ಹೊಸದಿಲ್ಲಿ : ಖಾಸಗಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವ ಆರೋಪದ ತನಿಖೆ ಸಂಬಂಧವಾಗಿ ಸಿಬಿಐ, ಖಾಸಗಿ ವಾಹಿನಿಯೊಂದರ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಪ್ರಣೋಯ್ ರಾಯ್ ಅವರ ದಿಲ್ಲಿ ಮತ್ತು ಡೆಹರಾಡೂನ್‌ನಲ್ಲಿನ ನಿವಾಸಗಳ ಮೇಲೆ ಇಂದು ಸೋಮವಾರ ಬೆಳಗ್ಗೆ ದಾಳಿ ನಡೆಸಿದೆ.
ಐಸಿಐಸಿಐ ಬ್ಯಾಂಕಿಗೆ 48 ಕೋಟಿ ರೂ. ನಷ್ಟ ಉಂಟು ಮಾಡಿರುವ ಆರೋಪದ ಮೇಲೆ ಸಿಬಿಐ ಪ್ರಣೋಯ್ ರಾಯ್ ಮಾತ್ರವಲ್ಲದೆ ಅವರ ಪತ್ನಿ ರಾಧಿಕಾ ಮತ್ತು ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ವಿರುದ್ಧ ಕೇಸು ದಾಖಲಿಸಿಕೊಂಡಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ನಾಲ್ಕು ಸ್ಥಳಗಳಲ್ಲಿ ಹಾಗೂ ಡೆಹರಾಡೂನ್‌ನಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 8 ಗಂಟೆಯಿಂದ ಏಳು ಮಂದಿಯ ಸಿಬಿಐ ತನಿಖಾ ತಂಡವು ದಿಲ್ಲಿಯ ಗ್ರೇಟರ್ ಕೈಲಾಶ್‌ನಲ್ಲಿನ ರಾಯ್ ಅವರ ನಿವಾಸದಲ್ಲಿ ಬೀಡು ಬಿಟ್ಟಿದೆ.
ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪ್ರಣೋಯ್ ರಾಯ್ ಅವರ ಎನ್‌ಡಿಟಿವಿ ಬೃಹತ್ ಮೊತ್ತದ ಹಣ ದುರುಪಯೋಗ ನಡೆಸುತ್ತಿರುವುದಾಗಿ ಆರೋಪಿಸಿ ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖೆಗೆ ಆಗ್ರಹಿಸಿದ್ದರು.
ಸಿಬಿಐ ದಾಳಿಗೆ ಎನ್‌ಡಿಟಿವಿ ಪ್ರತಿಕ್ರಿಯೆ :
ಭಾರತದಲ್ಲಿ ಪ್ರಜಾಸತ್ತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ರೀತಿಯ ಯತ್ನಗಳಿಗೆ ನಾವು ಬೆದರುವುದಿಲ್ಲ ಎಂದು ಎನ್‌ಡಿಟಿವಿ, ಸಿಬಿಐ ದಾಳಿಗೆ ಪ್ರತಿಕ್ರಿಯೆ ನೀಡಿದೆ.
ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳು ನಮ್ಮ ವಿರುದ್ಧ ನಡೆಸುತ್ತಿರುವ ಬೇಟೆಯ ವಿರುದ್ಧ ನಾವು ಅವಿರತವಾಗಿ ಹೋರಾಡುತ್ತೇವೆ ಎಂದು ಎನ್‌ಡಿಟಿವಿ ಹಾಗೂ ಅದರ ಸ್ಥಾಪಕರು ಹೇಳಿದ್ದಾರೆ.