Advertisement

ಹಗ್ಗ ಹೊಸೆಯುವವರಿಗೆ ಬೇಕಿದೆ ಸಹಾಯ ಹಸ್ತ

09:09 PM Jul 15, 2019 | Lakshmi GovindaRaj |

ಸಂತೆಮರಹಳ್ಳಿ: ಸುತ್ತಮುತ್ತಲು ಆವರಿಸಿರುವ ಎನ್‌ಎಸ್‌ ಮುಳ್ಳಿನ ಸಾಲುಸಾಲು ಗಿಡಗಳು, ನಡುವೆಯೇ ಕಿವಿಗಪ್ಪಳಿಸುವ ರಾಟೆಯ ಗಿರಗಿರ ಸದ್ದು, ಇದರ ನಡುವೆ ಪ್ಲಾಸ್ಟಿಕ್‌ ಚೀಲದ, ಕತ್ತಾಳೆ ಗಿಡದ ದಾರಗಳನ್ನು ಹಿಡಿದು ಸಾಗಿ ಹಗ್ಗ ಹೊಸೆಯುವ ಪುರುಷ ಹಾಗೂ ಮಹಿಳೆಯರು. ಶಾಲಾ-ಕಾಲೇಜು ಮುಗಿಸಿ ಸಿಮೆಂಟ್‌ ಸೇರಿದಂತೆ ವಿವಿಧ ಪ್ಲಾಸ್ಟಿಕ್‌ ಚೀಲಗಳಲ್ಲಿನ ದಾರಗಳನ್ನು ಬಿಡಿಸುವ ಹುಡಗ, ಹುಡುಗಿಯರ ದಂಡು, ಇದರ ನಡುವೆಯೇ ಮಕ್ಕಳನ್ನು ಸಂಬಾಳಿಸಿಕೊಂಡು ಮನೆಕೆಲಸ ಮುಗಿಸುವ ಧಾವಂತದಲ್ಲಿರುವ ಮಹಿಳೆಯರ ಗುಂಪು…

Advertisement

ಇವೆಲ್ಲಾ ಕಾಣ ಸಿಗುವುದು ಸಂತೆಮರಹಳ್ಳಿ ಸಮೀಪದ ಬಡಗಲಮೋಳೆ ಗ್ರಾಮದಲ್ಲಿ. ಈ ಗ್ರಾಮ ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಯ ಪುಟ್ಟ ಗ್ರಾಮ. 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡಿದ್ದಾಗ ಇಡೀ ರಾಜ್ಯದಲ್ಲೇ ಸದ್ದು ಮಾಡಿತ್ತು.

ಇದೇ ಆದಾಯದ ಮೂಲ: ಈ ಗ್ರಾಮದಲ್ಲಿ 125 ಹಿಂದುಳಿದ ಉಪ್ಪಾರ ಜನಾಂಗದ ಕುಟುಂಬಗಳು ವಾಸವಿದ್ದು, 460 ಮತದಾರರಿದ್ದಾರೆ. ಇಡೀ ಜಿಲ್ಲೆಯಲ್ಲೇ ಪ್ಲಾಸ್ಟಿಕ್‌ ದಾರ ಹಾಗೂ ಕತ್ತಾಳೆ ಗಿಡದ ನಾರಿನಿಂದ ಹಗ್ಗ ಹೊಸೆಯುವ ಕಾಯಕ ಇಲ್ಲಿನ ಪ್ರತಿ ಕುಟುಂಬದ್ದು. ಅನಾದಿ ಕಾಲದಿಂದಲೂ ಈ ವೃತ್ತಿಯನ್ನು ಮಾಡುತ್ತಾ ಬಂದಿರುವ ಇವರು. ತಮ್ಮ ಆದಾಯದ ಮೂಲವಾಗಿ ಇದನ್ನೇ ನೆಚ್ಚಿಕೊಂಡಿದ್ದಾರೆ.

ಪೂರ್ವಜರ ವೃತ್ತಿ: ತಮ್ಮ ಪೂರ್ವಜರ ವೃತ್ತಿಯನ್ನು ಬಿಡಬಾರದೆಂಬುದು ಇವರ ವಾದ. ಈ ಹಿನ್ನೆಲೆಯಲ್ಲೇ ಇಂದು ಇವರು ಹೊಸೆಯುವ ಹಗ್ಗವು ನೆರೆಯ ತಮಿಳುನಾಡು, ಆಂಧ್ರಪ್ರದೇಶಕ್ಕೂ ರಫ್ತಾಗುತ್ತದೆ. ಪ್ರತಿದಿನ ರಾಟೆ ತಿರುಗಿಸುವುದಕ್ಕೆ 150 ರೂ., 30 ಪ್ಲಾಸ್ಟಿಕ್‌ ಚೀಲಗಳಲ್ಲಿನ ದಾರವನ್ನು ಬಿಡುಸುವವರು 35 ರೂ. ಸಂಪಾದನೆ ಮಾಡುತ್ತಾರೆ.

ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಮಾರಾಟ: ಅಲ್ಲದೆ ಹಗ್ಗವನ್ನು ಹೊಸೆಯುವವರಿಗೆ ಪ್ರತ್ಯೇಕ ವೇತನವಿದೆ. ಇದರೊಂದಿಗೆ ಸಿಮೆಂಟ್‌ ಚೀಲಗಳನ್ನು ತಂದು, ಅದನ್ನು ತೊಳೆದು, ಪ್ಲಾಸ್ಟಿಕ್‌ನಲ್ಲಿನ ದಾರಗಳನ್ನು ಬೇರ್ಪಡಿಸಿ ಒಂದೊಂದು ಚೀಲಕ್ಕೆ ಒಂದೊಂದು ಕಟ್ಟುಗಳನ್ನಾಗಿ ಮಾಡಿ, ಹಗ್ಗದ ದಪ್ಪಕ್ಕೆ ತಕ್ಕಂತೆ 3, 5, 6 ಚೀಲಗಳಿಂದ ಬೇಡಿಕೆಗೆ ತಕ್ಕಂತೆ ಹಗ್ಗಗಳನ್ನು ಹೊಸೆಯುವ ಕಾಯಕ ಮಾಡುತ್ತಾರೆ. ಕೆಲವರು ಕೂಲಿಯಾಳುಗಳಾಗಿ ಕೆಲಸ ಮಾಡಿದರೆ ಮತ್ತೆ ಕೆಲವರು ತಾವೇ ಹಗ್ಗ ತಯಾರಿಸಿ ಪ್ರತಿ ಮಂಗಳವಾರ ನಡೆಯುವ ಜಿಲ್ಲೆಯ ಪ್ರಸಿದ್ಧ ಸಂತೆಮರಹಳ್ಳಿ ಸಂತೆಗೆ ತೆರಳಿ ಬೇರೆ ರಾಜ್ಯಗಳಿಂದ ಬರುವ ಹೋಲ್‌ಸೆಲ್‌ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.

Advertisement

ವಿವಿಧ ಮಾದರಿ: ಪಕ್ಕದ ತೆಂಕಲಮೋಳೆ ಗ್ರಾಮದವರು ಈ ಹಗ್ಗಗಳನ್ನು ಬಳಸಿಕೊಂಡೇ ಎತ್ತುಗಳ ಬಾಯಿಗೆ ಹಾಕುವ ಮುಸುಕು ಕುಕ್ಕೆ, ಚಾಟೀ, ಜಾನುವಾರುಗಳನ್ನು ಕಟ್ಟುವ ಹಗ್ಗ, ಮೂಗುದಾರ ಸೇರಿದಂತೆ ವಿವಿಧ ಮಾದರಿಗಳಲ್ಲಿ ತಯಾರು ಮಾಡಿ ಇದನ್ನು ಮಾರಾಟ ಮಾಡುತ್ತಾರೆ.

ವಿದ್ಯಾಭ್ಯಾಸಕ್ಕೆ ಒತ್ತು: ವಿದ್ಯಾಭ್ಯಾಸದಿಂದ ಅನೇಕ ವರ್ಷಗಳಿಂದ ದೂರವಿದ್ದ ಇಲ್ಲಿನ ಮಕ್ಕಳು ಇತ್ತೀ ಚೆಗೆ ಓದಿನ ಕಡೆ ಹೆಚ್ಚು ಗಮನಹರಿಸಿದ್ದಾರೆ. ಗ್ರಾಮದಲ್ಲಿ ಒಬ್ಬ ಶಿಕ್ಷಕ, ಪೊಲೀಸ್‌ ಪೇದೆಯೂ ಆಗಿದ್ದಾರೆ. ಅಲ್ಲದೆ ಹಲವು ವಿದ್ಯಾರ್ಥಿಗಳು ಪಕ್ಕದ ಕುದೇರಿನ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲೇ ಪ್ರಾಥಮಿಕ ಶಾಲೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ಬೇಸಿಗೆಯಲ್ಲಿ ಸ್ವಲ್ಪ ತೊಂದರೆಯಾಗುತ್ತದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಇಲ್ಲಿನ ಗ್ರಾಪಂ ಸದಸ್ಯ ಶಿವಣ್ಣ “ಉದಯವಾಣಿ’ಗೆ ತಿಳಿಸಿದರು.

ಬಡಗಲಮೋಳೆ ಗ್ರಾಮಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಹಗ್ಗ ಹೊಸೆಯುವುದು ಇವರ ಪಾರಂಪರಿಕ ಕಾಯಕವಾಗಿದೆ. ಆದರೆ ಅಧುನಿಕ ಯಂತ್ರಗಳನ್ನು ಬಳಸಿಕೊಳ್ಳುವಲ್ಲಿ ಇವರು ಇನ್ನೂ ಹಿಂದಿದ್ದಾರೆ. ಇದರ ಬಗ್ಗೆ ಇವರಿಗೆ ತರಬೇತಿ ನೀಡಲು ಸಂಬಂಧಪಟ್ಟ ಇಲಾಖೆ ಜೊತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಗ್ರಾಮದ ಮೂಲ ಸಮಸ್ಯೆಗಳನ್ನು ನಿವಾರಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
-ಎನ್‌.ಮಹೇಶ್‌, ಶಾಸಕ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿ, ಊಟ ಮಾಡಿದ್ದರು. ಇವರು ಬಂದ ಹಿನ್ನೆಲೆಯಲ್ಲಿ ಮನೆಗಳು, ರಸ್ತೆ, ಕುಡಿಯುವ ನೀರು ಗ್ರಾಮಕ್ಕೆ ಸಿಕ್ಕಿತ್ತು. ಹಗ್ಗ ಹೊಸೆಯುವ ಕಾಯಕಕ್ಕೆ ನಮಗೆ ಸಾಲವೂ ನೀಡಲಾಗಿತ್ತು. ಆದರೆ ಇತ್ತೀಚೆಗೆ ಯಾವೊಬ್ಬ ಜನಪ್ರತಿನಿಧಿ ಅಥವಾ ಅಧಿಕಾರಿ ಇಲ್ಲಿಗೆ ಭೇಟಿ ನೀಡಿಲ್ಲ. ನಿತ್ಯ ಹಗ್ಗ ಹೊಸೆಯುವು ದರಿಂದ ನಮ್ಮ ಕೈಬೆರಳುಗಳು ಕಿತ್ತು ಹೋಗುತ್ತದೆ. ನಮಗೆ ಆಧುನಿಕ ಯಂತ್ರೋಪಕರಣ ನೀಡಿದ್ದೇ ಆದಲ್ಲಿ ನಮ್ಮ ವ್ಯಾಪಾರನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದು.
-ಬಸಮ್ಮ, ನಿವಾಸಿ

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next