Advertisement
ಬದಲಿ ವ್ಯವಸ್ಥೆ ಮಾಡಿಕೊಳ್ಳುವ ತನಕ ಅವಕಾಶ ನೀಡಿ ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರ ನಡೆಸುವವರಿಗೆ ಯಾವುದೇ ಸೂಚನೆ ನೀಡದೆ ತೆರವುಗೊಳಿಸಿದ್ದು ಸರಿಯಲ್ಲ. ಈ ಕುರಿತು ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಹಾಗೂ ಬದಲಿ ವ್ಯವಸ್ಥೆ ಮಾಡಿಕೊಳ್ಳುವ ತನಕ ಸಮಸ್ಯೆ ಮಾಡದಂತೆ ಮನವಿ ಮಾಡುವುದಾಗಿ ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡ ಜಾಗದಲ್ಲಿ ಸರ್ವೀಸ್ ರಸ್ತೆ ಅಥವಾ ಬೇರೆ ಯಾವುದೇ ಅಭಿವೃದ್ಧಿ ನಡೆಯುವ ಕಾರಣಕ್ಕಾಗಿ ಗೂಡಂಗಡಿ ತೆರವುಗೊಳಿಸಿದರೆ ತೊಂದರೆ ಇರಲಿಲ್ಲ. ಆದರೆ ಯಾವುದೇ ಸಕಾರಣವಿಲ್ಲದೆ ಅಂಗಡಿ ಹಿಂದಿನ ಜಾಗದ ಮಾಲೀಕರ ಮನವಿಗಾಗಿ ಸುಮಾರು ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದವರ ಮೇಲೆ ಯಾವುದೇ ಸೂಚನೆ ನೀಡದೆ ಕ್ರಮಕೈಗೊಂಡಿದ್ದು ಸರಿಯಲ್ಲ. ರಾಷ್ಟ್ರೀಯ ಹೆದ್ದಾರಿಗೆ ಅತಿಕ್ರಮಣವಾದ ಜಾಗ ಎನ್ನುವ ಕಾರಣಕ್ಕೆ ಕ್ರಮಕೈಗೊಳ್ಳುವುದಾದರೆ ಹೆದ್ದಾರಿ ಪಕ್ಕದಲ್ಲಿರುವ ಎಲ್ಲ ಕಟ್ಟಡಗಳ ಮೇಲೂ ಕ್ರಮಕೈಗೊಳ್ಳಬೇಕು. ಈ ಸಮಸ್ಯೆಯನ್ನು ಸಂಸದರ ಗಮನಕ್ಕೆ ತರಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ಪತ್ರಿಕೆಗೆ ತಿಳಿಸಿದ್ದಾರೆ.
Related Articles
Advertisement
ಸಕಾರಣವಿಲ್ಲದೆ ಯಾವುದೇ ಕಾರಣಕ್ಕೂ ಅಂಗಡಿ ತೆರವಿಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಮ್ಮ ಮನವಿಯನ್ನು ಧಿಕ್ಕರಿಸಿ ಕ್ರಮಕೈಗೊಂಡಲ್ಲಿ ಜಿಲ್ಲೆಯಾದ್ಯಂತ ಕಾರ್ಮಿಕ ವೇದಿಕೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಪತ್ರಿಕೆಗೆ ತಿಳಿಸಿದರು.