Advertisement

ರಾಜ್ಯದಲ್ಲಿ ಜೆಡಿಎಸ್‌ ಜತೆ ಎನ್‌ಸಿಪಿ ಮೈತ್ರಿ

06:20 AM Feb 16, 2018 | Team Udayavani |

ಬೆಂಗಳೂರು: ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರದಂತೆ ಮಾಡಲು ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಎನ್‌ಸಿಪಿ ಮುಕ್ತವಾಗಿದ್ದು, ಈ ವಿಚಾರದಲ್ಲಿ ಜೆಡಿಎಸ್‌ ಸಹ ತೆರೆದ ಮನಸ್ಸು ಹೊಂದಿದೆ ಎಂದು ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ.

Advertisement

ದೇಶದ ಜಾತ್ಯಾತೀತ ತತ್ವಗಳು ಉಳಿಯಬೇಕಾದರೆ, ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಅದಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಹಾಗೂ ನಮ್ಮ ಪ್ರಯತ್ನಗಳು ಯಾವುದೇ ಕಾರಣಕ್ಕೂ ಬಿಜೆಪಿಗೆ ಲಾಭ ತಂದು ಕೊಡಬಾರದು ಎಂಬ ಸೂತ್ರವನ್ನು ಎನ್‌ಸಿಪಿ ಎಲ್ಲ ರಾಜ್ಯಗಳಲ್ಲಿ ಅನುಸರಿಸುತ್ತಾ ಬಂದಿದೆ. ಅದೇ ಸೂತ್ರವನ್ನು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಲಾಗುವುದು ಎಂದರು.

ಗುರುವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಸಿಪಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲ. ಒಂದೊಮ್ಮೆ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ, ಸಮ್ಮಿಶ್ರ ಸರ್ಕಾರದ ಸಾಧ್ಯತೆಗಳು ಎದುರಾದಲ್ಲಿ ಬಿಜೆಪಿ ಜೊತೆಗೆ ಹೋಗಬಾರದು ಎಂದು ಜೆಡಿಎಸ್‌ಗೆ ಶರತ್ತು ಹಾಕಿದ್ದೇವೆ. ಅದನ್ನು ಜೆಡಿಎಸ್‌ ಸಹ ಒಪ್ಪಿಕೊಂಡಿದೆ. ಮೈತ್ರಿ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆಯಾಗಿದ್ದು, ಮತ್ತೇ ಒಂದೆರಡು ಸುತ್ತಿನ ಮಾತುಕತೆ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.

ಕೇರಳದಲ್ಲಿ ಜೆಡಿಎಸ್‌, ಎನ್‌ಸಿಪಿ, ಸಿಪಿಎಂ ಮತ್ತು ಸಿಪಿಐ ಸೇರಿ ಚುನಾವಣೆ ಎದುರಿಸಿ ಯಶಸ್ವಿಯಾಗಿದ್ದೇವೆ. ಅಲ್ಲಿನ ಎಡಪಕ್ಷ ನೇತೃತ್ವದ ಸರ್ಕಾರದಲ್ಲಿ ಜೆಡಿಎಸ್‌ ಮತ್ತು ಎನ್‌ಸಿಪಿ ಸಚಿವರು ಇದ್ದಾರೆ. ಕೇರಳದಲ್ಲಿ ಸಾಧ್ಯವಾಗಿದ್ದು, ಕರ್ನಾಟಕದಲ್ಲೂ ಆಗಬಹುದು. ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಪಕ್ಷ ಅಷ್ಟೊಂದು ಸಂಘಟಿತವಾಗಿಲ್ಲ. ಆದರೆ, ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರು ಇರುವ ಆಯ್ದ ಕೆಲವು ಕಡೆ ಸ್ಪರ್ಧಿಸುವ ಆಲೋಚನೆ ಇದೆ. ಆ ಮೂಲಕ ಕರ್ನಾಟಕದ ವಿಧಾನಸಭೆಗೆ ಪಕ್ಷದ ಶಾಸಕರನ್ನು ಕಳಿಸಬೇಕು ಅನ್ನುವುದು ನಮ್ಮ ಗುರಿ. ರೈತರು, ದಲಿತರು, ಅಲ್ಪಸಂಖ್ಯಾತರ ಹಿತ, ನಿರುದ್ಯೋಗ ಸಮಸ್ಯೆ ನಮ್ಮ ಆದ್ಯತೆಯಾಗಿದೆ ಎಂದರು.

ಇದಕ್ಕೂ ಮೊದಲ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪವಾರ್‌, ನಮ್ಮ ಪಕ್ಷ ಕರ್ನಾಟಕದಲ್ಲಿ ಅಷ್ಟೊಂದು ಸಂಘಟಿತವಾಗಿಲ್ಲ ಅನ್ನುವ ಹಿಂಜರಿಕೆ ಬೇಡ. ಎಲ್ಲ ನದಿಗಳು ಆರಂಭವಾಗುವುದು ಸಣ್ಣ ತೊರೆಯಿಂದ. ಅದೇ ರೀತಿ ಕರ್ನಾಟದಲ್ಲಿ ಎನ್‌ಸಿಪಿ ನದಿ ಆರಂಭವಾಗಿದೆ ಎಂದು ಭಾವಿಸಿ. ಜಾತ್ಯಾತೀತ ತತ್ವಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ. ಪಕ್ಷ ಸಂಘಟನೆಗೆ ಸಮಯ ಕೊಡಲು ನಾನು ಸಿದ್ಧನಿದ್ದೇನೆ ಎಂದರು.

Advertisement

ಸಭೆಯಲ್ಲಿ ಎನ್‌ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿತಾಂಬರ್‌ ಮಾಸ್ಟರ್‌ಜಿ, ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಕ್ಕೂ ಭಾಯಿ, ಕರ್ನಾಟಕದ ಉಸ್ತುವಾರಿ ಸಿಲ್ವರ್‌ ಬಿಸಾನಿಯೋ, ಪ್ರಧಾನ ಕಾರ್ಯದರ್ಶಿ ತಿಲಕ್‌ ನಂಬಿಯಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next