ಮುಂಬೈ : ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆಗೆ ಬೆಂಬಲ ನೀಡಲು ಶರದ್ ಪವರ್ ನೇತೃತ್ವದ ಎನ್ ಸಿಪಿ ಸಿದ್ದವಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ನಿನ್ನೆ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಎನ್ ಸಿಪಿ ಮತ್ತು ಶಿವಸೇನಾ ಸಮ್ಮಿಶ್ರ ಸರ್ಕಾರ ರಚಿಸಲಿದ್ದು, ಕಾಂಗ್ರೆಸ್ ಪಕ್ಷ ಬಾಹ್ಯ ಬೆಂಬಲ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ಪಕ್ಷಗಳಲ್ಲೂ ಸಮ್ಮಿಶ್ರ ರಚನೆ ಕುರಿತು ಮಾತು ಕತೆಯಾಗಿದ್ದು ಸೋಮವಾರ ಖಚಿತವಾಗುತ್ತದೆ ಎಂದು ಹೇಳಲಾಗಿದೆ. ಈಗಾಗಲೇ ಜೈಪುರದಲ್ಲಿ ತಂಗಿರುವ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರು ತಮ್ಮ ಬೆಂಬಲವನ್ನು ಶಿವಸೇನೆಗೆ ನೀಡುತ್ತೇವೆ ಎಂಬ ವರದಿಯನ್ನು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಸಲ್ಲಿಸಲಿದ್ದಾರೆ. ಹಿರಿಯ ನಾಯಕರೊಂದಿಗೆ ಸಮಲೋಚಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಮೂಲಗಳ ಪ್ರಕಾರ ಮಂಗಳವಾರ ನಡೆದ ಎನ್ ಸಿಪಿಯ ಸರ್ವಪಕ್ಷಗಳ ಸಭೆಯಲ್ಲಿ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರದ ಬಗ್ಗೆ ಶರದ್ ಪವಾರ್ ಶಾಸಕರ ಅಭಿಪ್ರಾಯವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಶನಿವಾರ ಸಂಜೆ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರಕಾರವನ್ನು ರಚಿಸಲು ಆಹ್ವಾನ ನೀಡಿದ್ದರು. 13 ನೇ ವಿಧಾನಸಭೆಯ ಅವಧಿ ಶನಿವಾರ ಮಧ್ಯರಾತ್ರಿಯಿಂದ ಕೊನೆಗೊಂಡಿದೆ. ಅಕ್ಟೋಬರ್ 21ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತ್ತು.
ಈಗ ಬಿಜೆಪಿಗೆ ಸರ್ಕಾರ ರಚನೆ ಸಾಧ್ಯವಾಗದ ಹಿನ್ನಲೆಯಲ್ಲಿ ಎರಡನೇ ಅತೀ ದೊಡ್ಡ ಪಕ್ಷ ಶಿವಸೇನೆ ಗೆ ರಾಜ್ಯಪಾಲರು ಆಹ್ವಾನ ನೀಡಲಿದ್ದಾರೆ. ಶಿವಸೇನೆ 56, ಕಾಂಗ್ರೆಸ್ 44, ಎನ್ ಸಿ ಪಿ 54, ಇತರರು 7 ಸ್ಥಾನ ಪಡೆದಿದ್ದಾರೆ. 288 ಸದಸ್ಯರ ವಿಧಾನಸಭೆಯಲ್ಲಿ, ಸರಕಾರ ರಚನೆಗೆ ಮ್ಯಾಜಿಕ್ ನಂಬರ್ 145 ಆಗಿದೆ.