Advertisement

NDA ಬಹುತೇಕ “ವಿಶ್ವಾಸ” ಗೆಲ್ಲುವ ಸಾಧ್ಯತೆ- ಬಿಹಾರದಲ್ಲಿಂದು ನಿತೀಶ್‌ ವಿಶ್ವಾಸ ಮತಯಾಚನೆ

12:36 AM Feb 12, 2024 | Team Udayavani |

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸೋಮ­ವಾರ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿ­ದ್ದಾರೆ.

Advertisement

ಕಳೆದ ತಿಂಗಳು ವಿಪಕ್ಷ ಇಂಡಿಯಾ ಒಕ್ಕೂಟದಿಂದ ಹೊರಬಂದ ಜೆಡಿಯು, ಎನ್‌ಡಿಎ ಜತೆ ಕೈಜೋಡಿ­ಸಿದ್ದು, 9ನೇ ಬಾರಿ ಮುಖ್ಯ­ಮಂತ್ರಿಯಾಗಿ ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಪ್ರಮಾಣವಚನ ಸ್ವೀಕರಿಸಿದ್ದರು. ಸೋಮ­ವಾರ ನಿತೀಶ್‌ ಬಹುಮತ ಸಾಬೀತುಪಡಿಸಬೇಕಾಗಿದ್ದು, ಪ್ರತಿಯೊ­ಬ್ಬರು ಸದನದಲ್ಲಿ ಹಾಜರಿರುವಂತೆ ತನ್ನ ಶಾಸಕರಿಗೆ ಜೆಡಿಯು ವಿಪ್‌ ಜಾರಿಗೊಳಿ­ಸಿದೆ. ಇದೇ ವೇಳೆ ಎನ್‌ಡಿಎ ಮೈತ್ರಿ­ಕೂಟದ ಪರ ಮತ ಹಾಕುವಂತೆ ಸೂಚಿಸಿ ತನ್ನ ನಾಲ್ವರು ಶಾಸಕರಿಗೆ ಹಿಂದೂಸ್ಥಾನಿ ಅವಾಮಿ ಮೋರ್ಚಾ(ಎಚ್‌ಎಎಂ) ಸಂಸ್ಥಾಪಕ ಜಿತಿನ್‌ ರಾಮ್‌ ಮಾಂಝಿ ಕೂಡ ವಿಪ್‌ ಜಾರಿಗೊಳಿಸಿದ್ದಾರೆ.

ಇನ್ನೊಂದೆಡೆ, ನೂತನವಾಗಿ ರಚನೆ­ಗೊಂಡಿರುವ ಎನ್‌ಡಿಎ ಮೈತ್ರಿಕೂಟವು ಬಿಹಾರ ವಿಧಾನಸಭೆ ಸ್ಪೀಕರ್‌ ಅವಾಧ್‌ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆದರೆ ಫೆ. 12ರ ಬಜೆಟ್‌ ಕಲಾಪ ಆರಂಭ­ವಾಗುವ ಮೊದಲು ತಾವು ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಚೌಧರಿ ಹೇಳಿದ್ದಾರೆ. “ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಚೌಧರಿ ಅವರಿಗೆ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಡೆಪ್ಯೂಟಿ ಸ್ಪೀಕರ್‌ ಮಹೇಶ್ವರ ಹಜಾರಿ ತಿಳಿಸಿದ್ದಾರೆ.

ಇತ್ತ ತೆಲಂಗಾಣದಲ್ಲಿ ಬೀಡು­ಬಿಟ್ಟಿದ್ದ ಬಿಹಾರದ ಕಾಂಗ್ರೆಸ್‌ ಶಾಸಕರು ಪಟ್ನಾಗೆ ಮರಳಿ, ತೇಜಸ್ವಿ ಯಾದವ್‌ ನಿವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next