ಪ್ರಸಕ್ತ ವರ್ಷದ ಆರಂಭದಿಂದಲೂ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗುತ್ತಲೇ ಇದೆ. ಸದ್ಯ ಡಾಲರ್ ಎದುರು ರೂಪಾಯಿ ಮೌಲ್ಯ 79 ರೂ.ಗಳಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಅಂದರೆ ಡಾಲರ್ ಎದುರು 80 ರೂ.ಗೂ ಹೆಚ್ಚಳವಾಗುವ ಸಂಭವವಿದೆ.
ವರದಿಗಳ ಪ್ರಕಾರ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಪ್ರತೀ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಶೇ. 6ರಷ್ಟು ಇಳಿಕೆಯಾಗಿದೆ. ಅಷ್ಟೇ ಅಲ್ಲ, ಭಾರತದ ಫಾರೆಕ್ಸ್ ರಿಸರ್ವ್ ಕೂಡ 600 ಬಿಲಿಯನ್ ಡಾಲರ್‌ಗಿಂತ ಕೆಳಗೆ ಇಳಿಕೆಯಾಗಿದೆ. ಅಂದರೆ 2021ರ ಸೆ. 3ರಂದು 650 ಬಿಲಿಯನ್ ಡಾಲರ್ ಇದ್ದ ಫಾರೆಕ್ಸ್ ರಿಸರ್ವ್ ಇಲ್ಲಿಯ ವರೆಗೆ 50 ಬಿಲಿಯನ್ ಡಾಲರ್‌ನಷ್ಟು ಕಡಿಮೆಯಾಗಿದೆ. ಆರ್‌ಬಿಐನ ಕೆಲವು ಕ್ರಮಗಳಿಂದಾಗಿ ದೇಶದ ಫಾರೆಕ್ಸ್ ರಿಸರ್ವ್ ಕಡಿಮೆಯಾಗಿದೆ ಎಂಬುದು ತಜ್ಞರ ಅಭಿಮತ. ಜತೆಗೆ ರೂಪಾಯಿ ಮೌಲ್ಯದ ಸ್ಥಿರತೆ ಕಾಪಾಡಿಕೊಳ್ಳಲು ಇದು ಸಹಾಯಕವಾಗಿದೆ ಎಂದೂ ಹೇಳಲಾಗುತ್ತಿದೆ.
ಸಾಮಾನ್ಯವಾಗಿ ರೂಪಾಯಿ ಮೌಲ್ಯ ಇಳಿಕೆಯಾಗುವುದು ಮಾರು ಕಟ್ಟೆಗೆ ಕರೆನ್ಸಿ ಪೂರೈಕೆ ಹೆಚ್ಚಾದಾಗ. ಇದಕ್ಕೆ ಬದಲಾಗಿ ಕರೆನ್ಸಿಯೊಂದಕ್ಕೆ ಬೇಡಿಕೆ ಹೆಚ್ಚಾದಾಗ ಅದರ ಮೌಲ್ಯವೂ ಹೆಚ್ಚಾಗುತ್ತದೆ. ಈಗ ಅಮೆರಿಕ ಡಾಲರ್‌ಗೆ ಮೌಲ್ಯ ಹೆಚ್ಚಾಗಿರುವುದಕ್ಕೆ ಇದೇ ಮುಖ್ಯ ಕಾರಣ. ಸದ್ಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನ ವಸ್ತುಗಳು ಸೇರಿದಂತೆ ವಿವಿಧ ವಿದೇಶಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಸಾಕಷ್ಟು ರೂಪಾಯಿ ಬೇಕಾಗುತ್ತದೆ. ಆಗ ಅದರ ಪೂರೈಕೆಯೂ ಮಾರುಕಟ್ಟೆಯಲ್ಲಿ ಹೆಚ್ಚಾ ಗುತ್ತದೆ. ಅಲ್ಲದೆ ತೈಲದ ಆಮದಿಗೆ ಬೇಡಿಕೆ ಹೆಚ್ಚಾದಂತೆ ಕರೆನ್ಸಿಯನ್ನು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಹರಿಸಲಾಗುತ್ತದೆ. ಆಗ ರೂಪಾಯಿ ಮೌಲ್ಯ ತನ್ನಿಂತಾನೇ ಇಳಿಕೆಯಾಗುತ್ತದೆ. ಸದ್ಯದ ಮಟ್ಟಿಗೆ ಈ ಪ್ರಕ್ರಿಯೆಯನ್ನು ನಿಲ್ಲಿಸುವ ಸಾಧ್ಯತೆ ತೀರಾ ಕಡಿಮೆ.
ಮೊದಲೇ ಹೇಳಿದಂತೆ ಭಾರತವಷ್ಟೇ ಅಲ್ಲ, ಮುಂದುವರಿದ ದೇಶ ಗಳು ಕೂಡ ಡಾಲರ್ ಎದುರು ಮೌಲ್ಯ ಕಳೆದುಕೊಳ್ಳುತ್ತಲೇ ಇವೆ. ಅಮೆ ರಿಕವೂ ಹಣದುಬ್ಬರ ಹೆಚ್ಚಳದಿಂದಾಗಿ ಬೇರೆ ಬೇರೆ ಉಪಕ್ರಮಗಳನ್ನು ಅನುಸರಿಸಿ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದೆ. ಈಗ ಆಗಬೇಕಾಗಿರುವುದು ಅದೇ. ಭಾರತದಲ್ಲಿ ರೂಪಾಯಿ ಮೌಲ್ಯ ತಡೆಗಟ್ಟಲು ಆರ್‌ಬಿಐ ಮತ್ತು ಕೇಂದ್ರ ಸರಕಾರ ಒಟ್ಟಾಗಿ ನಿಂತು ಶ್ರಮಿಸಬೇಕಾಗಿದೆ. ಸದ್ಯ ಭಾರತದಲ್ಲಿ 95 ತಿಂಗಳ ದಾಖಲೆಯ ಶೇ.7.8ರಷುc ಹಣದುಬ್ಬರವಿದೆ. ಇದನ್ನು ತಡೆ ಗಟ್ಟಲು ಆರ್‌ಬಿಐ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈಗಾಗಲೇ ರೆಪೋ ದರ ಹೆಚ್ಚಳ ಮಾಡಿ, ಹಣದುಬ್ಬರ ಇಳಿಕೆಗೆ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸವಾಗಬೇಕಿದೆ.
ಇಲ್ಲದಿದ್ದರೆ, ದೇಶಗಳ ರೂಪಾಯಿಗಳು ಮೌಲ್ಯ ಕಳೆದುಕೊಳ್ಳುತ್ತಾ ಸಾಗಿದರೆ ಮುಂದಿನ ದಿನಗಳಲ್ಲಿ ಶ್ರೀಲಂಕಾ, ಪಾಕಿಸ್ಥಾನ ಎದುರಿಸು ತ್ತಿರುವ ಸಮಸ್ಯೆಗಳಲ್ಲಿ ಕೆಲವೊಂದಾದರೂ ನಮ್ಮಲ್ಲೂ ಕಾಣಿಸಿ ಕೊಳ್ಳಬಹುದು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.
ಪ್ರಮುಖವಾಗಿ ವಿದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದೇ ಕಷ್ಟಕರವಾಗಿ ಪರಿಣಮಿಸಬಹುದು. ವಿದೇಶಿ ವಿನಿಮಯ ಸಂಗ್ರಹ ಹೆಚ್ಚಾಗಿದ್ದರೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಚೆನ್ನಾಗಿದ್ದರೆ ಆ ಆರ್ಥಿಕತೆ ಉತ್ತಮವಾಗಿದೆ ಎಂದೇ ಅರ್ಥ. ಈ ನಿಟ್ಟಿನಲ್ಲಿ ಸರಕಾರಗಳು ಗಮನಹರಿಸಲಿ.