ಮಂಡ್ಯ: ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳು ಹಾಗೂ ಗರ್ಭಿಣಿಯರನ್ನು ಗುರುತಿಸಿ,ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅಪೌಷ್ಟಿಕ ನಿರ್ಮೂಲನೆಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾಗೃತಿ ಮೂಡಿಸಿ: ಸೆಪ್ಟೆಂಬರ್ ಮಾಹೆಯನ್ನು ಪೋಷಣ್ ಅಭಿಯಾನದ ಮಾಸವಾಗಿ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಪೌಷ್ಟಿಕಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಪೌಷ್ಟಿಕ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ, ಅವರಿಗೆ ಜಾಗೃತಿಯನ್ನು ಮೂಡಿಸಿ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ತಲುಪಿಸಲಾಗುವುದು ಎಂದು ಹೇಳಿದರು.
ಅಂಗನವಾಡಿ ಮಕ್ಕಳಿಗೆ ಸೌಲಭ್ಯ: ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಅಂಗನವಾಡಿಗಳ ಮುಖಾಂತರ 92 ಸಾವಿರ ಅಂಗನವಾಡಿ ಮಕ್ಕಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಅಕ್ಷರ ಅಭ್ಯಾಸ ಮತ್ತು ಕೌಶಲ್ಯಅಭಿವೃದ್ಧಿ ಮಾಡುವ ಜೊತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 134 ಇದ್ದು, ಇದನ್ನು ಹಂತ-ಹಂತವಾಗಿ ಕಡಿಮೆ ಮಾಡಲಾಗುವುದು ಎಂದರು.
ಪೌಷ್ಟಿಕ ಆಹಾರ ಸೇವಿಸಿ: ಮಧ್ಯಮ ಅಪೌಷ್ಟಿಕೆಯಿಂದ ಇರುವಂಥ 4500 ಮಕ್ಕಳನ್ನು ಕೂಡ ಅಪೌಷ್ಟಿಕತೆಯಿಂದ ಪೌಷ್ಟಿಕತೆಗೆ ತರಲು ಅಂಗನವಾಡಿ ಕಾರ್ಯಕರ್ತರು, ಅಧಿಕಾರಿಗಳು ಮತ್ತು ಸರ್ಕಾರ ಕೆಲಸ ಮಾಡುತ್ತಿದೆ. ಗ್ರಾಮಾಂತರ, ನಗರ ಪ್ರದೇಶ ಹಾಗೂ ಕೊಳಚೆ ಪ್ರದೇಶಗಳಲ್ಲಿರುವ ಮಕ್ಕಳು, ಹದಿಹರೆಯ ಹಾಗೂ ಗರ್ಭಿಣಿಯರು ಪೌಷ್ಟಿಕ ಆಹಾರದ ಜೊತೆಗೆ ಜಂತುಹುಳು ಮಾತ್ರೆ ಯನ್ನುಕಾಲಕಾಲಕ್ಕೆ ಸೇವಿಸಬೇಕು ಎಂದರು.
ಆರೋಗ್ಯ ಸಮಸ್ಯೆಗೆ ತಾತ್ಸಾರ ಬೇಡ: ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ತಕ್ಷಣವೇ ತಮ್ಮ ಹತ್ತಿರದ ಆರೋಗ್ಯದ ಕೇಂದ್ರವನ್ನು ಸಂಪರ್ಕಿಸಿ, ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಎಲ್ಲರೂ ಅಪೌಷ್ಟಿ ಕತೆಯ ವಿರುದ್ಧ ಹೋರಾಡಬೇಕು ಎಂದು ಹೇಳಿದರು. ಜಿಪಂ ಸಿಇಒ ಎಸ್.ಎಂ.ಜುಲ್‌ಫಿಖಾರ್ ಉಲ್ಲಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಉಪನಿರ್ದೇಶಕ ಎಸ್.ರಾಜಮೂರ್ತಿ, ಕಾರ್ಯಕ್ರಮ ಸಂಯೋಜಕಿ ಉಷಾರಾಣಿ ಹಾಜರಿದ್ದರು.