Advertisement

Election Result: NDA “ಉಳಿಯಿತು’, INDIA “ಬೆಳೆಯಿತು’! ಬಿಜೆಪಿ ಸ್ಥಾನ ಕುಸಿತ

09:38 PM Jun 04, 2024 | Team Udayavani |

ನವದೆಹಲಿ: ಬರೋಬ್ಬರಿ 82 ದಿನಗಳ ಕಾಲ ನಡೆದ 2024ರ ಲೋಕಸಭಾ ಚುನಾವಣಾ ಫ‌ಲಿತಾಂಶದ ಕುತೂಹಲಕ್ಕೆ ಮಂಗಳವಾರ ತೆರೆಬಿದ್ದಿದೆ. ಎನ್‌ಡಿಎ ಕೂಟ ನಿರೀಕ್ಷೆಯಂತೆಯೇ ಬಹುಮತ ಪಡೆದು ಅಧಿಕಾರಕ್ಕೇರುವ ಅವಕಾಶ ಪಡೆದಿದೆ. ಆದರೆ ಅದು ಆರಂಭದಲ್ಲಿ ಹೇಳಿಕೊಂಡಿದ್ದಂತೆ 400 ಸ್ಥಾನಗಳಿರಲಿ, 300 ಸ್ಥಾನಗಳನ್ನೂ ದಾಟಲಿಲ್ಲ. ಎಲ್ಲ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಇಂಡಿಯಾ ಮೈತ್ರಿಕೂಟ ಭರ್ಜರಿ ಸಾಧನೆ ಮಾಡಿದೆ. ಆದರೆ ಅದು ಹೇಳಿಕೊಂಡಿದ್ದಂತೆ 295 ಸ್ಥಾನ ಪಡೆಯಲು ವಿಫ‌ಲವಾಗಿದೆ. ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವ ಸಿದ್ಧತೆಯಲ್ಲಿದ್ದರೂ, ಹಿಂದಿನೆರಡು ಅವಧಿಗಳಂತೆ ಈ ಬಾರಿ ಬಿಜೆಪಿಗೆ ಸ್ವತಂತ್ರ ಬಹುಮತ ಲಭಿಸಿಲ್ಲ. ಹೀಗಾಗಿ ಮಿತ್ರಪಕ್ಷಗಳನ್ನು ಅವಲಂಬಿಸಬೇಕಾಗಿದೆ. ಕಡೆಯ ಹಂತದಲ್ಲಿ ಲೆಕ್ಕಾಚಾರಗಳು ಹೇಗೆ ಬೇಕಾದರೂ ಬದಲಾಗಬಹುದು ಎಂದು ವಿಶ್ಲೇಷಿಸಲಾಗಿದೆ.

Advertisement

ಕುಸಿದ ಎನ್‌ಡಿಎ, ಪುಟಿದೆದ್ದ ಇಂಡಿಯಾ ಕೂಟ:
ಎನ್‌ಡಿಎ ಬಹುಮತ ಪಡೆದಿದ್ದರೂ, ಸಾಮಾನ್ಯ ಸಾಧನೆ ಮಾಡಿದೆ. ಆರಂಭದಲ್ಲಿ ಅಭಿವೃದ್ಧಿಯನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತಿದ್ದ ಮೋದಿ, ಇದ್ದಕ್ಕಿದ್ದಂತೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು. ಇದರಿಂದ ಮುಸ್ಲಿಮ್‌ ಮತಗಳು ಸಂಪೂರ್ಣವಾಗಿ ಇಂಡಿಯಾ ಕೂಟದ ಪರ ವಾಲಿದವು ಎನ್ನಲಾಗಿದೆ. ಇನ್ನು ಸ್ಥಾನ ಹಂಚಿಕೆಯ ವಿಚಾರದಲ್ಲಿ ಇಂಡಿಯಾ ಮಿತ್ರಕೂಟ ಪಕ್ಕಾ ಲೆಕ್ಕಾಚಾರ ಮಾಡಿ, ಸ್ಥಳೀಯವಾಗಿ ಪ್ರಬಲವಾಗಿದ್ದ ಪಕ್ಷಗಳಿಗೆ ಆದ್ಯತೆ ನೀಡಿದ್ದು ವರವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಮಾದರಿಯಲ್ಲೇ ಕಾಂಗ್ರೆಸ್‌ ಘೋಷಿಸಿದ್ದ ನ್ಯಾಯಯೋಜನೆಗಳು ಅದಕ್ಕೆ ನೆರವಾದವು. ಇದರ ಪರಿಣಾಮ ಎನ್‌ಡಿಎ ಸ್ಥಾನ ಕುಸಿದರೆ, ಇಂಡಿಯಾ ಕೂಟದ ಸ್ಥಾನಗಳು ದೊಡ್ಡ ಪ್ರಮಾಣದಲ್ಲಿ ಏರಿದವು.

ಎನ್‌ಡಿಎಗೆ ಅದರಲ್ಲೂ ಬಿಜೆಪಿಗೆ ಹೊಡೆತ ನೀಡಿದ್ದು ಉತ್ತರಪ್ರದೇಶ, ಮಹಾರಾಷ್ಟ್ರ, ಪ.ಬಂಗಾಳಗಳು. ಗರಿಷ್ಠ ಲೋಕಸಭಾ ಸ್ಥಾನಗಳಿರುವ ಈ ರಾಜ್ಯಗಳಲ್ಲಿ ಬಿಜೆಪಿ ಈ ಬಾರಿ ಕಳಪೆ ಸಾಧನೆ ಮಾಡಿದೆ. 2019ರಲ್ಲಿ ಎನ್‌ಡಿಎ ಉತ್ತರಪ್ರದೇಶದಲ್ಲಿ 62, ಮಹಾರಾಷ óದಲ್ಲಿ 23, ಪ.ಬಂಗಾಳದಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಉ.ಪ್ರ.ದಲ್ಲಿ ಕೇಂದ್ರದ ಅಗ್ನಿವೀರ್‌ ಯೋಜನೆಯ ವಿರುದ್ಧವಾಗಿ ರಾಹುಲ್‌ ಪ್ರಚಾರ ನಡೆಸಿದ್ದು ಇಂಡಿಯಾ ಕೂಟದ ಕೈಹಿಡಿದಿದೆ ಎನ್ನಲಾಗಿದೆ.

ಮೋದಿ ಕೈಹಿಡಿಯಬೇಕು ಮಿತ್ರಪಕ್ಷಗಳು:
ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 3ನೇ ಬಾರಿ ಪಟ್ಟಕ್ಕೇರುವುದು ಬಹುತೇಕ ಖಾತ್ರಿ. ಆದರೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಎನ್‌ಡಿಎಗೆ ಕೈಕೊಟ್ಟರೆ ಎಲ್ಲವೂ ತಲೆ ಕೆಳಗಾಗಲಿದೆ. ಈಗಾಗಲೇ ಇಂಡಿಯಾ ಒಕ್ಕೂಟದ ನಾಯಕರೂ ಈ ಇಬ್ಬರೂ ನಾಯಕರನ್ನು ಸಂಪರ್ಕಿಸಿ, ಭಾರೀ ಆಮಿಷಗಳನ್ನು ನೀಡಿದ್ದಾರೆಂದು ಹೇಳಲಾಗಿದೆ. ಮೋದಿ ಪ್ರಧಾನಿಯಾದರೂ ಅವರಿಗೆ ಮಿತ್ರಪಕ್ಷಗಳ ಪೂರ್ಣ ನೆರವು ಅನಿವಾರ್ಯ.

ತಲೆಕೆಳಗಾದ ಸಮೀಕ್ಷೆಗಳು:
ಜೂ.1ರಂದು 7ನೇ ಮತ್ತು ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದವು. ಎಲ್ಲ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರದ ಪ್ರಕಾರ ಎನ್‌ಡಿಎಗೆ 358, ಇಂಡಿಯಾ ಕೂಟಕ್ಕೆ 142 ಸ್ಥಾನಗಳ ಬರಬಹುದೆಂದು ಹೇಳಲಾಗಿತ್ತು. ಇಂಡಿಯಾ ಕೂಟ ಹೇಳಿದ್ದಂತೆಯೇ ಈ ಲೆಕ್ಕಾಚಾರಗಳೆಲ್ಲ ಉಲ್ಟಾ ಆಗಿವೆ. ಇಂಡಿಯಾ ಕೂಟ ಸಲೀಸಾಗಿ 230 ಸ್ಥಾನಗಳನ್ನು ದಾಟಿದೆ! ಎನ್‌ಡಿಎ ನಿರೀಕ್ಷೆ ಮೀರಿ ಕುಸಿತ ಅನುಭವಿಸಿದೆ.

Advertisement

ಇಂಡಿಯಾ ಕೂಟಕ್ಕೆ ದೊಡ್ಡ ಸವಾಲು:
ಈ ಬಾರಿ ಇಂಡಿಯಾ ಮೈತ್ರಿಕೂಟ ಸ್ಥಾನಗಳೂ ಭಾರೀ ಪ್ರಮಾಣದಲ್ಲಿ ಏರಿದ್ದರೂ, ಬಹುಮತದಿಂದ ದೂರವೇ ಇದೆ. ಆದ್ದರಿಂದ ಅದು ಅಧಿಕಾರಕ್ಕೆ ಬರಲು ವಿಪರೀತ ಕಸರತ್ತು ನಡೆಸಬೇಕಾಗಿದೆ. ಎನ್‌ಡಿಎ ಮಿತ್ರಪಕ್ಷಗಳನ್ನು ಸೆಳೆದುಕೊಂಡು, ತನ್ನ ಮಿತ್ರಪಕ್ಷಗಳನ್ನು ಉಳಿಸಿಕೊಳ್ಳಬೇಕು. ಅಲ್ಲದೇ ಪ್ರಧಾನಿ ಅಭ್ಯರ್ಥಿ ಯಾರೆಂದು ಖಚಿತವಾಗಬೇಕು. ಈಗಾಗಲೇ ಕೆಲವರು ರಾಹುಲ್‌ ಗಾಂಧಿ ಪರ ಧ್ವನಿಯೆತ್ತಿದ್ದಾರೆ. ಇನ್ನು ಕೆಲವರು ಬೇರೆ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಈ ಸವಾಲುಗಳನ್ನು ಅದು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next