Advertisement

ಜಾತಿ ಸೋಸುವಿಕೆ ಅವಶ್ಯ: ಮಾಲಗತ್ತಿ

12:16 PM Dec 22, 2021 | Team Udayavani |

ಕಲಬುರಗಿ: ಸಮಾಜದಲ್ಲಿನ ಜಾತಿ, ವರ್ಣ, ಧರ್ಮದ ವ್ಯವಸ್ಥೆ ತಪ್ಪಲ್ಲ. ಆದರೆ, ಅದನ್ನು ಬದಲಾದ ಕಾಲಕ್ಕೆ ತಕ್ಕಂತೆ ಸೋಸುವಿಕೆ ಆಗದಿರುವುದು ತಪ್ಪು ಎಂದು ಹಿರಿಯ ಸಾಹಿತಿ ಪ್ರೊ| ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಮುಖಾಮುಖೀ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆ ಕಾಲದ ಚಿನ್ನ ಭಾರ ಎಂದು ಯಾರೂ ಎಸೆಯುವುದಿಲ್ಲ. ಅದೇ ಚಿನ್ನ ಕರಗಿಸಿ, ಸೋಸಿ ಅದಕ್ಕೆ ಹೊಸ ರೂಪ ಕೊಟ್ಟು ಧರಿಸುತ್ತೇವೆ. ಅದೇ ರೀತಿ ಜಾತಿ, ಧರ್ಮದ ನ್ಯೂನತೆ ಸೋಸಿ ಸರಿಪಡಿಸಿಕೊಳ್ಳುವುದು ಅಗತ್ಯವಿದೆ. ಇಲ್ಲವಾದಲ್ಲಿ ಸಮಾಜ ಜಡವಾಗುತ್ತದೆ ಎಂದರು.

ನಮ್ಮ ಆಲೋಚನೆಗಳ ಜತೆ, ನಡೆಯೂ ಅವಲಂಬನೆ ಆಗಬೇಕು. ಆಚಾರ ಹೇಳಿದರೆ ಸಾಲದು, ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದೂ ಮುಖ್ಯ. ನಮ್ಮ ಕೃತಿಯಲ್ಲಿರುವುದನ್ನು ಅನುಷ್ಠಾನಕ್ಕೂ ತರಬೇಕು. ಹೊಸ ಆಲೋಚನೆ, ಚಿಂತನೆ ಬಂದಾಗ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ತೆರೆದ ಹಾಗೂ ಮುಕ್ತ ಆಲೋಚನೆಗಳಿಂದ ಮನಸ್ಸು ಪರಿಶುದ್ಧವಾಗುತ್ತದೆ. ವಿರೋಧ ಮೀರಿ ನಿಲ್ಲುವ ಗುಣವನ್ನು ಕನ್ನಡ ಸಾಹಿತ್ಯ ನೀಡುತ್ತದೆ ಎಂದು ಹೇಳಿದರು.

ಕಂಡ-ಕಂಡಿದ್ದನ್ನೆಲ್ಲ ವಿರೋಧಿಸುವುದು ಬಂಡಾಯ ಸಾಹಿತ್ಯವಲ್ಲ. ಸಮಾಜದಲ್ಲಿನ ಕೆಟ್ಟದ್ದನ್ನು ವಿರೋಧಿಸುವುದೇ ಬಂಡಾಯ ಸಾಹಿತ್ಯ. ಅಲ್ಲದೇ, ಸಾಹಿತ್ಯಗಾರನಿಗೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಸತ್ಯಹೇಳುವ ಗುಣ ಇರಬೇಕು. ಆಗ ನಿತ್ಯ ನೂತನವಾಗಿ ಕಾಣುತ್ತದೆ ಎಂದು ತಿಳಿಸಿದರು.

ಸೋಲು-ಗೆಲುವುಗಳು ನಮ್ಮೊಳಗೆ ಇವೆ. ಸೋಲುತ್ತೇವೆ ಅಂತ ನಾವೇ ಅಂದುಕೊಂಡರೆ ಸೋಲುತ್ತೇವೆ. ಗೆದ್ದೇ ಗೆಲ್ಲುತ್ತೇವೆ ಎಂದು ಭಾವಿಸಿದರೆ, ಸೋಲಾದರೂ ಎದ್ದು ಮುಂದೆ ಸಾಗಲು ಸಾಧ್ಯವಾಗುತ್ತದೆ. ಇಂತಹ ಗಟ್ಟಿತನದಿಂದ ಸೋಲು ಗೆಲುವಾಗಿ ಪರಿವರ್ತನೆ ಆಗುತ್ತದೆ ಎಂದರು.

Advertisement

ಜಿಲ್ಲಾ ಸಾಹಿತ್ಯ ಕನ್ನಡ ಸಾಹಿತಿ ಪರಿಷತ್‌ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ, ಶಿವರಾಜ ಅಂಡಗಿ ಹಾಗೂ ಸಾಹಿತ್ಯಾಸ್ತಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next