಸದರಿಗೆ ಯುವ ಸಮೂಹದಿಂದ ಮನವಿ ಸಲ್ಲಿಕೆ

ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ಸಂಸದ ಅನಂತಕುಮಾರ ಹೆಗಡೆಗೆ ಯುವಕರು ಮನವಿ ನೀಡಿದರು. ಸಂಸದರನ್ನು ಭೇಟಿಯಾದ ಅವರು, ಜಿಲ್ಲೆಯಲ್ಲಿ ಆಸ್ಪತ್ರೆ ಬಗ್ಗೆ ಅವರಿಗೆ ಮನವರಿಕೆ ಮಾಡಿದರು. ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೂ ಮುನ್ನ, ಟ್ರಾಮಾ ಸೆಂಟರ್‌, ಸುಸಜ್ಜಿತ ಆಂಬ್ಯುಲೆನ್ಸ್‌ ಅನ್ನೂ ಜಿಲ್ಲೆಗೆ ಒದಗಿಸುವಂತೆ ಅವರು ಮನವಿ ಮಾಡಿದರು. ಪ್ರತಿಕ್ರಿಯೆ ನೀಡಿದ ಸಂಸದರು, ಇದು ರಾಜ್ಯ ಆರೋಗ್ಯ ಇಲಾಖೆಯಿಂದ ಆಗಬೇಕಿದೆ. ಅವರು ಪ್ರಸ್ತಾವನೆ ಕಳುಹಿಸಿದಲ್ಲಿ ಕೇಂದ್ರದಿಂದ ಅಗತ್ಯ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ರಾಘವ ನಾಯ್ಕ ಸ್ಕಂದ, ಮಂಜು ದೀವಗಿ, ಸಿದ್ದಾರ್ಥ ನಾಯಕ, ರಾಘವೇಂದ್ರ ಪಟಗಾರ ಕೊಡಕಣಿ, ರಾಮದಾಸ ಕುಮಟಾ, ಮಾಹಾದೇವ ಪಟಗಾರ ಕೋಡ್ಕಣಿ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next