ಮುಂಬೈ: ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಮೈತ್ರಿಯ ವಿಕಾಸ್ ಅಘಾಡಿ ಮೈತ್ರಿ ಸರಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹತ್ವದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ.
ಡಿಸೆಂಬರ್ 30ರಂದು ಮಧ್ಯಾಹ್ನ 01 ಗಂಟೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ. ಮತ್ತು ಮಹತ್ವದ ಬೆಳವಣಿಗೆಯಲ್ಲಿ ಎನ್.ಸಿ.ಪಿ.ಯ ನಾಯಕ ಅಜಿತ್ ಪವಾರ್ ಅವರಿಗೆ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆ ಒಲಿದುಬಂದಿದೆ. ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸಿ ರಾತೋರಾತ್ರಿ ರಚನೆಯಾಗಿದ್ದ ಫಡ್ನವೀಸ್ ನೇತೃತ್ವದ ಅಲ್ಪಾವಧಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.
ಇನ್ನು ಎನ್.ಸಿ.ಪಿ.ಯಿಂದ ಠಾಕ್ರೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಇತರರೆಂದರೆ, ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ಠಾಕ್ರೆ, ರಾಜೆಂದ್ರ ಶಿಂಗ್ಣೆ, ರಾಜೇಶ್ ಟೋಪೆ ಮತ್ತು ಮಾಣಿಕ್ ಕೋಕಟೆ.
ಕಾಂಗ್ರೆಸ್ ಪಾಲಿಗೆ ವಿಧಾನಭಾದ್ಯಕ್ಷ ಸ್ಥಾನ ಹೊರತುಪಡಿಸಿ 13 ಸಚಿವ ಸ್ಥಾನಗಳು ಲಭಿಸಿವೆ. ಇದರಲ್ಲಿ ಎರಡು ಸ್ಥಾನಗಳು ಈಗಾಗಲೇ ಭರ್ತಿಗೊಂಡಿದ್ದು, ಬಾಳಾ ಸಾಹೇಬ್ ಥೋರಟ್ ಮತ್ತು ನಿತಿನ್ ರಾವತ್ ಅವರು ಈಗಾಗಲೇ ಸಚಿವ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಮಾಜೀ ಮುಖ್ಯಂತ್ರಿ ಅಶೋಕ್ ಚವ್ಹಾಣ್ ಮತ್ತು ಅಮಿತ್ ದೇಶ್ ಮುಖ್ ಅವರ ಹೆಸರುಗಳನ್ನು ಪಕ್ಷವು ಈಗಾಗಲೇ ಅಂತಿಮಗೊಳಿಸಿದ್ದು ಇನ್ನುಳಿದ 09 ಸಚಿವ ಸ್ಥಾನಗಳಿಗೆ ಕಾಂಗ್ರೆಸ್ ಶಾಸಕರ ಹೆಸರುಗಳನ್ನು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಅಂತಿಮಗೊಳಿಸಬೇಕಿದೆ.
ಇನ್ನು ಶಿವಸೇನೆಯ ಕಡೆಯಿಂದ ಪ್ರಕಾಶ್ ಅಬಿಟ್ಕರ್, ಗುಲಾಬ್ ಪಾಟೀಲ್, ದಾದಾ ಭಿಸೆ, ಉದಯ್ ಸಾಮಂತ್, ಬಚ್ಚು ಕಡು, ಸಂಜಯ್ ರಾಥೋಡ್ ಮತ್ತು ಅಬ್ದುಲ್ ಸತ್ತಾರ್ ಅವರ ಹೆಸರುಗಳು ಸಚಿವ ಸ್ಥಾನಗಳಿಗೆ ಅಂತಿಮಗೊಂಡಿವೆ.