ತಾಳಿಕೋಟೆ: ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಜಿಲ್ಲೆಯ ಜನ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ನೀರು ಇಲ್ಲವಾದರೆ ಡ್ಯಾಂ ನಿರ್ಮಾಣ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? ನೀರಿಗಾಗಿ ಎಲ್ಲ ರೈತರು ಸರಕಾರಗಳ ವಿರುದ್ಧ ಸಿಡಿದೇಳಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಯನ್ನು ಕೆರೆ ನೀರು ತುಂಬಿಸುವ ಕುರಿತು ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯನ್ನುದೇಶಿಸಿ ಅವರು ಮಾತನಾಡಿದರು. ಆದರೆ ಸರಕಾರ ಐಸಿಸಿ ಸಭೆಯಲ್ಲಿ ನವೆಂಬರ್ 14ರಂದು ಕಾಲುವೆಗೆ ನೀರು ಬಂದ್ ಮಾಡಲು ತೀರ್ಮಾನ ಮಾಡಿದೆ. ಈ ಸರಕಾರದ ನಿರ್ಧಾರವನ್ನು ಕಾದು ನೋಡಬೇಕಾಗಿದೆ. ಆಲಮಟ್ಟಿ ಆಣೆಕಟ್ಟಿನಿಂದ 130 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ನಾರಾಯಣಪುರ ಜಲಾಶಯಕ್ಕೆ ಬಿಡುಗಡೆ ಮಾಡಿದ್ದು ಅಲ್ಲದೇ ಜಿಲ್ಲೆಯ ರೈತರಿಗೆ ಹಂಚಿಕೆಯಾದ ನೀರನ್ನು ಸಹ ಕೊಟ್ಟಿಲ್ಲ. ಹಿಂಗಾರು ಬೆಳೆಗೆ ನೀರು ಹರಿಸಬೇಕು ಎನ್ನುವದು ರೈತರ ಒತ್ತಾಸೆಯಾಗಿದೆ. ಶಿವಾನಂದ ಪಾಟೀಲರು ನಮ್ಮ ಜಿಲ್ಲೆಯವರಾಗಿದ್ದು ಜಿಲ್ಲೆಯ ರೈತರ ಭಾವನೆಗಳನ್ನು ಆರ್ಥ ಮಾಡಿಕೊಳ್ಳಬೇಕು ಎಂದರು.
ಮತಕ್ಷೇತ್ರದಲ್ಲಿರುವ ಕೆರೆಗಳನ್ನು ಭರ್ತಿ ಮಾಡಲು ಸ್ವತಃ ಆಸಕ್ತಿ ವಹಿಸಿ ಕೆರೆ ತುಂಬಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಮತಕ್ಷೇತ್ರದ 16 ಕೆರೆಗಳು ಕಾಲುವೆ ಮೂಲಕ ಯಾವುದೇ ಖರ್ಚು ಇಲ್ಲದೇ ಭರ್ತಿ ಮಾಡಲಾಗಿದೆ. ಚಿಮ್ಮಲಗಿ ಕಾಲುವೆಗಳ ನಿರ್ಮಾಣ ಸಮಯದಲ್ಲಿ ಕೆರೆಗಳನ್ನು ಭರ್ತಿ ಮಾಡಲು ಯಾವುದೇ ಯೋಜನೆ ರೂಪಿಸದಿರುವುದರಿಂದ ಕೆರೆ ತುಂಬಿಸಲು ಅಡ್ಡಗಾಲಾಗುತ್ತಿದೆ. ಅಡ್ಡಿಗಳನ್ನು ಹಂತ ಹಂತವಾಗಿ ನಿವಾರಿಸಿಕೊಂಡು ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ತಮದಡ್ಡಿ ಕೆರೆ 180 ಎಕರೆ ವಿಶಾಲವಾಗಿದೆ. ಇದು ಕಾಲುವೆ ಮೂಲಕ ನೀರು ಹರಿಸಿದರೂ ಸಾಕು ಕೆರೆ ಭರ್ತಿ ಮಾಡಬಹುದಾಗಿದೆ. ಕೆರೆ ನಿರ್ಮಿಸಿ 30 ವರ್ಷವಾದರೂ ಇಲ್ಲಿವರೆಗೂ ಕೆರೆ ತುಂಬಿಸುವ ಯೋಜನೆ ಹಾಕಿದ್ದಿಲ್ಲ. ಗ್ರಾಮದ ಸಾರ್ವಜನಿಕರು ತಮದಡ್ಡಿ ಕೆರೆ ತುಂಬಲು ಮನವಿ ಮಾಡಿದ್ದರಿಂದ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಬಳಗಾನೂರ, ವನಹಳ್ಳಿ, ತಮದಡ್ಡಿ ಕೆರೆಗಳು ಕಾಲುವೆ ಮೂಲಕ ಸಹಜವಾಗಿಯೇ ಕೆರೆಯನ್ನು ಭರ್ತಿ ಮಾಡಬಹುದಾಗಿದೆ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿಯೇ ಮೂರು ಕೆರೆಗಳನ್ನು ಭರ್ತಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ತಮದಡ್ಡಿ ಕೆರೆ ತುಂಬಿಸುವುದರಿಂದ ತಮದಡ್ಡಿ, ಚೋಕಾವಿ, ಹಿರೂರ ಗ್ರಾಮದಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. ತಮದಡ್ಡಿ ಕೆರೆಯಿಂದ ನೀರಾವರಿ ಮಾಡಲು ಸಹ ಅನಕೂಲ ಪರಿಸ್ಥಿತಿ ಇದ್ದು, ಇದರಿಂದ 1000
ಹೆಕ್ಟೇರ್ ಅಂತರ್ಜಲ ಮರು ಸೃಷ್ಠಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಪಾಟೀಲ, ತಾಪಂ ಸದಸ್ಯ ಗುರು ಕೊಪ್ಪದ ಸೇರಿದಂತೆ ತಮದಡ್ಡಿ, ಹಿರೂರ, ಚೋಕಾವಿ ಗ್ರಾಮದ ರೈತರು ಇದ್ದರು.
ಈ ದೇಶದ ಆಸ್ತಿ ರೈತನಾದರೆ, ರೈತರ ಆಸ್ತಿ ನೀರು. ಈ ಭಾಗದಲ್ಲಿ 2 ಡ್ಯಾಂಗಳಿದ್ದರೂ ರೈತರ ಹೊಲಗಳಿಗೆ ಮತ್ತು ಕುಡಿಯಲು ಸಮರ್ಪಕವಾಗಿ ನೀರು ಇಲ್ಲದಿರುವುದು ದುರದೃಷ್ಟಕರ. ಈ ಭಾಗದ ರೈತರಿಗೆ ನೀರಿನ ಅನುಕೂಲ ಮಾಡುವ ಸಲುವಾಗಿ ಕಳೆದ 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ನನ್ನ ಉಸಿರಿರುವರೆಗೂ ಹೋರಾಟ ಮಾಡುತ್ತಲೇ ಇರುತ್ತೇನೆ.
ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ