Advertisement

ಸಾಹಸ ಮೆರೆದ ಎನ್‌ಡಿಆರ್‌ಎಫ್‌ ತಂಡ

01:36 AM Aug 14, 2019 | sudhir |

ಬೆಳ್ತಂಗಡಿ: ಪ್ರಾಕೃತಿಕ ವಿಕೋಪ ಸಂಭವಿಸಿದಾಕ್ಷಣ ನೆರವಿಗೆ ಧಾವಿಸುವುದು ಪ್ರಕೃತಿ ವಿಕೋಪ ರಕ್ಷಣಾ ತಂಡ. ಅದೇ ಎನ್‌ಡಿಆರ್‌ಎಫ್ ತಂಡವು ವಾರದಿಂದೀಚೆಗೆ ಬೆಳ್ತಂಗಡಿಯಲ್ಲಿ ಹಗಲು ರಾತ್ರಿ ಎನ್ನದೆ ಸಂತ್ರಸ್ತರ ರಕ್ಷಣೆಯಲ್ಲಿ ದಿಟ್ಟ ಹೆಜ್ಜೆಗಳನ್ನಿರಿಸಿ ಮುನ್ನಡೆದಿದೆ.

Advertisement

ಭೀಕರ ಪ್ರವಾಹದ ನಡುವೆಯೂ ಯಾವುದೇ ಜೀವಹಾನಿ ಸಂಭವಿಸದಂತೆ ಸಂತ್ರಸ್ತರನ್ನು ರಕ್ಷಿಸಿದ ತಂಡದ ಸಾಹಸಕ್ಕೆ ಪ್ರಶಂಸೆಯ ಮಹಾಪೂರವೇ ಹರಿದಿದೆ. ಎನ್‌ಡಿಆರ್‌ಎಫ್‌ 8ನೇ ಬೆಟಾಲಿಯನ್‌ ಗಾಜಿಯಾಬಾದ್‌ ತಂಡದ 24 ಮಂದಿಯ ತಂಡವು ಬೆಳ್ತಂಗಡಿಯ ಮಾದರಿ ಶಾಲೆಯಲ್ಲಿ ಬೇಸ್‌ ಕ್ಯಾಂಪ್‌ ನಿರ್ಮಿಸಿದ್ದು, ಈಗಲೂ ತುರ್ತು ನೆರವಿಗೆ ಸರ್ವ ಸನ್ನದ್ಧವಾಗಿದೆ.

ತಂಡದ ನೇತೃತ್ವವನ್ನು ಇನ್‌ಸ್ಪೆಕ್ಟರ್‌ ರಾಜೇಂದ್ರ ಬಿಷ್ಟ್ ವಹಿಸಿದ್ದಾರೆ. ಅವರ ಮುಂದಾಳತ್ವದಲ್ಲಿ ಕಂಟ್ರೋಲ್‌ ರೂಮ್‌ ತೆರೆದು ನೆರೆಪೀಡಿತ ಸ್ಥಳಗಳಿಂದ ಕರೆ ಸ್ವೀಕಾರ, ರಕ್ಷಣೆಯ ಕಾರ್ಯವನ್ನು ತಂಡ ನಡೆಸಿದೆ.

ಹಗ್ಗದ ಮೂಲಕವೇ ರಕ್ಷಣೆ
ಸಂಪರ್ಕ ಸೇತು ಕಡಿದು ಅತ್ತಲಿಂದ ಇತ್ತ ಬರಲಾಗದೆ, ಇಲ್ಲಿಂದ ಅಲ್ಲಿಗೆ ಹೋಗಲಾಗದೆ ಪ್ರಾಣ ಭಯದಲ್ಲಿದ್ದ ಮಂದಿಯ ಸಹಾಯಕ್ಕೆ ಧಾವಿಸಿದ್ದು ಇದೇ ತಂಡ. ಗರ್ಭಿಣಿಯರು, ಪುಟ್ಟ ಮಕ್ಕಳನ್ನು ಎದೆಗವುಚಿ ನೆರೆ ದಾಟಿಸಿ ರಕ್ಷಿಸಿದ್ದು ಇವರೇ. ಇವರಿಗೆ ಸ್ಥಳೀಯ ಯುವಕರು ಸಾಥ್‌ ನೀಡಿದ್ದಾರೆ. ಈವರೆಗೆ ಸಂಪರ್ಕ ಕಡಿತವಾದ ಬೆಳ್ತಂಗಡಿ ತಾಲೂಕಿನ 300ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ ಈ ತಂಡದ ಸಾಹಸ ಅಕ್ಷರಗಳಲ್ಲಿ ವರ್ಣನೆಗೆ ನಿಲುಕದ್ದು.

ಕಾರ್ಯಾಚರಣೆ ಸಲಕರಣೆ
ನಾಲ್ಕು ದೋಣಿ, ನಾಲ್ಕು ಒಬಿಎಂ, 25 ಲೈಫ್‌ ಜಾಕೆಟ್‌, 50 ಲೈಫ್‌ಬಾಯ್‌ ಟ್ಯೂಬ್‌, ಸಣ್ಣ ಇಂಜಿನ್‌ಗಳ ಎರಡು ಬೋಟ್‌, ಸಂವಹನ ಸಾಧನಗಳು, ಸುರಕ್ಷಾ ಸಲಕರಣೆಗಳು ಇವರಲ್ಲಿರುವ ಸಾಮಗ್ರಿ.

Advertisement

ವಿಕೋಪ ಸಂರಕ್ಷಣೆಗಾಗಿ ಬೆಳ್ತಂಗಡಿ ತಾಲೂಕಿಗೆ ಇದೇ ಮೊದಲು ಭೇಟಿ ನೀಡಿದ್ದೇವೆ. ಇಲ್ಲಿನ ಚಿತ್ರಣ ಭಯಾನಕವಾಗಿದೆ. ನಮ್ಮ ಕುಟುಂಬ ಬಿಟ್ಟು ಸಂಕಷ್ಟದಲ್ಲಿರುವ ಜನರ ಕುರಿತು ಚಿಂತಿಸುವುದಷ್ಟೆ ನಮ್ಮ ಕೆಲಸ. ಚಿಬಿದ್ರೆಯಲ್ಲಿ 87 ವರ್ಷದ ವೃದ್ಧೆ; ಅನಾರು, ಫರ್ಲಾನಿ, ಬಾಂಜಾರುಮಲೆಯಲ್ಲಿ 100ಕ್ಕೂ ಅಧಿಕ ಮಂದಿಯನ್ನು ಪ್ರವಾಹ ಭೋರ್ಗರೆಯುವ ನದಿ ದಾಟಿಸಿ ರಕ್ಷಿಸಿದ್ದೇವೆ. ಹಗ್ಗದ ಮೂಲಕ ರಕ್ಷಣೆ, ಬೋಟ್‌ ಮೂಲಕ ಸರಕಾರ ನೀಡಿದ ಆಹಾರ ಸಾಮಗ್ರಿಯನ್ನು ಸಂತ್ರಸ್ತರಿಗೆ ವಿತರಿಸುವ ಕಾರ್ಯ ಮಾಡಿದ್ದೇವೆ.

– ರಾಜೇಂದ್ರ ಬಿಷ್ಟ್,  ಎನ್‌ಡಿಆರ್‌ಎಫ್‌ ಇನ್‌ಸ್ಪೆಕ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next