ಹೈದರಾಬಾದ್ : ವಿತ್ತ ಸಚಿವ ಅರುಣ್ ಜೇತ್ಲಿ ಅವರು ನಿನ್ನೆ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ್ದ ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಏನನ್ನೂ ನೀಡಿಲ್ಲ ಎಂಬ ಕಾರಣಕ್ಕೆ ಆಳುವ ಎನ್‌ಡಿಎ ಕೂಟದಲ್ಲಿ ಪ್ರಧಾನ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ತೀವ್ರ ನಿರಾಶೆಯಾಗಿದ್ದು ಎನ್‌ಡಿಎ ಕೂಟದಲ್ಲಿನ್ನು ತಮ್ಮ ಪಕ್ಷ ಮುಂದುವರಿಯಬೇಕೇ ಬೇಡವೇ ಎಂಬುದನ್ನು ಇದೇ ಭಾನುವಾರ ತಾವು ಕರೆದಿರುವ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಿದ್ದಾರೆ ಎಂದು ವರದಿಯಾಗಿದೆ.
2014ರಲ್ಲಿ ನೂತನ ತೆಲಂಗಾಣ ರಾಜ್ಯದ ರಚನೆಗಾಗಿ ವಿಭಜನೆಯಾದ ಬಳಿಕ ಆಂಧ್ರ ಪ್ರದೇಶದ ಆದಾಯ ಮೂಲಗಳು ಬತ್ತಿ ಹೋಗಿದ್ದು ಅದು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೇರಿ ಟಿಡಿಪಿ ಸ್ಪರ್ಧಿಸಿತ್ತು. ಕೇಂದ್ರದಿಂದ ಆಂಧ್ರಪ್ರದೇಶಕ್ಕೆ ಗಮನಾರ್ಹ ನೆರವು, ಸಹಾಯ ದೊರಕೀತೆಂಬ ಭಾವನೆ ಟಿಡಿಪಿ ಯದ್ದಾಗಿತ್ತು. ಆದರೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರ ಆಂಧ್ರ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಅಂತೆಯೇ ಈ ಬಾರಿಯ 2018ರ ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಯಾವ ಕೊಡುಗೆಯನ್ನೂ ನೀಡಲಾಗಿಲ್ಲ. ಹೊಸ ರಾಜಧಾನಿ ಅಮರಾವತಿಯ ನಿರ್ಮಾಣಕ್ಕೆ ಭಾರೀ ಪ್ರಮಾಣದ ಹಣ ಅಗತ್ಯವಿದ್ದು ಕೇಂದ್ರ ಆ ನಿಟ್ಟಿನಲ್ಲಿ ಸಹಕರಿಸುವುದೆಂಬ ವಿಶ್ವಾಸ ಟಿಡಿಪಿಗೆ ಇತ್ತು. ಅದು ಕೂಡ ಈಗ ಹುಸಿಯಾಗಿದೆ ಎಂದು ಚಂದ್ರಬಾಬು ನಾಯ್ಡು ಅವರು ಇಂದು ಬೆಳಗ್ಗೆ ಕರೆದಿದ್ದ ತಮ್ಮ ಸಂಪುಟ ಸಭೆಯಲ್ಲಿ ತಮ್ಮ ಅಸಮಾಧಾನ, ಅತೃಪ್ತಿ, ನಿರಾಶೆಯನ್ನು ಹೊರಡೆಗಡಹಿದರು ಎನ್ನಲಾಗಿದೆ….
ಈ ನಡುವೆ ವಿರೋಧ ಪಕ್ಷ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಟಿಡಿಪಿ ಕಾಲೆಳೆಯಲು ಯತ್ನಿಸುತ್ತಿರುವುದರಿಂದ ಉತ್ಪನ್ನವಾಗುವ ಯಾವುದೇ ಸ್ಥಿತಿಯನ್ನು ಎದುರಿಸುವುದಕ್ಕೆ ಮತ್ತು ಅಗತ್ಯ ಬಿದ್ದರೆ ಬಿಜೆಪಿಯೊಂದಿಗಿನ ತನ್ನ ಸಂಬಂಧಗಳನ್ನು ಕಡಿದುಕೊಳ್ಳುವುದಕ್ಕೆ ಕೂಡ ಟಿಡಿಪಿ ಸಿದ್ಧವಿದೆ ಎಂಬ ಅಭಿಪ್ರಾಯವನ್ನು ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.