ಉಡುಪಿ: ಕರ್ನಾಟಕ ನೌಕಾ ಘಟಕ ಎನ್‌ಸಿಸಿ ಮಂಗಳೂರು ವತಿಯಿಂದ ಉಡುಪಿಯ ಸಿಲಾಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನೇವಲ್ ವಿಂಗ್ ಎನ್‌ಸಿಸಿ ಕೆಡೆಟ್‌ಗಳಿಗೆ 10 ದಿನಗಳ ವಾರ್ಷಿಕ ತರಬೇತಿ ಶಿಬಿರ ನಡೆಸಲಾಯಿತು.
ದ.ಕ.ಜಿಲ್ಲೆಗಳ ವಿವಿಧ ಸಂಸ್ಥೆಗಳ ಒಟ್ಟು 220 ಕೆಡೆಟ್‌ಗಳು ಮತ್ತು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಇತರ 5 ನೇವಲ್ ಎನ್‌ಸಿಸಿ ಘಟಕಗಳು, ಬೆಂಗಳೂರು, ಮೈಸೂರು, ಕಾರವಾರ, ಗೋವಾ ಮತ್ತು ಉಡುಪಿಯ ಕೆಡೆಟ್‌ಗಳು ಭಾಗವಹಿಸಿದ್ದರು.
ಎಐಎನ್‌ಎಸ್‌ಸಿ-23 ಗಾಗಿ ನಿರ್ದಿಷ್ಟ ತರಬೇತಿ ಪಡೆದ 79 ಕೆಡೆಟ್‌ಗಳನ್ನು ಒಳಗೊಂಡ ಶಿಬಿರದಲ್ಲಿ ಒಟ್ಟು 220 ಹಿರಿಯ ಮತ್ತು ಜೂನಿಯರ್ ವಿಭಾಗದ ಕೆಡೆಟ್‌ಗಳು ಭಾಗವಹಿಸಿದ್ದರು.
ಕೆಡೆಟ್‌ಗಳಿಗೆ ವಿವಿಧ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಮಾಜಿಕ ಸೇವೆ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಸಾಗರ್ ಅಭಿಯಾನ, ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು ಮತ್ತು ಶುದ್ಧ ಜಲಮೂಲಗಳ ಸಾರ್ವತ್ರಿಕ ಗುರಿಯನ್ನು ಸಾಧಿಸುವ ಜಾಗೃತಿ ಅಭಿಯಾನವನ್ನು ಮಲ್ಪೆ ಬೀಚ್‌ನಲ್ಲಿ ನಡೆಸಲಾಯಿತು.
ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ, ಉಡುಪಿಯ ಅಗ್ನಿಶಾಮಕ ಇಲಾಖೆ ನಡೆಸಿದ ಅಗ್ನಿಶಾಮಕ ಕವಾಯತುಗಳ ಕುರಿತು ಉಪನ್ಯಾಸ ಮತ್ತು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಯಿತು. ಸಮಾರೋಪದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನಿಸಲಾಯಿತು.
ಸಿಲಾಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ ಜೆಸಿಂತಾ ಡಿ’ಕೋಸ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಿಸಿದರು. ಒಟ್ಟಾರೆ ಅತ್ಯುತ್ತಮ ತಂಡ ರೋಲಿಂಗ್ ಟ್ರೋಫಿಯನ್ನು ಆಲ್ಫಾ ತಂಡ ಮತ್ತು ರನ್ನರ್ಸ್ ಅಪ್ ರೋಲಿಂಗ್ ಟ್ರೋಫಿಯನ್ನು ಡೆಲ್ಟಾ ತಂಡವು ಗೆದ್ದುಕೊಂಡಿತು.
ಕರ್ನಾಟಕ ನೌಕಾ ಘಟಕ ಎನ್‌ಸಿಸಿ ಮಂಗಳೂರು ಶಿಬಿರದ ಕ್ಯಾಂಪ್ ಕಮಾಂಡೆಂಟ್ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್, ಕರ್ನಾಟಕ ನೌಕಾ ಘಟಕ ಎನ್‌ಸಿಸಿ ಉಡುಪಿಯ ಡೆಪ್ಯೂಟಿ ಕ್ಯಾಂಪ್ ಕಮಾಂಡೆಂಟ್ ಕಮಾಂಡರ್ ಕಾರ್ತಿಕ್ ದಾಸ್ ಅವರ ನೇತೃತ್ವದಲ್ಲಿ ಈ ಶಿಬಿರ ನಡೆಯಿತು.