ಮುಂಬಯಿ: ಸರ್ಕಾರಿ ವಹಿವಾಟು ನಡೆಸಲು ಖಾಸಗಿ ಬ್ಯಾಂಕುಗಳಿಗಿದ್ದ ನಿರ್ಬಂಧ ತೆರವಾದ ಬೆನ್ನಲ್ಲೇ ಮುಂಬಯಿ ಷೇರುಪೇಟೆ ಭರ್ಜರಿ ವಹಿವಾಟು ನಡೆಸಿದ್ದು, ಗುರುವಾರ(ಫೆ.25, 2021) ಬೆಳಗ್ಗೆ ಸಂವೇದಿ ಸೂಚ್ಯಂಕ 500 ಅಂಕಗಳ ಜಿಗಿತ ಕಂಡಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 500 ಅಂಕಗಳ ಏರಿಕೆಯೊಂದಿಗೆ 51,270 ಅಂಕಗಳ ದಾಖಲೆ ಗಡಿ ತಲುಪಿದೆ. ನಿಫ್ಟಿ ಸೂಚ್ಯಂಕ ಏರಿಕೆಯೊಂದಿಗೆ ಮತ್ತೆ 15,100ರ ಗಡಿ ಮುಟ್ಟಿದೆ.
ಸರ್ಕಾರಿ ವಹಿವಾಟು ನಡೆಸಲು ಖಾಸಗಿ ಬ್ಯಾಂಕುಗಳಿಗಿದ್ದ ನಿರ್ಬಂಧ ತೆರವಾಗಿದ್ದು ಬುಧವಾರ ಮುಂಬೈ ಷೇರುಪೇಟೆ ಯಲ್ಲಿ ಮಿಂಚಿನ ಸಂಚಲನ ಉಂಟು ಮಾಡಿತ್ತು.
ಬ್ಯಾಂಕಿಂಗ್, ಹಣ ಕಾಸು ಕ್ಷೇತ್ರಗಳ ಖರೀದಿ ಭರಾಟೆಯಲ್ಲಿ ಹೂಡಿಕೆದಾರರು ತೊಡಗಿದ ಕಾರಣ, ಸೆನ್ಸೆಕ್ಸ್ ಬರೋಬ್ಬರಿ 1,030.28 ಅಂಕಗಳ ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 50,781.69ರಲ್ಲಿ ವಹಿವಾಟು ಕೊನೆಗೊಳಿಸಿತ್ತು.
ನಿಫ್ಟಿ 274.20 ಅಂಕ ಹೆಚ್ಚಳವಾಗಿ, 14,982ರಲ್ಲಿ ಅಂತ್ಯ ಗೊಂಡಿತ್ತು. ಆ್ಯಕ್ಸಿಸ್ ಬ್ಯಾಂಕ್ ಅತಿ ಹೆಚ್ಚು ಲಾಭಗಳಿಸಿದರೆ, ಎಚ್ ಡಿಎಫ್ಸಿ ಬ್ಯಾಂಕ್, ಎಚ್‌ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಎಸ್‌ಬಿಐ ಷೇರು ಮೌಲ್ಯಗಳೂ ಜಿಗಿತ ಕಂಡಿತ್ತು.