ಬೆಂಗಳೂರು: ಹಿಂದುಳಿದ ವರ್ಗಗಳ ಕೋಟಾದಲ್ಲಿ ಮುಸ್ಲಿಮರಿಗೆ ಮೀಸಲು ಹಂಚಿಕೆ ವಿಚಾರ ಕೇಂದ್ರ ಹಾಗೂ ರಾಜ್ಯ ಸರಕಾರದ ಮಧ್ಯೆ ವಿವಾದ ಭುಗಿಲೇಳುವ ವಾತಾವರಣ ಸೃಷ್ಟಿಸಿದ್ದು, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲು ಮುಂದಾಗಿದೆ.
ಆಯೋಗ ಕೇಳಿದ ಎಲ್ಲ ಪ್ರಶ್ನೆಗಳಿಗೆ ಕರ್ನಾಟಕ ಸರಕಾರ ಸಮರ್ಪಕವಾಗಿ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಹನ್ಸ್‌ರಾಜ್ ಗಂಗಾರಾಮ್ ಅಹಿರ್ ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ನೋಟಿಸ್ ನೀಡಲು ನಿರ್ಧರಿಸಿರುವ ಬಗ್ಗೆ ಆಯೋಗದ ಮೂಲಗಳು ಮಾಹಿತಿ ಅನುಸಾರ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ.
ಆಯೋಗದ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರಕಾರ ಆಯೋಗದ ಜತೆಗೆ ಪತ್ರ ವ್ಯವಹಾರ ನಡೆಸಿದ್ದು, 2ಬಿಯಲ್ಲಿ ಮುಸ್ಲಿಮರಿಗೆ ಮೀಸಲು ಸೌಲಭ್ಯ ಕಲ್ಪಿಸಿರುವುದನ್ನು ಸಮರ್ಥಿಸಿಕೊಂಡಿದೆ. ಈ ಪತ್ರದಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರನ್ನು ಜಾತಿ ಅಥವಾ ಧರ್ಮ ಎಂದು ಪರಿಗಣಿಸದೆ, ಈ ಹಿಂದಿನ ಹಲವು ಆಯೋಗಗಳ ಶಿಫಾರಸಿನ ಅನ್ವಯ ಹಿಂದುಳಿದ ವರ್ಗ ಎಂದೇ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಆಯೋಗ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರಕಾರದಿಂದ ಸ್ಪಷ್ಟನೆ ಕೋರಿದೆ.
ಸ್ಪಷ್ಟನೆ:
ಆದರೆ ಮುಖ್ಯಮಂತ್ರಿ ಕಚೇರಿ ಮೂಲಗಳು ಇಂಥ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ. ಆಯೋಗದ ಜತೆಗೆ ರಾಜ್ಯ ಸರಕಾರ ಯಾವುದೇ ಪತ್ರ ವ್ಯವಹಾರ, ಶಿಫಾರಸು ಅಥವಾ ಅಭಿಪ್ರಾಯ ವಿನಿಮಯ ನಡೆಸಿಲ್ಲ. ಹೀಗಾಗಿ ಆಯೋಗದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿವೆ.
1977ರಿಂದಲೂ ಮುಸಲ್ಮಾನರಿಗೆ ಒಬಿಸಿ ಪಟ್ಟಿಯಲ್ಲಿ ಮೀಸಲು ಸೌಲಭ್ಯ ನೀಡಲಾಗುತ್ತಿದೆ ಎಂಬುದು ಸತ್ಯ ಎಂದು ಸ್ಪಷ್ಟಪಡಿಸಲಾಗಿದೆ.