ಲಾಹೋರ್: ಮಂಗಳವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗುತ್ತಲೇ ಪಾಕಿಸ್ಥಾನದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯ ಪಂಜಾಬ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದ ನಂತರ ಸುಮಾರು 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಇಮ್ರಾನ್ ಖಾನ್ ಬೆಂಬಲಿಗರು ಹಾಗೂ ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯ ಕರ್ತರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಖಾನ್ ಬಂಧನದ ನಂತರ ಹಿಂಸಾಚಾರದಲ್ಲಿ 130 ಅಧಿಕಾರಿಗಳು ಮತ್ತು ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ.
ಇಮ್ರಾನ್ ಖಾನ್ ರನ್ನು 14 ದಿನಗಳ ದೈಹಿಕ ಬಂಧನಕ್ಕೆ ಕೋರಿದ್ದು, ಅವರನ್ನು ಬಂಧಿಸಿರುವ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗಾಗಿ ಹೆಚ್ಚಿನ ಭದ್ರತಾ ಪೊಲೀಸ್ ಸೌಲಭ್ಯದೊಂದಿಗೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಮ್ರಾನ್ ಖಾನ್ ಅವರ ಆಪ್ತ ಅಸಾದ್ ಉಮರ್ ನನ್ನು ನ್ಯಾಯಾಲಯದ ಆವರಣದಿಂದಲೇ ಬಂಧಿಸಲಾಗಿದೆ. ಇಮ್ರಾನ್ ಖಾನ್ ಮತ್ತು ಅವರ ಪಕ್ಷವು ಪಾಕ್ ಸರ್ಕಾರದ ಕಟ್ಟಡಗಳು ಮತ್ತು ಪಾಕ್ ನ ಸಂಸತ್ತಿನ ಮೇಲೆ ದಾಳಿಗಳನ್ನು ಪೂರ್ವ ಯೋಜಿತವಾಗಿ ಸಂಘಟಿಸುತ್ತಿದೆ ಎಂದು ಸರಕಾರ ಆರೋಪಿಸಿದೆ.
ಖಾನ್ ಅವರನ್ನು ಭ್ರಷ್ಟಾಚಾರ-ವಿರೋಧಿ ಸಂಸ್ಥೆ ಬಂಧಿಸಿದ ಒಂದು ದಿನದ ನಂತರ, ಪಾಕ್ ರೂಪಾಯಿ ಮೌಲ್ಯ ಬುಧವಾರ ಯುಎಸ್ ಡಾಲರ್ ಎದುರು 288.5 ರ ದಾಖಲೆಯ ಕನಿಷ್ಠ ಮಟ್ಟಕ್ಕೆ 1.3% ಕುಸಿದಿದೆ.