Advertisement

ಬನ್‌ ಲಿಫ್ಟ್ ಬೇಕಾ?

07:29 PM Nov 12, 2019 | mahesh |

ಹಿಂದಿನ ಕಾಲದ ಮಹಿಳೆಯರ ಅಚ್ಚುಮೆಚ್ಚಿನ ಹೇರ್‌ಸ್ಟೈಲ್‌ ಯಾವುದು ಅಂತ ಕೇಳಿದರೆ, ಥಟ್‌ ಅಂತ ತುರುಬು ಅನ್ನಬಹುದು. ಯಾಕಂದ್ರೆ, ಅಮ್ಮ-ಅಜ್ಜಿಯರು ತಮ್ಮ ಉದ್ದ ಕೂದಲನ್ನು ಗಂಟು ಮಾಟಿ, ತುರುಬು ಹಾಕುತ್ತಿದ್ದುದನ್ನು ನೋಡಿದ್ದೇವೆ. ಅದೇ ಹೇರ್‌ಸ್ಟೈಲ್‌ ಮುಂದೆ “ಬನ್‌’ ಹೆಸರಿನಲ್ಲಿ ಪ್ರಚಲಿತವಾಯ್ತು…

Advertisement

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಚಾಲೆಂಜ್‌ಗಳು, ಟ್ರೆಂಡ್‌ಗಳು ಹುಟ್ಟಿಕೊಳ್ಳುತ್ತಿವೆ. ಸೆಲೆಬ್ರಿಟಿಗಳಿಂದ ಶುರುವಾಗುವ ಟ್ರೆಂಡ್‌ಗಳು ಅಭಿಮಾನಿಗಳನ್ನು ತಲುಪಲು ಹೆಚ್ಚು ಸಮಯ ಬೇಕಿಲ್ಲ. ಅಂಥ ಒಂದು ಟ್ರೆಂಡ್‌- ಬನ್‌ ಲಿಫ್ಟ್ ಬನ್‌ ಅಂದರೆ ಗೊತ್ತಲ್ಲ; ತುರುಬಿಗೆ ಇಂಗ್ಲಿಷ್‌ನಲ್ಲಿ ಬನ್‌ ಎನ್ನುತ್ತಾರೆ. (ಚಹಾದ ಜೊತೆ ಸೇವಿಸುವ ಬನ್‌ನ ಆಕಾರವನ್ನು ಹೋಲುವುದರಿಂದ ತುರುಬಿಗೆ ಆ ಹೆಸರು)

ಬೇಸಿಗೆಯಲ್ಲಿ ಜಡೆ, ಜುಟ್ಟು ಕಟ್ಟಿಕೊಳ್ಳಲು ಅಥವಾ ತಲೆಕೂದಲು ಬಿಟ್ಟು ಓಡಾಡುವುದು ಕಷ್ಟ. ಬೆವರಿದ ಬೆನ್ನಿಗೆ ಕೂದಲು ಅಂಟಿಕೊಂಡು, ಉದ್ದ ಕೂದಲಿನ ಬಗ್ಗೆಯೇ ಜುಗುಪ್ಸೆ ಹುಟ್ಟುತ್ತದೆ. ಆಗ, ನೀಳವೇಣಿಯರು ಮೊರೆ ಹೋಗುವುದು ಬನ್‌ ಲಿಫ್ಟ್ ಕೇಶವಿನ್ಯಾಸಕ್ಕೆ.

ಮೆಸ್ಸಿ ಬನ್‌
ಅಮ್ಮ-ಅಜ್ಜಿಯರಂತೆ ನೀಟಾಗಿ ತುರುಬು ಕಟ್ಟಿಕೊಳ್ಳುವುದು ಸ್ಟೈಲ್‌ ಅಲ್ಲ. ಕೈಗೆ ಸಿಕ್ಕ ಹಾಗೆ, ಕೂದಲನ್ನು ಎಳೆದು ಕಟ್ಟಿಕೊಂಡರೆ ಸಾಕು. ಬನ್‌, ನೆತ್ತಿಯ ಮೇಲೆ ಕುಳಿತರೆ ಚೆನ್ನ (ಎಷ್ಟು ಮೇಲೆ ಕಟ್ಟಿಕೊಳ್ಳಲು ಸಾಧ್ಯವೋ ಅಷ್ಟು ಮೇಲೆ ಬನ್‌ ಹಾಕಿ) ಒಳ್ಳೆಯದು. ಕೂದಲನ್ನು ಎಳೆದು ಕಟ್ಟಿಕೊಂಡರೆ, ಮುಖದ ಮೇಲಿನ ನೆರಿಗೆಗಳು ಕಾಣಿಸುವುದಿಲ್ಲ ಅನ್ನುವುದು ಬನ್‌ ಕಟ್ಟಿಕೊಳ್ಳುವವರ ನಂಬಿಕೆ! ಈ ಕೇಶ ವಿನ್ಯಾಸ, ಸೆಖೆಯಿಂದ ಆರಾಮ ನೀಡುವುದಷ್ಟೇ ಅಲ್ಲದೆ, ಮುಖಕ್ಕೂ ಹೊಸ ಆಯಾಮ ನೀಡುತ್ತದೆ. ಮೆಸ್ಸಿ (ಕೆದರಿಕೊಂಡಂತೆ)ಇದ್ದಷ್ಟು ಅಂದ ಎನ್ನುವುದೇ ಈ ಬನ್‌ಲಿಫ್ಟ್ ನ ವೈಶಿಷ್ಟ್ಯ!

ಎಲ್ಲ ಕಡೆಗೂ ಸಲ್ಲುತ್ತದೆ
ಬನ್‌ ಈಗ ಬೋರಿಂಗ್‌ ಹೇರ್‌ಸ್ಟೈಲ್‌ ಆಗಿ ಉಳಿದಿಲ್ಲ. ಮದುವೆ, ಹಬ್ಬ, ಹರಿದಿನಗಳಲ್ಲಿ ಬನ್‌ ಕಟ್ಟಿ ಅದಕ್ಕೆ ಅಂದದ ಹೇರ್‌ ಆಕ್ಸೆಸರೀಸ್‌ ಬಳಸಬಹುದು ಹಾಲಿಡೇ, ಆಫೀಸ್‌, ಪಾರ್ಟಿ, ಸಿನಿಮಾ, ಕಾಲೇಜು, ಹೋಟೆಲ…, ಶಾಪಿಂಗ್‌ಗೂ ಆರಾಮಾಗಿ ಬನ್‌ಲಿಫ್ಟ್ ಕೇಶ ವಿನ್ಯಾಸ ಮಾಡಿಕೊಳ್ಳಬಹುದು.

Advertisement

ಇದಕ್ಕೆ ಗಾಜಿನ ಕ್ಲಿಪ್‌, ಪಿನ್‌ಗಳು, ಮುತ್ತು, ಕಲ್ಲು, ಹೊಳೆಯುವ ವಸ್ತು, ಬಣ್ಣ-ಬಣ್ಣದ ಟಿಯಾರ, ಬೋ, ಹೂವಿನ ಆಕೃತಿಯ ಕ್ಲಿಪ್‌, ಮಲ್ಲಿಗೆ ಮಾಲೆಗೆ ಹೋಲುವ ಕೃತಕ ತುರುಬು, ಹೇರ್‌ ಎಕ್ಸ್‌ಟೆನ್ಶನ್‌ (ಚೌರಿ), ಹೇರ್‌ ಬ್ಯಾಂಡ್‌, ರಿಬ್ಬನ್‌ ಮತ್ತು ಬೇರೆ ಆಕ್ಸೆಸರೀಸ್‌ ಬೇಕು ಅಂತಲೂ ಇಲ್ಲ. ದಿನನಿತ್ಯ ಬಳಸುವ ರಬ್ಬರ್‌ ಬ್ಯಾಂಡ್‌ ಮತ್ತು ಸಾಮಾನ್ಯ ಹೇರ್‌ಕ್ಲಿಪ್‌ಗ್ಳಿದ್ದರೂ ಸಾಕು.

ಬ್ಲೋ ಡ್ರೈಯರ್‌, ಸ್ಟ್ರೇಟ್ನರ್‌, ಹೇರ್‌ ಸ್ಪ್ರೆ, ಸೀರಮ…, ಇತ್ಯಾದಿಗಳನ್ನು ಬಳಸದೆಯೂ ಬನ್‌ ಲಿಫ್ಟ್ ಮಾಡಿಕೊಳ್ಳಬಹುದು. ಈ ರೀತಿಯ ಕೇಶ ವಿನ್ಯಾಸ ಮಾಡಿಕೊಳ್ಳುವುದು ಬಹಳ. ಯೂ ಟ್ಯೂಬ್‌ನಲ್ಲಿ ‘ಬನ್‌ ಲಿಫ್ಟ್’ ಎಂದು ಹುಡುಕಿದರೆ, ಪ್ರಾತ್ಯಕ್ಷಿಕೆಗಳು ಲಭ್ಯ.

ಎರಡಕ್ಕೂ ಮ್ಯಾಚ್‌ ಆಗುತ್ತೆ
ಈ ಕೇಶ ವಿನ್ಯಾಸ, ಮಾಡರ್ನ್ ಉಡುಪು ಹಾಗೂ ಸಾಂಪ್ರದಾಯಕ ದಿರಿಸು- ಎರಡರ ಜೊತೆಗೂ ಹೊಂದಿಕೊಳ್ಳುತ್ತದೆ. ಅತ್ತ ಸಾಂಪ್ರದಾಯಿಕವೂ ಹೌದು, ಇತ್ತ ಆಧುನಿಕವೂ ಹೌದು, ಎನ್ನುಬಹುದಾದ ಈ ಕೇಶಾಲಂಕಾರ, ಗಕ್ಷಿಡಿಬಿಡಿಯ ಬೆಡಗಿಯರಿಗೆ ಹೇಳಿ ಮಾಡಿಸಿದ್ದು. ಸರಳವಾಗಿ ಕಾಣುವ ಬನ್‌ ಲಿಫ್ಟ್, ಆಕರ್ಷಕವೂ ಹೌದು.

ತುರುಬು ಸುಲಭವೇನೋ ಹೌದು, ಆದರೆ ಸ್ಟೈಲಿಶ್‌ ಅಲ್ಲ ಅನ್ನುವವರಿದ್ದಾರೆ. ಅಂಥವರು ಬ್ರೇಡೆಡ್‌ ಬನ್‌ ಹೇರ್‌ ಸ್ಟೈಲ್‌ ಅನ್ನು ಟ್ರೈ ಮಾಡಬಹುದು. ಮೊದಲು ಜಡೆ ಹೆಣೆದು, ನಂತರ ತುರುಬು ಹಾಕಿಕೊಳ್ಳುವುದು ಬ್ರೇಡೆಡ್‌ ಬನ್‌ನ ವಿಶೇಷ.
1. ಮೊದಲು ಕೂದಲನ್ನು ಸಿಕ್ಕಿಲ್ಲದಂತೆ ಬಿಡಿಸಿಕೊಂಡು, ಹೈ ಪೋನಿ ಹಾಕಿಕೊಳ್ಳಿ.
2. ಹೈ ಪೋನಿಯ ತುದಿಯವರೆಗೂ ಜಡೆ ಹಾಕಿ, ಕೊನೆಯಲ್ಲಿ ರಬ್ಬರ್‌ ಬ್ಯಾಂಡ್‌ ಹಾಕಿ.
3. ಜಡೆಯ ಎಳೆಗಳನ್ನು ಸ್ವಲ್ಪ ಸಡಿಲಿಸಿ, ಅಗಲ ಮಾಡಿ.
4. ಜಡೆಯನ್ನು ಸ್ವಲ್ಪ ಮೇಲಕ್ಕೆತ್ತಿ, ಕೂದಲಿನ ಬುಡಕ್ಕೆ ಹೇರ್‌ಪಿನ್‌ ಸೇರಿಸಿ ಭದ್ರಗೊಳಿಸಿ.
5. ನಂತರ ಜಡೆಯ ಉಳಿದ ಭಾಗವನ್ನೂ ಮಡಚಿದಂತೆ ಮಾಡಿ ಹೇರ್‌ಪಿನ್‌ ಹಾಕಿ.
6. ಜಡೆಯ ಎಳೆಗಳನ್ನು ಸ್ವಲ್ಪ ಸಡಿಲಿಸಿದಾಗ ತುರುಬಿನ ಆಕಾರ ಸಿಗುತ್ತದೆ.
7. ಹೆಣೆದುಕೊಂಡ ಜಡೆಯೇ ತುರುಬಿನ ಆಕಾರಕ್ಕೆ ಬರುವುದರಿಂದ, ಅರಳಿದ ಹೂವಿನಂತೆ ಕಾಣಿಸುತ್ತದೆ.

– ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next