ಮುಂಬಯಿ: ಸೋಮವಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್- ಅಮಿತ್ ಶಾ, ಎನ್‌ಸಿಪಿ ನಾಯಕ ಶರದ್ ಪವಾರ್- ಸೋನಿಯಾ ಗಾಂಧಿ, ಶಿವಸೇನೆ ನಾಯಕ ಸಂಜಯ್ ರಾವತ್- ರಾಜ್ಯ ಪಾಲರ ಭೇಟಿ ನಡೆದರೂ, ಸರಕಾರ ರಚನೆ ಕುರಿತ ಗೊಂದಲಕ್ಕೆ ತೆರೆ ಬಿದ್ದಿಲ್ಲ.
ಫಲಿತಾಂಶ ಪ್ರಕಟವಾಗಿ 11 ದಿನಗಳು ಕಳೆದರೂ ಹೊಸ ಸರಕಾರದ ಕುರಿತು ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ದಿಲ್ಲಿಯಲ್ಲಿ ಸೋನಿಯಾರನ್ನು ಭೇಟಿಯಾದ ಪವಾರ್, ತಾವು ಮತ್ತೆ ರಾಜ್ಯದ ಸಿಎಂ ಹುದ್ದೆಗೇರುವ ಸಾಧ್ಯತೆಯನ್ನು ಅಲ್ಲಗಳೆ ದಿದ್ದಾರೆ. ಜತೆಗೆ, ರಾಜ್ಯದಲ್ಲಿ ಸರಕಾರ ರಚಿಸುವ ಹೊಣೆಗಾರಿಕೆ ಬಿಜೆಪಿಯದ್ದು ಎಂದೂ ಹೇಳಿದ್ದಾರೆ.
ನೀವು ಶಿವಸೇನೆಗೆ ಬೆಂಬಲ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್, ‘ಈ ವಿಚಾರದಲ್ಲಿ ಶಿವ ಸೇನೆಯ ಯಾರು ಕೂಡ ನನ್ನನ್ನು ಸಂಪರ್ಕಿಸಿಲ್ಲ. ನಮಗೆ ಜನಾದೇಶ ಸಿಕ್ಕಿರುವುದು ಪ್ರತಿಪಕ್ಷದಲ್ಲಿ ಕೂರಲು. ರೇಸ್‌ನಲ್ಲಿರಲು ನಮಗೆ ಸಾಕಷ್ಟು ಸಂಖ್ಯಾ ಬಲ ಇಲ್ಲ’ ಎಂದಿದ್ದಾರೆ. ಈ ಮೂಲಕ ಶಿವಸೇನೆಗೆ ಬೆಂಬಲ ನೀಡುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಸೋನಿಯಾ ಗಾಂಧಿ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ದಿಲ್ಲಿಯಲ್ಲಿ ಭೇಟಿಯಾದ ಸಿಎಂ ಫಡ್ನವೀಸ್ ಅವರು, ‘ಸದ್ಯದಲ್ಲೇ ಸರಕಾರ ರಚನೆಯಾಗುತ್ತದೆ’ ಎಂದು ಹೇಳಿದ್ದಾರೆ. ಆದರೆ, ಶಿವಸೇನೆಯ ಬೆಂಬಲ ಪಡೆಯಲಾಗುತ್ತದೆಯೋ, ಇಲ್ಲವೋ ಎನ್ನುವ ಪ್ರಶ್ನೆಗೆ ಉತ್ತರಿಸಿಲ್ಲ.
ನಾವು ಅಡ್ಡಿ ಮಾಡಿಲ್ಲ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶಿವಸೇನೆ ಸಂಸದ ಸಂಜಯ್ ರಾವತ್ ಸೋಮವಾರ ರಾಜ್ಯ ಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ‘ಸರಕಾರ ರಚನೆಗೆ ಶಿವಸೇನೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸುತ್ತಿಲ್ಲ. ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ನಾವು ಕಾರಣರಲ್ಲ ಎಂಬುದನ್ನು ರಾಜ್ಯಪಾಲರಿಗೆ ತಿಳಿಸಿದ್ದೇನೆ’ ಎಂದಿದ್ದಾರೆ.