ಹೊಸದಿಲ್ಲಿ: ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರವು ವಕ್ಫ್ ಕಾಯ್ದೆಗೆ ಮಹತ್ವದ ತಿದ್ದುಪಡಿ ಮಸೂದೆಯನ್ನು ಗುರುವಾರ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಮಂಡಿಸಿದರು. ಈ ವೇಳೆ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಗುರುವಾರ ಸದನದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಮಸೂದೆ ಪೂರ್ವಯೋಜಿತ ಪಿತೂರಿ ಎಂದರು. ಇದೇ ವೇಳೆ ಸ್ಪೀಕರ್ ಹಕ್ಕಿನ ವಿಚಾರವಾಗಿಯೂ ಬಿಸಿಬಿಸಿ ವಾಗ್ವಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ನಡೆದಿದೆ.
ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ಮೇಲಿನ ಚರ್ಚೆ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾತನಾಡಿ “ನಿಮ್ಮ(ಸ್ಪೀಕರ್ ಬಿರ್ಲಾ) ಮತ್ತು ನಮ್ಮ ಹಕ್ಕುಗಳನ್ನು ಕಸಿಯಲಾಗುತ್ತಿದೆ. ನೀವು ಪ್ರಜಾಪ್ರಭುತ್ವದ ನ್ಯಾಯಾಧೀಶರು. ನಿಮಗಾಗಿ ಈಗ ನಾವು ಹೋರಾಡಬೇಕಾಗಿದೆ’ ಎಂದರು. ಈ ಹೇಳಿಕೆಯು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಕೆರಳಿಸಿದೆ.
ಈ ಹೇಳಿಕೆಗೆ ತಿರುಗೇಟು ನೀಡಿದ ಗೃಹ ಸಚಿವ ಅಮಿತ್ ಶಾ, “ಸ್ಪೀಕರ್ ಸ್ಥಾನಕ್ಕೆ ನೀವು ಅವಮಾನಿಸುತ್ತಿದ್ದೀರಿ. ಸ್ಪೀಕರ್‌ನ ಹಕ್ಕುಗಳು ಪ್ರತಿಪಕ್ಷಕ್ಕಷ್ಟೇ ಸೇರಿದ್ದಲ್ಲ, ಇಡೀ ಸದನಕ್ಕೆ ಸೇರಿದ್ದು. ನೀವು ಸ್ಪೀಕರ್ ಹಕ್ಕುಗಳ ರಕ್ಷಕರಲ್ಲ’ ಎಂದು ಹೇಳಿದ್ದಾರೆ. ನಂತರ, “ಯಾರೂ ಸ್ಪೀಕರ್ ಹುದ್ದೆ ಕುರಿತು ಹೇಳಿಕೆ ನೀಡಬಾರದು’ ಎಂದು ಓಂ ಬಿರ್ಲಾ ಸೂಚಿಸಿದ್ದಾರೆ.