ಸ್ವಿಸ್ ಬ್ಯಾಂಕಿನಲ್ಲಿದ್ದ 196 ಕೋಟಿ ರೂ. ಆದಾಯಕ್ಕೆ ತೆರಿಗೆ ಕಟ್ಟುವಂತೆ ಸೂಚನೆ
ತೆರಿಗೆ ರಿಟರ್ನ್ಸ್ ವೇಳೆ ವಿದೇಶಿ ಆದಾಯದ ಮೂಲ ಮುಚ್ಚಿಟ್ಟಿದ್ದ ವೃದ್ಧೆ
ವೃದ್ಧೆಯ ವಾದ ತಳ್ಳಿಹಾಕಿದ ಐಟಿಎಟಿ; ತೆರಿಗೆ, ದಂಡ ಕಟ್ಟುವಂತೆ ಆದೇಶ
ಮುಂಬಯಿ: ಅನಿವಾಸಿ ಭಾರತೀಯಳೆಂಬ ಸೋಗು ಹಾಕಿ ಸ್ವಿಟ್ಸರ್‌ಲೆಂಡ್ ಬ್ಯಾಂಕಿನಲ್ಲಿದ್ದ ಹಣವನ್ನು ಪಡೆಯಲು ಮುಂದಾಗಿದ್ದ ರೇಣು ತಾರಣಿ (80) ಎಂಬ ವೃದ್ಧೆಯೊಬ್ಬರಿಗೆ, ತೆರಿಗೆ ಹಾಗೂ ದಂಡ ಕಟ್ಟಿಯೇ ಹಣ ಪಡೆಯುವಂತೆ ಆದಾಯ ತೆರಿಗೆ ವ್ಯಾಜ್ಯ ನ್ಯಾಯಾಧೀಕರಣ (ಐಟಿಎಟಿ) ತೀರ್ಪು ನೀಡಿದೆ.
ರೇಣು ತಾರಣಿ (80 ವರ್ಷ) ಎಂಬವರ ಸಂಬಂಧಿಕರು ಸ್ವಿಟ್ಸರ್‌ಲೆಂಡ್‌ನಲ್ಲಿ ತಾರಣಿ ಫ್ಯಾಮಿಲಿ ಟ್ರಸ್ಟ್ ಎಂಬ ಸಂಸ್ಥೆ ನಡೆಸುತ್ತಿದ್ದು, ಈ ಸಂಸ್ಥೆಯ ವತಿಯಿಂದ 2004ರ ಜುಲೈನಲ್ಲಿ ಜಿನಿವಾದಲ್ಲಿರುವ ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ಜಿಡಬ್ಲ್ಯೂಯು ಇನ್ವೆಸ್ಟ್ ಮೆಂಟ್ಸ್ ಎಂಬ ಕಂಪೆನಿಯ ಹೆಸರಿನಲ್ಲಿ ಖಾತೆ ತೆರೆಯಲಾಗಿತ್ತು. ಆ ಕಂಪೆನಿಯಲ್ಲಿ ರೇಣು ತಾರಣಿ ಅವರು ಷೇರುದಾರರಾಗಿದ್ದರಿಂದ ಅವ ರನ್ನು ಆ ಖಾತೆ ಫಲಾನುಭವಿ ಮಾಲಕರೆಂದು ಪರಿಗಣಿಸಲಾಗಿತ್ತು. ಇತ್ತೀಚೆಗೆ, ಜಿ.ಡಬ್ಲ್ಯೂ.ಯು ಕಂಪೆನಿಯಿಂದ ರೇಣು ಅವರಿಗೆ 196 ಕೋಟಿ ರೂ. ಹಣ ಹರಿದುಬಂದಿದೆ.
ಐಟಿಯಿಂದ ನೋಟಿಸ್: ಇತ್ತ ಭಾರತದ ನಿವಾಸಿಯಾಗಿದ್ದ ರೇಣು, ಹತ್ತಾರು ವರ್ಷಗಳಿಂದ ತೆರಿಗೆ ಪಾವತಿಸುತ್ತಿ ದ್ದರೂ, ಈ ವಿದೇಶಿ ಆದಾಯದ ಮೂಲವನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಿರಲಿಲ್ಲ. ಇದನ್ನು ಪತ್ತೆ ಹಚ್ಚಿದ್ದ ತೆರಿಗೆ ಅಧಿಕಾರಿಗಳು, ರೇಣು ಅವರಿಗೆ ನೋಟಿಸ್ ಜಾರಿಗೊಳಿಸಿ, ತೆರಿಗೆೆ ಪಾವತಿಸಿಯೇ ವಿದೇಶಿ ಹಣ ಪಡೆಯುವಂತೆ ಸೂಚಿಸಿದ್ದರು.
ಇದರ ವಿರುದ್ಧ ಐಟಿಎಟಿ ಮೆಟ್ಟಿಲೇರಿದ್ದ ರೇಣು, ತಾವು ಕಳೆದೊಂದು ವರ್ಷದಿಂದ ಅನಿವಾಸಿ ಭಾರ ತೀ ಯಳಾಗಿರುವುದರಿಂದ, ವಿದೇಶಿ ಮೂಲಗಳಿಂದ ಬರುವ ಆದಾಯದ ಮೇಲೆ ಭಾರತ ಸರಕಾರಕ್ಕೆ ತೆರಿಗೆ ಕಟ್ಟುವ ಆವಶ್ಯಕತೆಯಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದರು. ಆದರೆ ಅದನ್ನು ನ್ಯಾಯಪೀಠ ಒಪ್ಪಲಿಲ್ಲ. 2005-06ರಲ್ಲಿ ರೇಣು ಅವರು ಸಲ್ಲಿಸಿದ್ದ ಆದಾಯ ತೆರಿಗೆ ರಿಟನ್ಸ್ ಗಳಲ್ಲಿ ತಮ್ಮನ್ನು ತಾವು ಬೆಂಗಳೂರಿನ ನಿವಾಸಿಯೆಂದು, ವಾರ್ಷಿಕವಾಗಿ 1.7 ಲಕ್ಷ ರೂ. ಮಾತ್ರವೇ ಆದಾಯ ಇರುವುದಾಗಿ ಘೋಷಿಸಿದ್ದನ್ನು ಪೀಠ ಪರಿಗಣಿಸಿತು. ಅಲ್ಲದೆ, ಕೇವಲ ಒಂದು ವರ್ಷದ ಹಿಂದೆ ಅನಿವಾಸಿ ಭಾರತೀಯರಾಗಿ ಬದಲಾಗಿರುವುದು ಅಚ್ಚರಿ ತರಿಸಿದೆ. ಭಾರತದಲ್ಲಿದ್ದಾಗ ಅವರು ಘೋಷಿಸಿ ರುವ 1.7 ಲಕ್ಷ ರೂ. ಆದಾಯದ ಲೆಕ್ಕದಲ್ಲಿ 196 ಕೋಟಿ ರೂ. ಸಂಪಾದಿಸಲು ರೇಣು ಅವರಿಗೆ 11, 529 ವರ್ಷಗಳೇ ಬೇಕು. ಹಾಗಾಗಿ, ರೇಣು ವಾದವು ವಾಸ್ತವತೆಗೆ ಅನುಗುಣವಾಗಿಲ್ಲ. ಹಾಗಾಗಿ, ಅವರ ವಿದೇಶಿ ಆದಾಯಕ್ಕೆ ಸೂಕ್ತವಾದ ತೆರಿಗೆ, ದಂಡ ಕಟ್ಟಲೇಬೇಕು ಎಂದು ಆದೇಶಿಸಿದೆ.