Advertisement

ಮಾರ್ಗೋನಹಳ್ಳಿ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ

11:47 AM Jun 24, 2019 | Suhan S |

ಕೆ.ಆರ್‌.ಪೇಟೆ: ಮುಖ್ಯಮಂತ್ರಿಗಳು ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರ ಗಮನಕ್ಕೆ ಅಧಿಕಾರಿಗಳು, ಶಾಸಕರು ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳಲ್ಲದೆ ಇರುವ ಬಗ್ಗೆ ಮಾಹಿತಿ ನೀಡಿ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಕೈಜೊಡಿಸಬೇಕಿದೆ.

Advertisement

ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಒಂದು ಆರೋಪವಾದರೆ, ಬಹುತೇಕ ಸರ್ಕಾರಿ ಶಾಲಾ ಕಟ್ಟಡಗಳು ಯಾವಾಗಬೇಕಾದರೂ ಕುಸಿದು ಬೀಳುವ ಆತಂಕದಲ್ಲಿದೆ. ಇದಕ್ಕೆ ಉದಾರಹಣೆ ಎಂಬಂತೆ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಕುಸಿದು ಬಿದ್ದಿದ್ದು, ದಶಕಗಳೆ ಕಳೆದಿದೆ. ಶಾಲಾ ಆವರಣವನ್ನು ದನದ ಕೊಟ್ಟಿಗೆ, ವಾಹನಗಳನ್ನು ನಿಲ್ಲಿಸುವ ನಿಲ್ದಾಣವಾಗಿ ಬಳಕೆಯಾಗುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಲು ಸಾಧ್ಯವಿಲ್ಲಾ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಪಾಠ ಮಾಡಲು ಸಮಯ ಕೊಡಿ? : ಸರ್ಕಾರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶಾಲೆಯನ್ನು ತೆರೆದಿದೆ ಇಲ್ಲಿ ಈಗ ಮುಖ್ಯವಾಗಿ ಮಕ್ಕಳ ಕೊರತೆ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಗ್ರಾಮೀಣ ಭಾಗದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳು ಸಿಗದಿರುವುದು. ಒಂದರಿಂದ ಐದನೆ ತರಗತಿ ಇರುವ ಶಾಲೆಯಲ್ಲಿ 12 ರಿಂದ 30 ಮಕ್ಕಳು ಇರುವುದನ್ನು ನಾವು ತಾಲೂಕಿನಲ್ಲಿ ಕಾಣಬಹುದಾಗಿದೆ. ಇಲ್ಲಿಗೆ ಸರ್ಕಾರ ಇಬ್ಬರು ಶಿಕ್ಷಕರನ್ನು ನೇಮಕ ಮಾಡುತ್ತಾರೆ. ಇದರಲ್ಲಿ ಒಬ್ಬರು ಮಕ್ಕಳಿಗೆ ಬಿಸಿಯೂಟದ ಸಿದ್ಧತೆ ಹಾಗೂ ಪ್ರತಿದಿನ ದಾಖಲು ಮಾಡಬೇಕಾಗಿರುವ ಸುಮಾರು 17 ವಿಷಯಗಳನ್ನು ಕಡತಗಳಿಗೆ ನಮೂದಿಸುವುದರಲ್ಲಿ ಸಮಯ ಮುಗಿದು ಹೋಗುತ್ತದೆ. ಇನ್ನುಳಿದ ಒಬ್ಬ ಶಿಕ್ಷಕರು ಐದು ತರಗತಿ ಮಕ್ಕಳಿಗೆ ಎಷ್ಟು ಪಾಠ ಮಾಡಲು ಸಾಧ್ಯ ಎಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ.

ಮುರಿದು ಬಿದ್ದಿರುವ ಶಾಲಾ ಕಟ್ಟಡ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡ ಅರ್ಧಭಾಗಕ್ಕೆ ಕುಸಿದು ಬಿದ್ದು ದಶಕಗಳೆ ಕಳೆದಿದ್ದರೂ ಅದನ್ನು ಸರಿಪಡಿಸುವ ಬದಲು ಬದಲಿ ಕೊಠಡಿ ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶಾಲೆ ಕಾಂಪೌಂಡ್‌ ಗೋಡೆ ಕುಸಿದು ಬಿದ್ದು ಕೇವಲ ನಾಮಫ‌ಲಕ ಮಾತ್ರ ಉಳಿದುಕೊಂಡಿದೆ. ಶಾಲಾ ಕಟ್ಟಡ ಅರ್ಧ ಭಾಗ ಕುಸಿದು ಬಿದ್ದಿದೆ. ಇದನ್ನು ಗ್ರಾಮಕ್ಕೆ ಮೊದಲ ಸಾರಿ ಭೇಟಿ ನೀಡುವವರು ಗಮನಿಸಿದರೆ ಯಾವುದೋ ಸ್ಮಾರಕದಂತೆ ಭಾಸವಾಗುತ್ತದೆ. ಆದರೆ ವಾಸ್ತವವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಚುನಾಯಿತ ಜನ ಪತ್ರತಿನಿಧಿಗಳ ನಿರ್ಲಕ್ಷ್ಯದಿಂದ ಶಾಲಾ ಕಟ್ಟಡ ದುರಸ್ತಿಯಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕಟ್ಟಡ ಕುಸಿದರೆ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ:

ನಮ್ಮ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಆದರೆ ನಮ್ಮ ಶಾಲಾ ಕಟ್ಟಡ ಕುಸಿದು ಬಿದ್ದು ದಶಕಗಳೆ ಕಳೆದಿದ್ದರೂ ಅವುಗಳನ್ನು ಮರು ನಿರ್ಮಾಣ ಮಾಡುವ ಮನಸ್ಸು ಅಧಿಕಾರಿಗಳಿಂದ ಬಂದಿಲ್ಲ. ಈಗ ಇರುವ ಕೇವಲ 3 ಕೊಠಡಿಗಳಲ್ಲಿ ಏಳು ತರಗತಿಗಳನ್ನು ನಡೆಸಬೇಕು. ಇದರಿಂದ ಯಾವುದೇ ಮಗುವಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಠಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕುಸಿದು ಬಿದ್ದಿರುವ ಶಾಲಾ ಕಟ್ಟಡವನ್ನು ನೆಲಸಮ ಮಾಡಬೇಕು. ಒಂದು ವೇಳೆ ಶಾಲೆಯ ಬಳಿಗೆ ತೆರಳುವ ಯಾವುದಾದರೂ ಮಗುವಿನ ತಲೆಯ ಮೇಲೆ ಏನಾದರು ಕಟ್ಟಡ ಕುಸಿದು ಬಿದ್ದರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ನಾವುಗಳು ಶಿಕ್ಷಣ ಇಲಾಖೆಗೆ ಪತ್ರಬರೆದಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾರ್ಗೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್‌ ಬೇಸರ ವ್ಯಕ್ತಪಡಿಸಿದರು.
•ಎಚ್.ಬಿ.ಮಂಜುನಾಥ
Advertisement

Udayavani is now on Telegram. Click here to join our channel and stay updated with the latest news.

Next